ನ್ಯೂಸ್

ವಾರ ಭವಿಷ್ಯ; ಈ ರಾಶಿಯವರು ಶ್ರೀರಾಮಚಂದ್ರನನ್ನು ಪೂಜಿಸಿದರೆ ಧನ, ಸಂಪತ್ತು ನಿಮ್ಮದಾಗಿಸಿಕೊಳ್ಳಬಹುದು

ಸುದೀಪ್​ ವಿ.ಎನ್​

ಮೇಷ: ಜನ್ಮಜನ್ಮಾಂತರದ ಪುಣ್ಯದಿಂದ ಗುರುವು ತೃಪ್ತಿಯಾಗುವಷ್ಟು ಧನ, ಸ್ಥಾನಮಾನ ಕೊಟ್ಟಿದ್ದಾನೆ. ದೈವ, ಮಾತಾಪಿತೃಗಳ ಕೃಪೆಯಿಂದ ಎಲ್ಲವೂ ಬಂದು ಕೈಸೇರುತ್ತದೆ. ಏಕಾದಶದಲ್ಲಿರುವ ರಾಹು ಕೊಡುವುದನ್ನು ಕೊಟ್ಟು ಅಪವಾದ ತರುತ್ತಾನೆ. ಕಾರ್ಯವೈಖರಿಯಲ್ಲಿ ಎಚ್ಚರವಿರಲಿ. ಹೆಣ್ಣುಮಕ್ಕಳನ್ನು ದುರ್ಗೆ ಎಂದು ಭಾವಿಸಿ, ಪೂಜಿಸಿ.

ವೃಷಭ: ನಿರೀಕ್ಷೆ ಮೀರಿ ಯಾರ ಬಾಗಿಲನ್ನೂ ಕಾಯಬಾರದು. ಧೈರ್ಯವಿದ್ದರೆ ಬೇಕಾದ ಕೆಲಸ ಸಾಧಿಸಿಕೊಂಡು ಬರಬೇಕು. ಮಿಥುನ ಗುರು ಎಲ್ಲವನ್ನೂ ಕೊಡುತ್ತಾನೆ. ಆತ್ಮರಕ್ಷಣೆ ಹಾಗೂ ದೇಹರಕ್ಷಣೆಗಾಗಿ ಸೈನ್ಯ ಇರಬೇಕು. ಕುಂಭದಲ್ಲಿ ರಾಹು ಇದ್ದು ಭಾಗ್ಯಚಕ್ರ ನಿಮ್ಮ ಕಡೆ ತಿರುಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಚಂಡಿಕಾ ದುರ್ಗೆ ನಿಮ್ಮೊಂದಿಗಿದ್ದಾಳೆ.

ಮಿಥುನ: ಗುರು ಲಗ್ನದಲ್ಲಿದ್ದು, ದಶಮ ಶನಿಯು ಗುರು ಮನೆಯಲ್ಲಿ ಇರುವುದರಿಂದ ನಿಮಗೆ ಏನನ್ನು ಕೊಟ್ಟರೂ ‘ರಾವಣಾಸುರನಿಗೆ ನೀರುಮಜ್ಜಿಗೆ’ ಕೊಟ್ಟಂತೆ. ನಿಮ್ಮ ಸಂಕಟ ಅಧಿಕವಾಗಿದೆ, ಬಾಯಾರಿದೆ. ಶ್ರೀರಾಮಚಂದ್ರನನ್ನು ಪೂಜಿಸಿದರೆ ಧನ, ಸಂಪತ್ತು ನಿಮ್ಮದಾಗಿಸಿಕೊಳ್ಳಬಹುದು.

ಕಟಕ: ಗುರು ಬಲದಿಂದ ಎಲ್ಲವನ್ನೂ ದಾಟಿ ಬಂದಿದ್ದೀರಿ. ಈಗ ಬುಧನ ಮನೆಯಲ್ಲಿ ಗುರುವಿದ್ದಾನೆ. ಆದರೆ ನವಮ ಶನಿಯು ನಿಮ್ಮನ್ನು ರಕ್ಷಿಸುತ್ತಾನೆ. ಕೆಲಸ ಆಗದಿದ್ದರೂ ಬೇಡ. ಕೆಲಸಕ್ಕಾಗಿ ಒತ್ತಡ ತಂದುಕೊಂಡು ಆರೋಗ್ಯ ಹಾಳು ಮಾಡಿಕೊಳ್ಳಬಾರದು. ಧನ್ವಂತರಿಯನ್ನು ಪ್ರಾರ್ಥಿಸಿ. ಸುಂದರಕಾಂಡ, ಆದಿತ್ಯಹೃದಯ ಪಾರಾಯಣ ಮಾಡಿರಿ.

