ಮೇಷ: 23ನೇ ತಾರೀಕು ಬೆನಕನ ಅಮಾವಾಸ್ಯೆ ಹಾಗೂ ಶ್ರಾವಣದ ಕೊನೆ ದಿನ ಆಗಿ ಜಗತ್ತಿಗೆ ಪಾರ್ವತಿ ನಂದನನಾದ ಗಜಾನನನು ಪಿತೃ ಲೋಕ ಸುತ್ತಿ ಭೂಲೋಕಕ್ಕೆ ಬಂದಿರುತ್ತಾನೆ. ಮೇಷ ರಾಶಿಗೆ ತಾತ್ಕಾಲಿಕವಾಗಿ ವಿಘ್ನಗಳು ಜಾಸ್ತಿ ಆಗಿ ಅನನುಕೂಲ ಇರುತ್ತದೆ. ಕೇತು ಗ್ರಹ ಕೊಡುವ ಬಾಧೆ ತಡೆಯಲು ಗಣಪತಿಯನ್ನು ಅರ್ಚಿಸಬೇಕು. ಬಾಲಗಣಪತಿಯನ್ನು ಸೂರ್ಯೋದಯದಲ್ಲಿ ಪೂಜಿಸಿದರೆ ಶತ್ರುಗಳು ದೂರ ಸರಿಯುತ್ತಾರೆ.
ವೃಷಭ: ದ್ವಿತೀಯದಲ್ಲಿ ಗುರು ಇರುವುದು ಶುಭಸೂಚನೆ. ಯಾವ ಗ್ರಹವೂ ಮನುಷ್ಯನನ್ನು ದಿಗ್ಬಂಧನ ಮಾಡುವುದಿಲ್ಲ. ನಾವಾಗಿ ನಾವೇ ಕೆಲವು ವಿಚಾರದಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೆ. ಮನಬಂದಂತೆ ಮಾತನಾಡಬಾರದು. ಮಾಡುವ ಕೆಲಸವನ್ನು ಮನಸಿಟ್ಟು ಮಾಡಿದರೆ ಶ್ರೇಯಸ್ಸು ಉಂಟಾಗುತ್ತದೆ. ದತ್ತಾತ್ರೇಯನನ್ನು, ಗಣಪತಿಯನ್ನು ಪೂಜಿಸಿ. ವಿಘ್ನವಿಲ್ಲದ ಜೀವನವನ್ನು ನಡೆಸಿ. ಗ ಕಾರ ಗಣಪತಿ ಸಹಸ್ರನಾಮ ಪಠಿಸಿ.
ಮಿಥುನ: ಬ್ರಹ್ಮನು ಲಲಾಟದಲ್ಲಿ ಬರೆದ ಮೇಲೆ ಅದನ್ನು ಅಳಿಸುವ ಶಕ್ತಿ ದೇವರ ದೇವ ಮಹಾದೇವರ ಕೈಯಲ್ಲಿ ಇದೆ. ವಿಷ್ಣು ಸಂತೋಷ ಕೊಡುತ್ತಾನೆ. ಆಲಸ್ಯವನ್ನು ನೀಡುತ್ತಾನೆ. ಇನ್ನೂ ಗುರು ಬಲ ಶನಿ ಬಲ ಬಂದಿರುವುದಿಲ್ಲ. ಶಿವಶಕ್ತಿ ಕ್ಷೇತ್ರಕ್ಕೆ ಹೋಗಿ ಬನ್ನಿ. ಎಲ್ಲವೂ ಶುಭವಾಗಿ, ಜೀವನವು ಒಂದು ಸರಿಯಾದ ಮಾರ್ಗದಲ್ಲಿ ಸಾಗುತ್ತದೆ.
ಕಟಕ: ದ್ವಾದಶಕ್ಕೆ ಗುರು ಬಂದಿದ್ದಾನೆ. ಮಳೆ ಬಂದು ಕೆರೆ ಕಟ್ಟೆ ಸಮುದ್ರದಲ್ಲಿ ಹೊಸ ನೀರು ಸೇರುತ್ತದೆ. ಅದೇ ನೀರನ್ನು ಕದಡಿದರೆ ಕಲ್ಮಶವಾಗುತ್ತದೆ. ಮನುಷ್ಯನ ಜಠರದಲ್ಲಿ ಸೇರಿದರೆ ಏನಾಗುತ್ತದೆ ಎಂದು ತಿಳಿದಿದೆ. ಚಂದ್ರನ ರಾಶಿಯಲ್ಲಿ ಹುಟ್ಟಿರುವ ನಿಮ್ಮ ಅಪೇಕ್ಷೆಗಳು ಈಡೇರಬೇಕಾಗಿದ್ದರೆ ಪಾರ್ವತಿ ಸಹಿತ ಸಾಂಬ ಸದಾಶಿವನನ್ನು ಪೂಜಿಸಿ.
