ಮೇಷ: ಸೂರ್ಯನು ಶುಕ್ರನ ಮನೆಯಲ್ಲಿದ್ದು, ಶನಿ ಉಚ್ಚ ರಾಶಿಯಲ್ಲಿ ಇರುವುದರಿಂದ ಹಿತ-ಅಹಿತ ಎರಡು ಉಂಟಾಗಬಹುದು. ಕೆಲಸದಲ್ಲಿ ಒತ್ತಡ ಇರುತ್ತದೆ. ಕೆಲಸದಲ್ಲಿ ತಪ್ಪು ಮಾಡದಿರಲು ಸೂರ್ಯನ ಪ್ರಾರ್ಥನೆ ಮಾಡಿ. ನಿನ್ನೆ (ಅ. 18) ಗುರು ಬದಲಾವಣೆಯಾಗಿ ಕಟಕ ರಾಶಿಗೆ ಬಂದಿದ್ದಾನೆ. ಚತುರ್ಥ ಗುರು ಕಟಕ ರಾಶಿಯಲ್ಲಿ ಉಚ್ಚ ಸ್ಥಾನದಲ್ಲಿದ್ದು, ಸಮಾಧಾನ ವನ್ನು, ಬೆವರು ಸುರಿಸಿ ಕಷ್ಟಪಟ್ಟರೆ ವಿಶೇಷ ಫಲವನ್ನು ನೀಡುತ್ತಾನೆ. ಸಪ್ತಮದಲ್ಲಿ ಕುಜನಿದ್ದು, ಸುಬ್ರಹ್ಮಣ್ಯ ದೇವರಿಗೆ ಶರಣು ಹೋಗಬೇಕು.
ವೃಷಭ: ಈ ರಾಶಿಗೆ ಗುರುವು 3ನೇ ಸ್ಥಾನಕ್ಕೆ ಬಂದುದರಿಂದ ಲಾಭದಾಯಕನಾಗಿದ್ದಾನೆ,. ಏನೇನು ಪುಣ್ಯ ಕೆಲಸಗಳನ್ನು ಮಾಡಿದಿರೋ ಅದನ್ನು ಅರಿತುಕೊಂಡು ನಡೆಯಬೇಕು. ನೀವು ಮಾಡಿದ ತಪ್ಪನ್ನು ನೆನೆದು ಮತ್ತೊಮ್ಮೆ ಮಾಡದ ಹಾಗೆ ದೂರವಿರಬೇಕು. ಯಾರಿಗೂ ಕೇಡನ್ನು ಬಯಸಬಾರದು. ಶ್ರೀ ಚಕ್ರದಲ್ಲಿ ನವಬಿಂದು ಸೇರಿದ್ದು, ಅದನ್ನು ಪೂಜಿಸಿದರೆ ಒಳ್ಳೆಯದು. ಚಕ್ರಾರ್ಚನೆ ಮಾಡಿ. ಲಲಿತಾಸಹಸ್ರನಾಮದಿಂದ ಕುಂಕುಮಾರ್ಚನೆ ಮಾಡಿಸಿದರೆ ಒಳ್ಳೆಯದಾಗುತ್ತದೆ.
ಮಿಥುನ: ರಾಶ್ಯಾಧಿಪತಿ ಬುಧನು ತುಲಾರಾಶಿಯಲ್ಲಿದ್ದು, ಗುರು ಉಚ್ಚ ರಾಶಿಯಾದ ಕಟಕಕ್ಕೆ ಬಂದು, ಮಿಥುನ ರಾಶಿಯಲ್ಲಿ ಜನಿಸಿದವರಿಗೆ ಒಳ್ಳೆಯ ಫಲವನ್ನೇ ಕೊಡುತ್ತಾನೆ. ತೆಂಗಿನ ಮರಕ್ಕೆ ಒಳ್ಳೆಯ ನೀರು, ಗೊಬ್ಬರ ಹಾಕಿದರೆ ಪೂರ್ಣ ಫಲವೇ ನಮ್ಮ ಕೈಸೇರುತ್ತದೆ. ನೀವು ನಿತ್ಯವೂ ದೈವವೆಂಬ ಹೂದೋಟದಲ್ಲಿ ಭಕ್ತಿ ಎಂಬ ನೀರನ್ನು ಹಾಕಿದರೆ ಹೆಚ್ಚಿನ ಫಲವನ್ನು ಪಡೆಯುವಿರಿ.
ಕಟಕ: ಈ ರಾಶಿಯವರಿಗೆ ಗುರು ದ್ವಾದಶ ಬಿಟ್ಟಿರುವುದು ಪರಮಾತ್ಮನೇ ಒಳ್ಳೆಯ ಫಲ ನೀಡಿದ್ದಾನೆಂದು ತಿಳಿಯಬೇಕು. ನಿಮ್ಮ ಜನ್ಮಾಂತರದ ಕರ್ಮ ಫಲಗಳು ನಿಮ್ಮ ಹಿಂದೆಯೇ ಇರುತ್ತವೆ. ಆದರೂ ಕಟಕ ರಾಶಿಗೆ ಗುರು ಉಚ್ಚನಾಗಿದ್ದು, ನಿಮ್ಮ ಗುರುಗಳು, ಈಶ್ವರ ಸ್ವರೂಪ ಮಾತಾಪಿತರನ್ನು ವಂದಿಸಿದರೆ ಗುರುವೇ ದುಷ್ಟಾಕ್ಷರಗಳನ್ನು ಅಳಿಸಿ ಶುಭಾಕ್ಷರಗಳನ್ನು ಬರೆಯುತ್ತಾನೆ.