ಸಿಂಹ: ಗುರು ಏಕಾದಶದಲ್ಲಿದ್ದಾನೆ. ಅಷ್ಟಮ ಶನಿ ಇದ್ದಾನೆ. ರಾಹು ಸಪ್ತಮದಲ್ಲಿದ್ದಾನೆ. ಗುರು ಒಬ್ಬನೇ ನಿಮ್ಮನ್ನು ಆಕಾಶದೆತ್ತರಕ್ಕೆ ಮುಟ್ಟಿಸಿ ಕೀರ್ತಿ ಧ್ವಜ ಪತಾಕೆ ಹಾರಿಸುತ್ತಾನೆ. ಹಿಮಾಲಯದೆತ್ತರಕ್ಕೆ ನಿಮ್ಮನ್ನು ಬೆಳೆಸಿ ಎಲ್ಲ ಕಷ್ಟಗಳಿಂದ ಪಾರು ಮಾಡುತ್ತಾನೆ. ಅನನ್ಯವಾಗಿ ಷಣ್ಮುಖನನ್ನು ಪ್ರಾರ್ಥಿಸಿ.

ಕನ್ಯಾ: ಗುರುಬಲ, ಶನಿ ಬಲ ಇಲ್ಲ. ಸಪ್ತಮ ಶನಿ, ದಶಮ ಗುರು. ಸಂದಿಗ್ಧ ಸ್ಥಿತಿಯಲ್ಲೂ ಆರೋಗ್ಯ ಕಾಪಾಡಿಕೊಳ್ಳಿ. ಅದಕ್ಕೆ ಪೂರ್ವ ಪುಣ್ಯ ಇರಬೇಕು. ವ್ಯಾಧಿ ಬರಬಾರದೆಂದಿದ್ದರೆ ಪಿತೃಋಣ, ದೈವಋಣ ತೀರಿಸಿ. ಪ್ರತಿ ಸೋಮವಾರ ಪ್ರದೋಷ ಕಾಲದಲ್ಲಿ ಈಶ್ವರನನ್ನು ಪೂಜಿಸಿ.

ತುಲಾ: ತಕ್ಕಡಿಯನ್ನು ಬೆಳ್ಳಿ, ಕಬ್ಬಿಣ ಮತ್ತಿತರ ಲೋಹದಲ್ಲಿ ಮಾಡಿ ದವಸ ಧಾನ್ಯ, ಬೆಳ್ಳಿ- ಬಂಗಾರ, ವಜ್ರ ವೈಢೂರ್ಯ ತೂಗುತ್ತಾರೆ. ಯಾರಿಗೆ ಪೂರ್ವಾರ್ಜಿತ ಕರ್ಮಗಳಿಂದ ಅದೃಷ್ಟವಿದೆಯೋ ಅದು ಅವರಿಗೆ ಸೇರುತ್ತದೆ. ಮಾತಾಪಿತೃ ಅನುಗ್ರಹವಿದ್ದರೆ ದುಃಖವಿರದು. ಶ್ರದ್ಧೆಯಿಂದ ದುರ್ಗೆಯನ್ನು ಪೂಜಿಸಿ, ಯಾರೂ ನಿಮ್ಮನ್ನು ತಡೆಯಲಾಗದು.

ವೃಶ್ಚಿಕ: ಪಂಚಮ ಶನಿ, ಅಷ್ಟಮ ಗುರು ಬರುವುದು ಕಷ್ಟಗಳನ್ನು ತೋರಿಸಲು. ಜೀವನದ ಯುದ್ಧವನ್ನು ಗೆಲ್ಲುವುದೇ ಸಂಕಲ್ಪ ಆಗಿರಬೇಕು. ನಿಮ್ಮ ಸಮಸ್ಯೆ ದಾಟಲು ಆಗುವುದಿಲ್ಲ ಎಂದಾದರೂ ಪ್ರಯತ್ನ ಬಿಡಬಾರದು. ಜ್ಞಾಪಕ ಇರಲಿ, ಕುಲದೇವರ ಸಹಿತವಾಗಿ ಶಂಕುಲ ನಾಗ ದೇವರನ್ನು, ಪಳನಿ ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ. ಸಮಸ್ಯೆಗಳಿಂದ ಪಾರಾಗಿ ಸುಖವನ್ನು ಕಂಡುಕೊಳ್ಳಿ.

