ನ್ಯೂಸ್

ವಾರ ಭವಿಷ್ಯ: ಈ ರಾಶಿಯವರಿಗೆ ಬೇಕಾದ್ದೆಲ್ಲವೂ ಸಿಗುತ್ತದೆ

ಸುದೀಪ್​ ವಿ.ಎನ್​

ಮೇಷ: ಮೇಷ ರಾಶಿಗೆ ಗುರು ಗ್ರಹವು ಜುಲೈ 4ರ ವರೆಗೂ ಅಸ್ತಂಗತನಗಾಗಿದ್ದು, ಗ್ರಹ ಬಲವೂ ಪರಿಪೂರ್ಣ ವಾಗಿಲ್ಲ. ಆದರೆ ಗುರುಗಳ ಮೇಲೆ ದೃಢವಾದ ನಂಬಿಕೆ, ವಿಶ್ವಾಸ ಇದ್ದರೆ ಅಸ್ತಂಗತ ನಾಗಿರಲಿ, ವಕ್ರನಾಗಿರಲಿ, ಗುರುವು ಭಕ್ತರನ್ನು ರಕ್ಷಿಸುತ್ತಾನೆ ಎಂಬುದು ಗುರುಚರಿತ್ರೆಯಿಂದ ಸಾಬೀತಾಗಿದೆ. ಆದ್ದರಿಂದ ಸದ್ಯ ತಾವು ಗುರು ಚರಿತ್ರೆ ಪಾರಾಯಣ ಮಾಡಿ.

ವೃಷಭ: ಶುಕ್ರಾಧಿಪತ್ಯ ಹೊಂದಿರುವ ವೃಷಭ ರಾಶಿಗೆ ನೀವೇ ನಿಮ್ಮ ಕೈಯಾರೆ ಕಷ್ಟದಲ್ಲಿ ಸಿಲುಕಿಕೊಂಡು ತೊಳಲಾಡುವ ಸಮಯ ಸಾಗುತ್ತಿದೆ. ರಕ್ಷಿಸಲು ದೈವಸಹಾಯ ಅಗತ್ಯ. ಕೈ ಮೀರಿದ ಸನ್ನಿವೇಶಗಳು, ಹೆಸರಾಂತ ಕಪು್ಪ ಚುಕ್ಕಿ ಎಲ್ಲವು ನಡೆದು ಹೋಗುತ್ತದೆ. ಎಚ್ಚರವಾಗಿದ್ದು, ಸದ್ಯ ಮೌನವನ್ನು ಧರಿಸಿದರೆ ಕಾಲಬಂದಾಗ ದೇವರೇ ನಿಮಗೆ ಬಾಳಿನ ಬೆಳಕನ್ನು ತೋರುತ್ತಾನೆ. ದುರ್ಗಾಷ್ಟೋತ್ತರ ಪಠಿಸಿ. ನಿತ್ಯವೂ ದುರ್ಗೆಗೆ ಪಂಚದೀಪವನ್ನು ಬೆಳಗಿಸಿರಿ.

ಮಿಥುನ: ರವಿ- ಬುಧ- ಗುರುವು ಏಕಕಾಲದಲ್ಲಿ ಒಂದೇ ಮನೆಯಲ್ಲಿ ಇರುವುದು ಶುಭಸೂಚನೆ. ದಶಮದ ಶನಿ, 11ರ ಶುಕ್ರನು ಸಹಕರಿಸುತ್ತಾರೆ. ಬುದ್ದಿಜೀವಿಗಳು ಅನಗತ್ಯವಾಗಿ ಇನ್ನೊಬ್ಬರ ವಿಷಯವನ್ನು ಮಾತನಾಡಿ ತೊಂದರೆ ತಂದುಕೊಳ್ಳುವುದರಲ್ಲಿ ಅರ್ಥವಿಲ್ಲ. ಮಾತು ಅಗ್ನಿಯಂತೆ. ಆದ್ದರಿಂದ ಮೌನವಿರಲಿ. ಮಂತ್ರಾಲಯದಲ್ಲಿ ನೆಲೆಸಿರುವ ಗುರುರಾಯರನ್ನು ಪೂಜಿಸಿ ಬನ್ನಿ.

ಕಟಕ: ದ್ವಾದಶದಲ್ಲಿ ಮೂರು ಗ್ರಹಗಳು ಇದ್ದು, ದ್ವಿತೀಯದಲ್ಲಿ ಕುಜ- ಕೇತು ಸಂಯುಕ್ತರಾಗಿದ್ದಾರೆ, ಕಟಕ ರಾಶಿ ಶುದ್ಧವಾದ ಜಲರಾಶಿ, ಶುದ್ಧವಾದ ಜಲವನ್ನು ಮನುಷ್ಯರು ಕಲ್ಮಶ ಮಾಡುತ್ತಾರೆ. ಬಾಯಾರಿದಾಗಲೇ ಶುದ್ಧ ಜಲದ ಮಹಿಮೆ ತಿಳಿಯುವುದು. ಸದಾ ಈಶ್ವರನ ಧ್ಯಾನದಲ್ಲಿದ್ದರೆ, ನೀವು ಶುದ್ಧ ನೀರಿನಂತೆ ಬದುಕಬಹುದು. ಉಮಾಮಹೇಶ್ವರ ಭಕ್ತಿ ಕಥೆಯನ್ನು ಓದಿರಿ.