ಸಿಂಹ: ರಾಶ್ಯಾಧಿಪತಿಯು ಸಿಂಹ ರಾಶಿಗೆ 3ನೇ ಮನೆಯಲ್ಲಿದ್ದು, ಸರ್ವ ಬಾಧೆ ಕಡಿಮೆ ಮಾಡುವ ಸಪ್ತಾಶ್ವಾರೂಡ ಅರುಣನೇ ಮಹಾನ್ದೇವತೆಯು. ನಿಮ್ಮನ್ನು ಬಿಳಿಯ ಕುದುರೆಯ ಮೇಲೆ ಕೂರಿಸಿ ಯೋಗವನ್ನು ಕೊಡುತ್ತಾನೆ. ಸೂರ್ಯಾಷ್ಟೋತ್ತರ ಪಠಿಸಿ. ಇಚ್ಛಿತ ಫಲಗಳು ದೊರೆಯುತ್ತವೆ.
ಕನ್ಯಾ: ಸೂರ್ಯನು ತುಲಾ ರಾಶಿಗೆ ಬಂದು ಲಗ್ನಕ್ಕೆ ಏಕಾದಶಕ್ಕೆ ಗುರುವು ಬಂದಿದ್ದಾನೆ. ವಿಶೇಷ ಪುಣ್ಯ ಕೊಡುತ್ತಾನೆ. ‘ಅನಂತಶಯನ ಪೂಜನಂ ಸರ್ವಸಿದ್ಧಿ ದಾಯಕಂ’. ಸಾಕ್ಷಾತ್ ನಾರಾಯಣನನ್ನು ಪೂಜಿಸಿ, ಷೋಡಷೋಪಚಾರದಿಂದ ಅರ್ಚಿಸಿ ಸುಖವನ್ನು ಕಂಡುಕೊಳ್ಳಿ.
ತುಲಾ: ಗುರುವು ನವಮದೊಂದಿಗೆ ದಶಮಕ್ಕೆ ನಡೆದಿದ್ದಾನೆ. ಗುರುವು 10ರಲ್ಲಿದ್ದರೂ, ಉಚ್ಚ ರಾಶಿಯಾದ ಕಟಕ ರಾಶಿಯಲ್ಲಿರುವುದರಿಂದ ಶುಭ ಫಲವನ್ನೇ ನೀಡುತ್ತಾನೆ. ದುರ್ಗೆಯನ್ನು, ಸೂರ್ಯ ನಾರಾಯಣನನ್ನು ಏಕಕಾಲದಲ್ಲಿ ಪೂಜಿಸಿ, ಪ್ರಾರ್ಥಿಸಿ. ರಾಶಿಗೆ ಸೂರ್ಯನು ಬಂದಿದ್ದು,ಬಾಳಿನಲ್ಲಿ ಹೊಸ ಬೆಳಕನ್ನು ಕಾಣುತ್ತೀರಿ.
ವೃಶ್ಚಿಕ: 9ರಲ್ಲಿ ಗುರು ಉಚ್ಚ ರಾಶಿಗೆ ಬಂದು ಸೇರಿರುವುದು ನಿಮ್ಮ ಪೂರ್ವಾರ್ಜಿತಫಲ ಹಾಗೂ ಹುಟ್ಟಿದ ಸಮಯ. ದೇವರು ನಂಬಿದವರನ್ನು ಕೈಬಿಡುವುದಿಲ್ಲ. ಪ್ರಾರಬ್ದವು ದೈವಶಕ್ತಿಯನ್ನು ಕಟ್ಟಿಹಾಕುವ ಸಾಮರ್ಥ್ಯವಿರುತ್ತದೆ. ದುಷ್ಟರಿಂದ ದೂರವಿದ್ದು, ಸತ್ಪುರುಷರ ಸಹವಾಸವನ್ನು ಮಾಡಿದರೆ ಸತ್ಕೀರ್ತಿಯನ್ನು ಪಡೆಯಬಹುದು.