ಧನುಸ್ಸು: ಸಪ್ತಮ ಗುರುವು ಗೌರವ, ಕೀರ್ತಿ, ಆದರ, ವಾತ್ಸಲ್ಯ ಎಲ್ಲವನ್ನೂ ಕೊಡುವ ಕಾಲವಿದು. ಚತುರ್ಥ ಶನಿಯ ಪ್ರಾಬಲ್ಯದಲ್ಲಿ ಒಳ್ಳೆಯ, ನಿರೀಕ್ಷಿಸಿದ ಸ್ಥಾನ ಕೈಸೇರುವ ಸಮಯ. ಸದಾ ಕಾಲ ಭಗವದ್ ಭಕ್ತಿ ಇರಲಿ. ಕುಲದೇವರನ್ನು ನಿತ್ಯ ಪೂಜಿಸಿ, ಅವನ ಸ್ಮರಣೆಯಲ್ಲಿ ಮುಂದೆ ಸಾಗಿದರೆ ನಿಮಗೆ ಕೊಡಬೇಕಾದ್ದನ್ನು ಚಿನ್ನದ ತಟ್ಟೆಯಲ್ಲಿ ಇಟ್ಟು ಕೊಡುತ್ತಾನೆ.

ಮಕರ: ಪಂಚಮ ಗುರು ಮುಂದೆ ಸರಿದು ಆರನೇ ಮನೆಯಲ್ಲಿದ್ದಾನೆ. ಗುರುವಿಗೆ ಅದು ಒಳ್ಳೆಯ ಸ್ಥಾನವಲ್ಲ. ಸಣ್ಣ ಪುಟ್ಟ ವಿಚಾರಗಳ ಬಗ್ಗೆ ಯೋಚನೆ ಮಾಡದೆಗುರು ಸ್ತೋತ್ರ ಪಾರಾಯಣ ಮಾಡಿ. ದತ್ತಾತ್ರೇಯ ಗುರು ಚರಿತ್ರೆಯ 14ನೇ ಅಧ್ಯಾಯ ಪಾರಾಯಣ ಮಾಡಿ. ಜನ್ಮದಾತೆಯನ್ನು ಮನಸಾರೆ ಪೂಜಿಸಿ. ಕಷ್ಟಕಾರ್ಪಣ್ಯ ಇರುವುದಿಲ್ಲ. ಗುರು ನರಸಿಂಹನನ್ನು ಪ್ರಾರ್ಥಿಸಿ.

ಕುಂಭ: ಈ ರಾಶಿಗೆ ರಾಹು ಬಂದು ಸೇರಿದ್ದಾನೆ. ಶನಿ ಎರಡನೇ ಮನೆಯಲ್ಲಿದ್ದಾನೆ. ಬೆಳ್ಳಿಯ ನಾಗನಿಗೆ ಮನೆಯಲ್ಲಿ ಹಾಲು ಜೇನು ಸೇರಿಸಿ ಅಭಿಷೇಕ ಮಾಡಿ. ನಿಮ್ಮ ಚಿಂತೆಗಳನ್ನು ದೂರ ಮಾಡಿ ಅನುಗ್ರಹ ಮಾಡುತ್ತಾನೆ. ಕಡೆಯ ಭಾಗದ ಶನಿಗಾಗಿ ಪ್ರಾರ್ಥಿಸಿ, ನವಗ್ರಹ ಸ್ತೋತ್ರ ಪಠಿಸಿ.

ಮೀನ: ರಾಶ್ಯಾಧಿಪತಿ ಗುರು ಮಿಥುನದಲ್ಲಿ, ಶನಿಯು ಗುರುವಿನ ಮನೆಯಲ್ಲಿ ಇದ್ದಾರೆ. ಶನಿಯು ಮೀನ ರಾಶಿಯಲ್ಲಿರುವಾಗ ಪಾಪ ಗ್ರಹಗಳನ್ನು ತೃಪ್ತಿಪಡಿಸಬೇಕು. ಕರಿ ಬಟ್ಟೆಯಲ್ಲಿ ಎಳ್ಳನ್ನು ಸುತ್ತಿ ದಕ್ಷಿಣೆ ಸಹಿತ ಬ್ರಾಹ್ಮಣರಿಗೆ ದಾನ ಮಾಡಿ ಶುಭ ಫಲ ಕಂಡುಕೊಳ್ಳಿ. ದ್ವಾದಶದಲ್ಲಿ ರಾಹು ಇರುವಾಗ ಅನಗತ್ಯ ವಿಷಯದಲ್ಲಿ ಆಸಕ್ತಿ, ತರ್ಕ, ದ್ವಂದ್ವ ಮಾಡಿಕೊಳ್ಳಬೇಡಿ. ಪ್ರದೋಷ ಕಾಲದಲ್ಲಿ ಉಮಾಮಹೇಶ್ವರನನ್ನು ಪೂಜಿಸಿ.