ನ್ಯೂಸ್

ವಾರ ಭವಿಷ್ಯ: ಈ ರಾಶಿಯವರು ಬುದ್ದಿಯನ್ನು ಉಪಯೋಗಿಸಿದರೆ ಸಾಕು ಎಲ್ಲವೂ ನಿಮ್ಮದಾಗುತ್ತದೆ

ಸುದೀಪ್​ ವಿ.ಎನ್​

ಮೇಷ: ಮೇಷಾಧಿಪತಿ ಕುಜನು ಸ್ಥಾನವನ್ನು ಬದಲಾಯಿಸಿದ್ದಾನೆ. ಷಷ್ಠದಲ್ಲಿ ಕುಜನು ಬುಧನ ಮನೆಯಲ್ಲಿ ಇದ್ದರೂ ಪೂರ್ವ ಪುಣ್ಯವನ್ನು, ಯೋಗಾನುಯೋಗವನ್ನು ಕೊಟ್ಟು ರಕ್ಷಿಸುತ್ತದೆ. ಅಂತಹ ಶಿಕ್ಷಣ ಬೇಕಾದಲ್ಲಿ ಲಗ್ನಾಧಿಪತಿ ಅಂಗಾರಕನ್ನು ಷಣ್ಮುಖ ರೂಪದಿಂದ ಪೂಜಿಸಿದರೆ ನಾಗದೇವರ ಅಷ್ಟೋತ್ತರ ಪರಾಯಣ ಮಾಡಿದರೆ ಇಷ್ಟಾರ್ಥ ಸಿದ್ಧಿಸುವುದು.

ವೃಷಭ: ಕಾಲ ಕೆಟ್ಟಾಗ, ಮೌನಕ್ಕಿಂತ ಉತ್ತಮ ಔಷಧಿ ಮತ್ತೊಂದು ಇಲ್ಲ. ಮಿತವಾಗಿ ಮಧುರ ಭಾಷೆಯಲ್ಲಿ ಮಾತನಾಡಿದರೆ ಯುದ್ಧವೇನು, ರಾಜ್ಯವೇನು ಲೋಕವನ್ನೇ ಗೆಲ್ಲಬಹುದು. ಸ್ವಲ್ಪ ಕಾಲ ನೀವು ಯಾರು ಏನೇ ಹೇಳಿದರೂ ಸುಮ್ಮನಿದ್ದುಬಿಡಿ. ನಮ್ಮ ಲೆಕ್ಕಾಚಾರಗಳನ್ನು ಮುಂದಿನ ದಿನಗಳಲ್ಲಿ ಅರ್ಥ ಮಾಡಿಸುವ ಕಾಲ ಬರುತ್ತದೆ ಸುಮ್ಮನಿರಿ. ಸಂತಸದಿಂದ ಎಲ್ಲರನ್ನೂ ಎಲ್ಲವನ್ನೂ ಗೆಲ್ಲುತ್ತಾ ಬನ್ನಿ. ವಾಗೀಶ್ವರಿಯನ್ನು ಪೂಜೆ ಮಾಡಿದರೆ ಅತ್ಯಂತ ಶುಭವಾಗುತ್ತದೆ.

ಮಿಥುನ: ಬುಧನು ಚಂದ್ರನ ಮನೆಯಲ್ಲಿ ಇದ್ದು ವ್ಯಾಪಾರದ ಗುಟ್ಟುಗಳನ್ನು ರಹಸ್ಯವಾಗಿ ಭೇದಿಸುತ್ತಾನೆ. ವಿಷ್ಣುವಿನ ಅರ್ಚನೆ ಮಾಡಿದರೆ, ನಿಮ್ಮ ಲೆಕ್ಕಾಚಾರ ತಪು್ಪವುದಿಲ್ಲ. ಲೆಕ್ಕಕ್ಕೂ ಮೀರಿ ಕೆಲಸ ಸಾಧಿಸಬಹುದು, ಧನ ಸಂಪಾದನೆ ಮಾಡಬಹುದು. ಹೃದಯ ಕಮಲದಲ್ಲಿ ಲಕ್ಷ್ಮಿಯೇ ರಾರಾಜಿಸುವ ವಿಷ್ಣುವನ್ನು ಶ್ರಾವಣ ಮಾಸದಲ್ಲಿ ಪೂಜಿಸಿದರೆ ಇಷ್ಟಾರ್ಥಗಳು ಈಡೇರುತ್ತವೆ.