ಸಿಂಹ: ಏಕಾದಶದಲ್ಲಿ ಗುರು, ಲಗ್ನದಲ್ಲಿ ಕೇತು ಇದ್ದಾರೆ. ಗ್ರಹಗಳು ಒಲಿದರೆ ಒಳ್ಳೆಯ ಫಲ ಖಚಿತ. ನಿಮ್ಮ ಜೀವನದಲ್ಲಿ ಈ ಸಮಯದಲ್ಲಿ ವರಸಿದ್ಧಿ ವಿನಾಯಕ ಸ್ವಾಮಿಯನ್ನು ಪೂಜಿಸಿ. ಮನಸ್ಸಿಗೆ ಸಂತೋಷ ಉಂಟಾಗಿ ಮನಸ್ಸಿನ ಸಂಕಲ್ಪ ಸಿದ್ಧಿಯಾಗುತ್ತದೆ.
ಕನ್ಯಾ: ಕನ್ಯೆಯು ಎಂದೂ ದುರ್ಬಲಳಲ್ಲ. ದುರ್ಗಾ ಪರಮೇಶ್ವರಿ, ಅಂಬಾ ಭವಾನಿ, ಚಾಮುಂಡೇಶ್ವರಿ ಅವತಾರದಲ್ಲಿ ರಾಕ್ಷಸ ಸಂಹಾರ ಮಾಡಿದ್ದಾಳೆ. ಶಿವನ ಅನುಗ್ರಹದಿಂದ ಮಹಾಲಕ್ಷ್ಮಿ ನಿಮ್ಮ ಸಹಾಯಕ್ಕೆ ಬರುತ್ತಾಳೆ. ಸರಸ್ವತಿಯ ನೆನೆದರೆ ಬ್ರಹ್ಮನೇ ಬುದ್ಧಿಯನ್ನು ಸರಿ ಮಾಡಿ ನಿಮಗೆ ಶಾಂತತೆ ಕೊಟ್ಟು ಕಾಪಾಡುವುದರಲ್ಲಿ ಸಂದೇಹ ಬೇಡ.
ತುಲಾ: ಈ ರಾಶಿಯವರಿಗೆ 9ರ ಗುರು ಅನಂತವಾಗಿ ಕೊಟ್ಟು, ಸಾಕ್ಷಾತ್ ಕೃಷ್ಣನೇ ನಿಮಗೆ ಅತ್ಯಧಿಕವಾದ ನಗು ಮುಖವನ್ನು, ನೆನೆಸಿದ ಕಾರ್ಯದಲ್ಲಿ ಬುದ್ಧಿಯನ್ನು, ಯಶಸ್ಸನ್ನು ಕೊಡುತ್ತಾನೆ. ದ್ವಾದಶ ದಲ್ಲಿ ಅಂಗಾರಕನಿದ್ದು ನೀವು ಮಾತನಾಡಬೇಕಾದರೆ ಯೋಚಿಸಿ ಮಾತನಾಡಿ, ಬೇರೆಯವರು ಹೇಳಿದ್ದನ್ನೆಲ್ಲ ಒಪ್ಪಿಕೊಳ್ಳುವುದು ಭ್ರಮೆಯ ಸಂಕೇತ. ಸುಬ್ರಹ್ಮಣ್ಯ ದೇವರನ್ನು ಪೂಜಿಸಿ.
ವೃಶ್ಚಿಕ: ಮನುಷ್ಯನಿಗೆ ಹೊಟ್ಟೆ ಹಸಿದಾಗ ಬರಿ ಅನ್ನ ತಿನ್ನಲು ಆಗುವುದಿಲ್ಲ. ಅನ್ನವೇ ಮೂಲಾಧಾರವಾದರೂ ಅದಕ್ಕೆ ಸಹಾಯಕವಾದ ವ್ಯಂಜನ ಇಲ್ಲದಿದ್ದರೆ ಮನಸ್ಸು ಒಪ್ಪುವುದಿಲ್ಲ. ನಿತ್ರಾಣವಾಗಿ ಅನೇಕ ಗೋಜಲಿಗೆ ಕಾರಣವಾಗುತ್ತದೆ. ಹಾಗೆಯೇ ಯೋಜನೆ ದೊಡ್ಡದಾಗಿದ್ದರೂ ದುಡ್ಡಿನ ಬಲ ಇಲ್ಲದಿದ್ದರೆ ಮನುಷ್ಯನಿಗೆ ಬುದ್ಧಿ ಓಡುವುದಿಲ್ಲ. ದುಡ್ಡಿಲ್ಲದ ಯೋಜನೆ, ವ್ಯಂಜನ ಇಲ್ಲದ ಅನ್ನ ಅರಗಿಸಿಕೊಳ್ಳಲು ಕಷ್ಟ ಸಾಧ್ಯ. ಲಕ್ಷ್ಮೀ ನರಸಿಂಹನನ್ನು ಪೂಜಿಸಿ.
