ನ್ಯೂಸ್

ವಾರ ಭವಿಷ್ಯ: ಈ ರಾಶಿಯವರು ಸಮಯಪ್ರಜ್ಞೆ ಇದ್ದರೆ ಏನನ್ನಾದರೂ ಪಡೆದುಕೊಳ್ಳಬಹುದು

ಮೇಷ: ಪ್ರತಿ ಸಂವತ್ಸರ ಮಾಘ ಮಾಸದಿಂದ ಪಂಚಮಾಸಗಳು ಉತ್ತರಾಯಣದಿಂದ ಕೂಡಿ ಅತ್ಯುತ್ತಮ ಮುಹೂರ್ತಗಳು. ಹೊಸ ಮನೆ ಪ್ರವೇಶ, ಹೆಣ್ಣು ಮಕ್ಕಳಿಗೆ ಸಿರಿವಂತ ಮನೆ ಸೇರುವ ಭಾಗ್ಯ ಶುಭ ಸಂಕೇತಗಳು. ಹಲವರಿಗೆ ಸಂತೋಷ, ಕೆಲವರಿಗೆ ಸ್ಥಾನಮಾನ ಇನ್ನು ಕೆಲವರಿಗೆ ಆರೋಗ್ಯದ ಸೂಚನೆಗಳು ಈ ರಾಶಿಗೆ ಇವೆ. ಸಮಯಪ್ರಜ್ಞೆ ಇದ್ದರೆ ಏನನ್ನೂ ಪಡೆದುಕೊಳ್ಳಬಹುದಾದ ಕಾಲ.

ವೃಷಭ: ಲಲಿತಾ ಸಹಸ್ರ ನಾಮ ಪಾರಾಯಣಕ್ಕೆ ಮಹತ್ವವಿದೆ. ಇದನ್ನು ಮನುಷ್ಯನ ಸಾಧನೆಗಾಗಿ ಶ್ರುತಿ ಸ್ಮೃ ಪುರಾಣಗಳಲ್ಲಿ ಹೇಳಿದ್ದಾರೆ. ಈಗಾಗಲೇ 11ನೇ ಮನೆಯಲ್ಲಿ ಶನಿ ಬಂದು ಸೇರಿ ರಾಹು ಸಂಯುಕ್ತನಾಗಿರುವುದರಿಂದ ರಾಷ್ಟ್ರದಲ್ಲಿ ಯುದ್ಧಭೀತಿ ಹಾಗೂ ವೃಷಭ ರಾಶಿಯವರಿಗೆ ಅವರನ್ನು ಅವರೇ ಬದಲಿಸಿಕೊಳ್ಳುವ ಕಾಲ ಬಂದಿದೆ. ವಿವೇಚನೆಯಿಂದ ಉಪಯೋಗಿಸಿಕೊಂಡರೆ ಆನೆಯ ಬಲವು ಸಿಂಹ ಘರ್ಜನೆಯನ್ನು ಮಾಡಬಹುದು.

ಮಿಥುನ: ಮಿಥುನ ರಾಶಿಯ ನೀವು ಸುಧಾರಿಸಿಕೊಳ್ಳುವ ಕಾಲವು ಮೇ 13ರ ನಂತರ ಬರುತ್ತದೆ. ದೇವರಲ್ಲಿ ಅಪಾರ ನಂಬಿಕೆ ಇರಬೇಕು. ಹಿರಿಯರನ್ನು ಗೌರವಿಸಬೇಕು. ಪುಣ್ಯಶಾಲಿಗಳಾಗಿ ಬದುಕಬೇಕಾದರೆ ಪುಣ್ಯವಂತರನ್ನು ಮಹಾತ್ಮರನ್ನು ದರ್ಶಿಸಬೇಕು. ಶುಭವಾಗಲಿ.

ಕಟಕ: ಜಲರಾಶಿ ಎಂದೇ ಕರೆಯಲ್ಪಡುವ ಈ ರಾಶಿಗೆ ಏಕಾದಶದಲ್ಲಿರುವ ಗುರು 9 ರ ಶನಿಯು ಅತ್ಯಂತ ಲಾಭದಾಯಕ ಕಾಲವನ್ನು ಸೂಚಿಸುತ್ತಾನೆ. ಪಾರ್ವತಿ ಪರಮೇಶ್ವರನನ್ನು ಪ್ರದೋಷ ಕಾಲದಲ್ಲಿ ಪೂಜಿಸಿ. ಮನಸ್ಸಿಗೆ ಶಾಂತಿಯು ದೇಹಕ್ಕೆ ಆರೋಗ್ಯವು ಕಣ್ಣಿಗೆ ದೈವ ದರ್ಶನದ ಲಾಭವಿದೆ. ಶಿವನನ್ನೇ ಶಿರಸ್ಸಿನಲ್ಲಿ ಧರಿಸಿಕೊಂಡು ಏನನ್ನು ಬೇಕಾದರೂ ಸಾಧಿಸಬಹುದು.