ಸಿಂಹ: ಕುಜ- ಕೇತು ಲಗ್ನದಲ್ಲಿ ಇದ್ದರೂ, 11ರ ಗುರು ಹಾಗೂ ಪೂರ್ವ ಪುಣ್ಯ ಹಾಗೂ ಪೂರ್ವಜರು ಮಾಡುವ ದಾನ ಧರ್ಮದ ಫಲ ನಿಮ್ಮನ್ನು ಬಂದು ಸೇರುತ್ತದೆ. ಗುರುಚರಿತ್ರೆಯಲ್ಲಿ ನಾಮಧಾರಕನು ದೇವರನ್ನು ಕಠಿಣ ಭಾಷೆಯಿಂದ ನನ್ನ ಪಿತೃಧನ ( ಪುಣ್ಯ) ಕೊಡು ಎಂದು ದೇವರನ್ನು ಕೇಳುವಂತೆ, ಮಘಾ ನಕ್ಷತ್ರವು ಪಿತೃ ನಕ್ಷತ್ರ ಆಗಿರುವುದರಿಂದ ತಂದೆ- ತಾಯಿಯನ್ನು ದೇವರಂತೆ ಪೂಜಿಸಿ ಬೇಕಾದ್ದೆಲ್ಲವೂ ಸಿಗುತ್ತದೆ. ಶ್ರೀರಾಮನ ಪ್ರಾರ್ಥನೆ ಸದಾ ಇರಲಿ.

ಕನ್ಯಾ: ಕನ್ಯಾ ಕುಮಾರಿಯಿಂದ ಕಾಶ್ಮೀರದವರೆಗೂ ಹಲವಾರು ಪುಣ್ಯಕ್ಷೇತ್ರಗಳಿವೆ. ‘ಕ’ ಅಕ್ಷರದಿಂದ ಶುರುವಾದ ಕನ್ಯೆಯಾಗಲಿ, ದ್ವಾದಶ ಕೇತುವೇ ನಿಮ್ಮನ್ನು ಭಾಧಿಸುತ್ತಿರಲಿ, ನಿತ್ಯವೂ ಕೇತುವಿಗೆ ಬೆಲ್ಲವನ್ನು ನೈವೇದ್ಯ ಮಾಡಿ. ಕುಜನಿಗೆ ತೊಗರಿ ಬೇಳೆಯಿಂದ ಮಾಡಿದ ಕಡುಬನ್ನು ನೈವೇದ್ಯ ಮಾಡಿದಲ್ಲಿ ಕಷ್ಟಗಳಿಂದ ನಿಮ್ಮನ್ನು ಸಂರಕ್ಷಿಸುತ್ತಾರೆ. ಈ ಸಮಯದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರ ಪ್ರಾರ್ಥನೆ ಅತ್ಯಗತ್ಯ.

ತುಲಾ: ದ್ವಾದಶ ರಾಶಿಯಲ್ಲಿ ತುಲಾರಾಶಿಗೆ ವಿಶೇಷವಾದ ಸ್ಥಾನ. ಅದು ಶನಿಗೆ ಉಚ್ಛ ಸ್ಥಾನ. ಶನಿಯು ಗುರು ಮನೆಯನ್ನು ಸೇರಿದೆ. ಈ ಸಂದರ್ಭದಲ್ಲಿ 9ರ ಗುರುವು, ಪರಿಪೂರ್ಣ ಅನುಗ್ರಹ ಕರುಣಿಸಿ ಕತ್ತಲೆಯಿಂದ ದೂರ ಸರಿಸಿ ಕಣ್ಣು ಮುಚ್ಚಿ ನಡೆದರೂ ಬೆಳಕಿರುವಲ್ಲಿಗೆ ಕರೆದುಕೊಂಡು ಹೋಗುತ್ತಾನೆ. ತುಲಾ ರಾಶಿಯವರು ದೈವಭಕ್ತಿಯಿಂದ ಎಂದೆಂದಿಗೂ ದೂರಸರಿಯಬಾರದು. ಕಷ್ಟವನ್ನು ನಿವಾರಿಸುವ ಶಿವನನ್ನು ಧ್ಯಾನಿಸಿ.