ಧನುಸ್ಸು: ಸಪ್ತಮದಲ್ಲಿ ಗುರು ಇದ್ದು ಚತುರ್ಥ ಶನಿ ವಕ್ರನಾಗಿದ್ದಾನೆ. ಎಲ್ಲ ಗ್ರಹಗಳನ್ನು ನಡೆಸಿ ಯೋಗಕ್ಷೇಮ ಕಾಯುವುದಕ್ಕೆ ಗುರು ಒಬ್ಬನೇ ಸಾಕು, ಸಂದೇಹವಿಲ್ಲ. ಗುರುವಿನ ಮೇಲೆ ಭಕ್ತಿ ಇರಬೇಕು. ವಿಶ್ವಾಸ ಎಂಬ ಪದ ಅರ್ಥೈಸಿಕೊಂಡರೆ ಜಗತ್ತಿಗೆ ಒಳ್ಳೆಯದಾಗುತ್ತದೆ. ಯಾರಿಗೂ ನೋವುಂಟಾಗುವುದಿಲ್ಲ. ಆದ್ದರಿಂದ ನೀವು ನಿಮ್ಮ ಅವಗುಣಗಳಿಗೆ ಕಡಿವಾಣ ಹಾಕಿ ನಿಮ್ಮ ದಾರಿ ರೂಪಿಸಿಕೊಂಡರೆ ಕಣ್ಣಿಗೆ ಕಾಣದ ದೈವ ಸಹಾಯ ಮಾಡುತ್ತದೆ.
ಮಕರ: ಈ ರಾಶಿಯವರಿಗೆ ಷಷ್ಟ್ಟಲ್ಲಿ ಗುರು ಇರುವುದು ಅನೇಕ ವಿಚಾರಗಳಲ್ಲಿ ಬೆಳಕನ್ನು ನೀಡುವುದಿಲ್ಲ. 6ರ ಗುರುವಿನಿಂದ ಕೆಲಸ ಪೂರ್ಣ ವಾಗುವುದಿಲ್ಲ. 2ರಲ್ಲಿ ರಾಹು ಇರುವುದರಿಂದ ಸಂಸಾರದಲ್ಲಿ ಸಮಸ್ಯೆ ಉಂಟಾಗುತ್ತದೆ. ಮನೆಯಲ್ಲಿ, ಮಂದಿರದಲ್ಲಿ, ಎಲ್ಲಿ ಕೂತರೂ ಸಮಸ್ಯೆ ಇರುತ್ತದೆ. ಪಳನಿ ಸುಬ್ರಮಣ್ಯನನ್ನು ದರ್ಶಿಸಿ ಬನ್ನಿ.
ಕುಂಭ: ಲಗ್ನದಲ್ಲಿ ರಾಹು ವಕ್ರ ಶನಿ ಎರಡೂ ಪಾಪ ಗ್ರಹ ಸೇರಿದ್ದಾಗ ಎಷ್ಟೇ ಪುಣ್ಯ ಇದ್ದರೂ ಲಯವಾಗುತ್ತದೆ. ನಿಮ್ಮ ಮಾತಾಪಿತೃಗಳು ಮಾಡಿದ್ದ ಪುಣ್ಯದಿಂದ ಜೀವನ ಸಾಗಿಸುತ್ತಿದ್ದೀರಿ. ಶನಿ ಸಂಚಾರದಲ್ಲಿ ಇರುವುದರಿಂದ ಇಡಗುಂಜಿಗೆ ತೆರಳಿ ಗಣನಾಯಕನಾದ ವಿಶ್ವ ವಂದ್ಯ ಗಣೇಶನನ್ನು ಪೂಜಿಸಿ.
ಮೀನ: ದ್ವಾದಶದಲ್ಲಿ ರಾಹು, ವಕ್ರ ಶನಿ. ಎರಡೂ ಗ್ರಹ ಏನನ್ನು ಕೊಡುತ್ತಾ ರೆಂದು ಯೋಚಿಸಲು ಆಗುವುದಿಲ್ಲ. ನೀವು ಈ ಸಮಯದಲ್ಲಿ ಉಪಾ ಯದಿಂದ ಜೀವನ ನಡೆಸಿ. ನಂಜನಗೂಡಿನಲ್ಲಿರುವ ಪಾರ್ವತಿ ಸಹಿತ ಶ್ರೀಕಂಠೇಶ್ವರನನ್ನು ಪೂಜಿಸಿ. ಸತ್ಯಂ ಶಿವಂ ಸುಂದರಂ ಎಂಬಂತೆ ಈಶ್ವರನೇ ಸಹಾಯಕನಾಗಿ ಇದ್ದು ನಿಮ್ಮ ಜೀವನದ ಸಂಕೋಲೆ ಬಿಡಿಸಿ ಜೀವನ ರೂಪಿಸಿಕೊಡುತ್ತಾನೆ. ಶುಭವಾಗಲಿ.