ಕಟಕ: ಕಟಕ ರಾಶಿಯಲ್ಲಿ ರವಿ, ಬುಧರು ಇದ್ದು, ಸಂಕಲ್ಪ ಕಾರ್ಯವು ಆಗುವುದರಲ್ಲಿ ಸಂದೇಹ ಬೇಡ. ಚಂದ್ರಧಾರಿಯಾದ ಶಿವನ ಅರ್ಚನೆ ಮಾಡಿದರೆ ಎಲ್ಲವೂ ಸಿಗುವುದು, ಶಿವಪೂಜೆಯನ್ನು ಮಾಡಿದ ಪುಣ್ಯವು ನಿಮ್ಮನ್ನು ಕಾಪಾಡುತ್ತದೆ. ಶ್ರಾವಣ ಮಾಸದಲ್ಲಿ ನಿತ್ಯವೂ ಸಂಜೆ ಶಿವ ಸಹಸ್ರನಾಮ ಪಾರಾಯಣ ಮಾಡಿದರೆ ಅತ್ಯಂತ ಶುಭ ಹಾಗೂ ಪ್ರಗತಿದಾಯಕ.

ಸಿಂಹ: ಕೇತುವು ಏಕಾಂಗಿಯಾಗಿ ಸೂರ್ಯನ ಮನೆಯಲ್ಲಿದ್ದಾನೆ. ಕೇತುವಿಗೆ ಪರ್ಯಾಯ ಅರ್ಥವೇ ಗಣಪತಿ. ನಾಗದೇವರನ್ನು ಗಣಪತಿಯನ್ನು ಪೂಜಿಸಿದರೆ ರಾಜಯೋಗವನ್ನು ಕಾಯ್ದುಕೊಳ್ಳಬಹುದು. ಆದಿತ್ಯಹೃದಯ ಪಾರಾಯಣ ಮಾಡಿ. ಸೂರ್ಯನನ್ನು ಶ್ರದ್ಧಾ- ಭಕ್ತಿಯಿಂದ ಪೂಜಿಸಿ. ಲಲಿತಾ ಸಹಸ್ರಾನಾಮ ಪಾರಾಯಣ ಮಾಡಿದರೆ ಕಷ್ಟಗಳಿಂದ ಮುಕ್ತಿ ಸಿಗುತ್ತದೆ.

ಕನ್ಯಾ: ಅಂಗಾರಕನು ಕನ್ಯಾ ರಾಶಿಯನ್ನು ಪ್ರವೇಶ ಮಾಡಿದ್ದಾನೆ. ಬುಧನ ಮನೆಗೆ ಹೋಗಿದ್ದಾನೆ. ಬುಧನು ಸಾಮರ್ಥ್ಯವನ್ನು, ಸ್ವಶಕ್ತಿಯನ್ನು ಕೊಟ್ಟು ಮುನ್ನಡೆಸುತ್ತಾನೆ. ಆದರೆ ನೀವು ವ್ಯವಹಾರ ಮಾಡುವಾಗ ಎಚ್ಚರದಿಂದಿರಬೇಕು. ಬಂಧು-ಬಾಂಧವರಲ್ಲಿ ಧನವನ್ನು ಹೂಡದೆ ದೇವರು ಕೊಟ್ಟು ಬುದ್ಧಿಯಿಂದ ಯೋಚಿಸಿ, ಶುಭವಾಗುತ್ತದೆ. ಭೈರವ ಅಷ್ಟೋತ್ತರ ಪಾರಾಯಣ ಮಾಡಿ.