ಸಿಂಹ: ಏಕಾದಶಕ್ಕೆ ಗುರುವು ಬರಲಿದ್ದಾನೆ. ಸಮುದ್ರ ಹುಟ್ಟುವುದಾಗಲಿ ಸಮುದ್ರದ ಕೊನೆಯಾಗಲಿ ಯಾರೂ ನೋಡಿಲ್ಲ. ಆ ತತ್ವದಲ್ಲಿ ಸಿಂಹ ರಾಶಿಯವರು ಗರ್ಜಿಸಿದರೆ ದರ್ಪ, ದುಡ್ಡು ಸೇರಿದೆ ಎಂದು ಅರ್ಥವಾಗುತ್ತದೆ. ಸೂರ್ಯನ ಪ್ರಾರ್ಥನೆ ಇರಲಿ. ಗುರುವು ಪೂಜೆಯ ಫಲವನ್ನು ನಿಮಗೆ ನೀಡುತ್ತಾನೆ.

ಕನ್ಯಾ: ಸಿಟ್ಟು ಕತ್ತೆಯಾಗಿ ಗರ್ವವೂ ಆನೆಯಾಗಿ ಎರಡು ಸರೋವರಗಳ ಜಲ ಮನುಷ್ಯನ ದಾಹವನ್ನು ನೀಗಿಸದಿದ್ದರೆ ಏನು ಪ್ರಯೋಜನ ಎಂದು ದೈವವೇ ಹೇಳುತ್ತದೆ. ನಿಮಗೆ ಆರರ ಶನಿಯು ಬೇಕಾದ್ದೆಲ್ಲ ಕೊಟ್ಟಿರುತ್ತಾನೆ. ಈಗ ಸಪ್ತಮಕ್ಕೆ ಬಂದಿರುವುದರಿಂದ ಆರೋಗ್ಯವೇ ಪ್ರಧಾನವಾಗಲಿ. ಕೇವಲ 10 ದಿನಗಳು ಮಾತ್ರ ಗುರುವಿರುವುದರಿಂದ ನಿಮ್ಮ ಕಾರ್ಯ ಸಾಧನೆಗೆ ಸಂದರ್ಭಗಳು ಚೆನ್ನಾಗಿದೆ. ಮೃತ್ಯುಂಜಯನನ್ನು ಪ್ರಾರ್ಥಿಸಿ. ಸರ್ವರೋಗ ಪ್ರಶಮನಂ ಎಂಬ ವಾಕ್ಯದಿಂದ ಚಂಡಿಪಾರಾಯಣವನ್ನು ಮಾಡಿಸಿ. ನಿಮ್ಮ ದುಃಖ ದುಮ್ಮಾನಗಳು ದೂರವಾಗಿ ಸ್ಥಿರವಾದ ಆರೋಗ್ಯವು ಲಭಿಸುತ್ತದೆ.

ತುಲಾ: ಆಕಾಶಕ್ಕೆ ಏಣಿಬೇಕಿಲ್ಲ. ಭೂಮಿಯಲ್ಲಿ ನಡೆಯಲು ಕಾಲಿನಲ್ಲಿ ಶಕ್ತಿಯೊಂದಿದ್ದರೆ ಆನೆಯ ಬಲವೇ ಇದ್ದಂತೆ. ಯಾವುದಕ್ಕೂ ಭಯಬೇಡ. ಬುದ್ಧಿ ಬಲ, ಗ್ರಹ ಬಲ, ಯೋಗ ಬಲ, ಜ್ಞಾನ ಬಲ, ಇಚ್ಛಾಬಲ ಎಲ್ಲ ಬಲಗಳು ನಿಮ್ಮನ್ನು ಕೂಡಿದೆ. ವಾಲ್ಮೀಕಿ ಮಹರ್ಷಿಗಳು ಬಲಾಬಲ ಎಂಬ ಎರಡು ವಿಶೇಷವಾದ ಕಾಣಿಕೆಯನ್ನು ರಾಮನಿಗೆ ನೀಡಿ ಅತಿ ಹಸಿವು, ಬಾಯಾರಿಕೆಗಳು ಆಗದಿರಲಿ ಎಂದು ಕೊಟ್ಟ ವರವನ್ನು ನಿಮಗೂ ದೇವರು ಕೊಟ್ಟಿದ್ದಾನೆ. ಸುಖ ಪಡಿ. ಉಪಕಾರಿಗಳಾಗಿ ಬದುಕಿರಿ.

ವೃಶ್ಚಿಕ: ವೃಶ್ಚಿಕ ರಾಶಿಗೆ ಬೇಕಾದದ್ದು ಸಮನ್ವಯ ಸೇರಿದ ಜ್ಞಾನವಿಜ್ಞಾನ ಶಕ್ತಿ. ದುಡ್ಡನ್ನು ತರಬಹುದಾದ ಸಮಯ. ಚಿಂತೆಯು ಬೇಕಿಲ್ಲ. ನಿಮಗೆ ಸ್ವಶಕ್ತಿ, ಸಮೃದ್ಧಿ ದೈವಶಕ್ತಿಯು ತುಂಬಿದರೆ ಏನನ್ನೂ ದಾಟಿ ಕೊಡುವವರಿಗೆ ಕೊಟ್ಟು, ಬಿಡುವವರಿಗೆ ಬಿಟ್ಟು ಸಂತೋಷದ ಕಾಲವನ್ನು ನೀವು ನೋಡಬಹುದು.