ವೃಶ್ಚಿಕ: ವೃಶ್ಚಿಕ ರಾಶಿಗೆ ಕುಜ -ಕೇತು 11 ರಲ್ಲಿ ಇದ್ದರೂ ಕಣ್ಣಿಗೆ ಕಾಣದಂತಹ ಲಾಭಗಳನ್ನು, ಕಾರ್ಯದಲ್ಲಿ ಯಶಸ್ಸನ್ನು ತೋರುತ್ತಾನೆ. ಇಂದ್ರನೇ ಸ್ವತಃ ಹಲವು ಬಾರಿ ಪದವಿಯನ್ನು ಕಳೆದುಕೊಂಡು ಕಷ್ಟವನ್ನು ಅನುಭವಿಸಿ ದ್ದಾನೆ. ವೃಶ್ಚಿಕ ರಾಶಿಯವರು ದುರಹಂಕಾರದಿಂದ ದೂರವಿರಬೇಕು, ಹಿರಿಯರನ್ನು ಗೌರವಿಸಿ ಎಲ್ಲರೊಂದಿಗೆ ಪ್ರೀತಿಯಿಂದ ವರ್ತಿಸಿ.

ಧನುಸ್ಸು: ಧನುರ್ ರಾಶಿಯವರು ಅತ್ಯಂತ ದೈವಭಕ್ತರು. ಶನಿಯು ತನ್ನ ಪ್ರಭಾವ ತೋರುತ್ತಿದ್ದರೂ ಅವನು ಶಿವನ ಸೃಷ್ಟಿಯೇ. ಮಾತೃಭಕ್ತಿಗೆ ಹೆಸರೇ ಶನಿಗ್ರಹ. ಮಾತೃಭಕ್ತಿ ಇದ್ದರೆ ಯಾವ ಕಷ್ಟಗಳೂ ಬರುವುದಿಲ್ಲ. ಯಾರೂ ಕೆಣಕುವುದಿಲ್ಲ. ಪಾರ್ವತಿಯ ಆಶೀರ್ವಾದ ಇದ್ದು ಸದಾಕಾಲವು ಶುಭಕಾಲವೇ ಆಗಿರುತ್ತದೆ. ಸಪ್ತಮ ಗುರು ಸಪ್ತಸಮುದ್ರವನ್ನು ದಾಟುವ ಶಕ್ತಿಯನ್ನು ಕೋಡುತ್ತಾನೆ. ಧೈರ್ಯವಾಗಿರಿ.

ಮಕರ: ಮಕರ ರಾಶಿಯವರೆಗೆ 6ನೇ ಮನೆಯಲ್ಲಿ ತ್ರಿ ಗ್ರಹಗಳು ಗುರು- ರವಿ- ಬುಧ ಸೇರಿದ್ದಾರೆ. ಮನುಷ್ಯನು ಸಮಶಕ್ತಿ ಉಳ್ಳವರ ಜತೆಯಲ್ಲಿ ಯುದ್ದ ಮಾಡಬೇಕು. ನಿಮ್ಮ ಜತೆಗಾರರನ್ನು ಚೆನ್ನಾಗಿ ಇಟ್ಟುಕೊಳ್ಳಿ. ದೈವಕೃಪೆ ಇದ್ದಾಗ ಅದನ್ನು ಸರಿಯಾಗಿ ಉಪಯೋಗಿಸಿಕೊಂಡರೆ ದಡ ಮುಟ್ಟುವುದರಲ್ಲಿ ಸಂದೇಹವಿಲ್ಲ.

ಕುಂಭ:  ಗುರುವೇ ಬ್ರಹ್ಮ, ಗುರುವೇ ವಿಷ್ಣು, ಗುರುವೇ ಮಹಾದೇವ ಎಂಬಂತೆ ಗುರುವನ್ನು ನೆನೆದರೆ ಸಾಕು, ಕಷ್ಟಗಳನ್ನು ದೂರ ಮಾಡಿ ನಷ್ಟಗಳಿಂದ ಪಾರುಮಾಡುತ್ತಾನೆ. ಪಂಚಮ ಗುರುವಿಗೆ ಗುರುದತ್ತಾತ್ರೇಯನ ಪ್ರಾರ್ಥನೆ ಇರಲಿ. ದ್ವಿತೀಯ ಶನಿಯು ಗುರುವಿನ ಮನೆಯಲ್ಲಿ ಇದ್ದು ಗುರುವೇ ನಿಮ್ಮನ್ನು ಶನಿಯ ಪ್ರಭಾವದಿಂದ ಪಾರುಮಾಡುತ್ತಾನೆ.

ಮೀನ: ಶನಿಯ ಲಗ್ನದಲ್ಲಿ ಇರುವುದರಿಂದ ಶನಿ ಪ್ರಾರ್ಥನೆಯನ್ನು ಮಾಡಿ. ಶನಿವಾರದಂದು ಎಳ್ಳು ಬೆಲ್ಲ ದಾನ ಮಾಡಿರಿ. ನಿಮ್ಮ ಪುಣ್ಯಖಾತೆಯಲ್ಲಿ ಜಮಾ ಮಾಡಿಕೊಳ್ಳಿ. ಗುರುವಿನ ಪ್ರಾರ್ಥನೆ ಇರಲಿ. ಪಂಚಕಜ್ಜಾಯವನ್ನು ಮಾಡಿ ಗುರುಗಣೇಶನಿಗೆ ನೈವೇದ್ಯ ಮಾಡಿರಿ. ಶುಭವಾಗಲಿ.