ಧನಸ್ಸು: ಚತುರ್ಥದಲ್ಲಿ ಶನಿ ಇದ್ದು, ಗುರು ಅಷ್ಟಮಕ್ಕೆ ಸೇರಿರುವುದರಿಂದ ಈ ವಾರವು ನೀವು ಮಾಡುವ ಕೆಲಸಗಳು ತೃಪ್ತಿಕರವಾಗಿರುವುದಿಲ್ಲ. ಕೈಹಾಕಿದ ಕೆಲಸಗಳು ಮುಗಿಯದೆ ಆತಂಕವನ್ನು ಸೃಷ್ಟಿ ಮಾಡುತ್ತದೆ. ರಾಶ್ಯಾಧಿಪತಿ ಗುರು ಎಲ್ಲಿದ್ದರೂ ಒಮ್ಮೆ ಕೈಮುಗಿದು ಕಣ್ಮುಚ್ಚಿ ನೆನೆದರೆ ನಿಮ್ಮ ಕಾಲುಗಳು ಅವನ ಮಂದಿರಕ್ಕೆ ನಡೆದರೆ, ನಿಮ್ಮನ್ನು ಪುಣ್ಯ ಮಾರ್ಗದಲ್ಲಿ ನಡೆಸಿ, ಎಲ್ಲವನ್ನೂ ಸರಿಮಾಡಿಕೊಳ್ಳಬಹುದು.
ಮಕರ: ‘ಮುಕಾರವಿಂದಂ ಶೋಭಾಯಮಾನಂ ಶಶಿಧರಂ ಚಂದ್ರಕಾಂತಿಂ ನಮಾಮಿ ಸ್ಮರಣಂ ನಿತ್ಯಂ ಹಿರಿಜಾ ಸಮೇತ ಶ್ರೀಶಿವಂ’ ಹೆಣ್ಣು ಮಕ್ಕಳು ಕಣ್ಣಿಗೆ ಕಾಡಿಗೆ ಹಚ್ಚಿದರೆ ಸುಂದರವಾಗಿ ಕಾಣುತ್ತಾರೆ. ಗೌರಿಶಂಕರನು ತಲೆಯ ಮೇಲೆ ಗಂಗೆಯನ್ನು ಧರಿಸಿ ಕೈಲಾಸದಲ್ಲಿ ವಿರಾಜಿಸಿದ್ದಾನೆ. ನಿಮಗೆ ಎಲ್ಲವೂ ಲಭ್ಯವಾಗುವ ಕಾಲ. ಶನಿಯು ದ್ವಿತೀಯದಲ್ಲಿದ್ದು, ಗುರುವು ಸಪ್ತಮಕ್ಕೆ ಬಂದು ಸರ್ವಾಭಿಷ್ಟ ಸಿದ್ಧಿಸುತ್ತದೆ. ಶಿವಧ್ಯಾನ ಮಾಡಿ. ಸಂತೋಷ ಹೊಂದಿರಿ.
ಕುಂಭ: ಪೂರ್ವಾಭಾದ್ರ ನಾಲ್ಕನೇ ಚರಣಕ್ಕೆ ಶನಿಯು ವಕ್ರನಾಗಿ ರಾಹು ಸಂಯೋಗದಲ್ಲಿದ್ದಾನೆ. ಎಷ್ಟೇ ಕಷ್ಟ ಬಂದರೂ ಮನುಷ್ಯನು ಕ್ರೂರನಾಗ ಬಾರದು. ಗುರುವು ಷಷ್ಟವನ್ನು ಸೇರಿರುವುದರಿಂದ ಮನಸ್ಸು ಜಡ್ಡುಹಿಡಿದು ಉತ್ಸಾಹ ಕಡಿಮೆಯಾಗುತ್ತದೆ. ಇದಕ್ಕೆ ಪರಮೌಷಧ ದೈವವೇ. ನಾಗಭೂಷಣನನ್ನು ಪೂಜಿಸಿ. ಶಿವಾಷ್ಟೋತ್ತರ ಪಠಿಸಿ. ಹಾಲಾಹಲ ಕುಡಿದ ಶಿವನು ನಿಮ್ಮ ಕಷ್ಟವನ್ನು ನುಂಗುವುದರಲ್ಲಿ ಸಂದೇಹವಿಲ್ಲ.
ಮೀನ: ಪಂಚಮದಲ್ಲಿ ಗುರು ಕಟಕ ರಾಶಿಯಲ್ಲಿ ಇದ್ದಾನೆ. ಶನಿಯು ವಕ್ರನಾಗಿ ದ್ವಾದಶಕ್ಕೆ ಹೋಗಿದ್ದಾನೆ. ಗುರು ಬೇಕಾದ್ದನ್ನೆಲ್ಲಾ ಕೊಡುತ್ತಾನೆ. ಶನಿಯು ನಿಮ್ಮ ಪಾಪವನ್ನು ಕಳೆದು ಫಲ ಕೊಡಬಹುದು, ಕೊಡದೇ ಇರಲೂಬಹುದು. ಗುರುವನ್ನು ನಂಬಿ ನಡೆದರೆ ಗುರುಚರಣಕ್ಕೆ ಎರಗಿದರೆ ಯಾವ ಕಷ್ಟವೂ ಬಾರದು. ಇಚ್ಛಾಶಕ್ತಿ, ಕ್ರಿಯಾಶಕ್ತಿ, ಜ್ಞಾನಶಕ್ತಿ ಕೊಟ್ಟು ಮುನ್ನಡೆಸುತ್ತಾನೆ. ಮೃತ್ಯುಂಜಯನನ್ನು ಆರಾಧಿಸಿ.