ಧನುಸ್ಸು: ದೈವಬಲ, ಧನಬಲವು ಇದ್ದು ಗುರುವು ಶನಿಯು ಸಂಯುಕ್ತನಾಗಿ ಗಿರಿ ಮನೆಯಲ್ಲಿ ಇರುವುದರಿಂದ ಗುರು ಬಲ, ಶನಿ ಬೆಲ್ಲ ಕೊಟ್ಟು ನಿಮ್ಮನ್ನು ಉತ್ತುಂಗದಲ್ಲಿ ಕೂರಿಸಲಿದ್ದಾರೆ. ನೀವು ನಿಮ್ಮಕೀರ್ತಿ ಪತಾಕೆಯನ್ನು ಗಾಳಿಪಟದಂತೆ ಆಕಾಶವನ್ನು ಮುಟ್ಟಿಸಿ ಬರಬಹುದು. ಸದಾ ದೈವಭಕ್ತರಾಗಿ ಬದುಕಿದ್ದರೆ ಏನನ್ನು ಬೇಕಾದರೂ ಪಡೆದುಕೊಳ್ಳಬಹುದು.

ಮಕರ: ಕನ್ನಡಿಯಲ್ಲಿ ನಮ್ಮ ಮುಖವನ್ನು ನೋಡಿಕೊಂಡಾಗ ಸುಂದರವೋ ಕುರೂಪವೋ ಎಂದು ಅರ್ಥವಾಗುತ್ತದೆ. ಮುಖದಲ್ಲಿ ನಗುವಿರಲಿ. ಬೇಕಾದ್ದನ್ನು ಪಡೆದು ಅತ್ಯಂತ ಸುಖವನ್ನು ಪಡೆಯುವ ಕಾಲವಿದು. ದೈವ ಬಲವಿದೆ. ಬುದ್ಧಿ ಬಲವೂ ಇದೆ. ದೈವಬಲವನ್ನು ಹೆಚ್ಚಿಸಿಕೊಳ್ಳುವುದು ಮನುಷ್ಯನ ಸಂಕಲ್ಪದಲ್ಲಿದೆ.

ಕುಂಭ:  ಕುಂಭ ರಾಶಿಯಲ್ಲಿ ಜನಿಸಿದವರಿಗೆ ಮುಖದಲ್ಲಿ ಕಬ್ಬಿಣ, ಉಷ್ಣತೆ ಯಲ್ಲಿ ಕಬ್ಬಿಣ, ನೀರಿನಲ್ಲಿ ಕಬ್ಬಿಣ ಇದ್ದಾಗ ತಾಪ ಕಳೆಯುತ್ತದೆ. ಆದ್ದ ರಿಂದ ನಾವು ನಮ್ಮ ಪಾಪವನ್ನು ಕಳೆದುಕೊಂಡು ಸುಖವನ್ನು, ಶಾಂತಿಯನ್ನು ಪಡೆಯುವ ಸಮಯ. ಹಾವೇರಿಯ ಶೇಷಾಚಲ ಮಹಾರಾಜರನ್ನು ಸಂದರ್ಶಿಸಿ, ತೊಟ್ಟಿಲ ಸೇವೆ ಮಾಡಿ ಬನ್ನಿ.

ಮೀನ: ಈ ರಾಷ್ಟ್ರದ ಹೆಣ್ಣು ಮಕ್ಕಳು ಪ್ರಭಾವಶಾಲಿಗಳು. ಹಣ್ಣನ್ನು ತಿನ್ನುತ್ತಾರೆ ಹಣವನ್ನು ಸಂಪಾದಿಸುತ್ತಾರೆ. ಹೆಣ್ಣಿನ ದೃಷ್ಟಿ ಬಿದ್ದರೆ ರಾವಣನಂತೆ ಸಾವನ್ನಪ್ಪುತ್ತಾರೆ. ಅದರಿಂದ ಶನಿಯ ಸಂಚಾರದಲ್ಲಿ ವಿಷಾದವನ್ನು ಪಡದೆ ಸಂತೃಪ್ತರಾಗಿ ದೇವರನ್ನು ಪ್ರಾರ್ಥಿಸಿ. ದೈವಶಕ್ತಿಯಿಂದ ನಿಮ್ಮನ್ನು ನೀವು ಕಾಪಾಡಿಕೊಂಡರೆ ದುಃಖವು ಸುಖವಾಗಿ ಪರಿಣಮಿಸುತ್ತದೆ. ಭಗವದ್ಗೀತೆಯ 11ನೇ ಅಧ್ಯಾಯವನ್ನು ಪಾರಾಯಣ ಮಾಡಿ.