ತುಲಾ: ರಾಶ್ಯಾಧಿಪತಿ ಶುಕ್ರನು ನವಮದಲ್ಲಿರುವುದರಿಂದ ಜಾಣ್ಮೆಯಿಂದ ವ್ಯವಹರಿಸಿದರೆ ಕೆಲಸವು ಕಾರ್ಯಗತವಾಗಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಬೇಕಾಗುವ ಎಲ್ಲ ಶುಭಲಾಭ ಕೊಟ್ಟು ಹರಸುತ್ತಾನೆ. ಶುಕ್ರನಿಗೆ ಶ್ರಾವಣ ಮಾಸದಲ್ಲಿ ದುರ್ಗಾ ಮಹಾಲಕ್ಷ್ಮಿಯೆಂಬ ಸಂಕಲ್ಪದಿಂದ ಪೂಜಿಸಿ.

ವೃಶ್ಚಿಕ: ವೃಶ್ಚಿಕಾಧಿಪತಿ ಕುಜನು ಏಕಾದಶದಲ್ಲಿ ಕುಳಿತಿದ್ದಾನೆ, ಬುಧನು ಮನೆಯಲ್ಲೆ ಇರುವುದರಿಂದ ನಿಮ್ಮ ಚಾಣುಕ್ಯ ಬುದ್ಧಿಯನ್ನು ಉಪಯೋಗಿಸಿದರೆ ಬೇಕಾದ್ದನ್ನು ಸಂಪಾದಿಸಬಹುದು. ಶ್ರಮ, ಪರಾಕ್ರಮವಿದ್ದರೆ ಹನುಮಂತನು ಲಕ್ಷ್ಮಣನಿಗೆ ಜೀವದಾನ ಮಾಡಲು ಸಂಜೀವಿನಿ ಪರ್ವತ ತಂದಂತೆ ಕಮಲಲೋಚನೆ ಲಕ್ಷ್ಮೀಯನ್ನು ನೀವು ಮನೆಯಲ್ಲೇ ಇರಿಸಿಕೊಳ್ಳಬಹುದು. ಲಕ್ಷ್ಮೀ ಸಹಸ್ರನಾಮ, ಶ್ರೀ ಸೂಕ್ತ ಪಾರಾಯಣ ಮಾಡಿಸಿ.

ಧನುಸ್ಸು: ಸಪ್ತಮ ಗುರು, ವಕ್ರಗತಿಯಲ್ಲಿ ಶನಿಯು ಮೂರರಲ್ಲಿದ್ದು ನಿಮಗೂ ಆಕಾಶಕ್ಕೂ ಮೂರೇಗೇಣು ವ್ಯತ್ಯಾಸ. ಪುಣ್ಯ ಪುರುಷರ ದರ್ಶನದಿಂದ ಅನಂತ ಕೋಟಿ ಬ್ರಹ್ಮಾಂಡ ನಾಯಕನಾದ ಲಕ್ಷ್ಮೀಸಹಿತ ಅನಂತನೇ ಧನವನ್ನು, ಲಾಭವನ್ನು ಕೊಟ್ಟು ಸ್ಥಿರವಾದ ಆರೋಗ್ಯ, ನಗುಮುಖ, ಸೌಂದರ್ಯ, ಸಾಹಸ ಎಲ್ಲವನ್ನೂ ಬಂಗಾರದ ತಟ್ಟೆಯಲ್ಲಿ ಇರಿಸಿದ್ದಾನೆ. ಬುದ್ದಿಯನ್ನು ಉಪಯೋಗಿಸಿದರೆ ಸಾಕು ಎಲ್ಲವೂ ನಿಮ್ಮದಾಗುತ್ತದೆ.

ಮಕರ: ಮಕಾರವಿಂದವು ಶೋಭೆಯನ್ನು ಕಳೆದುಕೊಂಡರೆ ವಿಕಾರವಾಗಿ ಕಾಣುತ್ತದೆ. ಸಕಾರಾತ್ಮಕ ಚಿಂತನೆ ಇರಬೇಕು. ಮುಟ್ಟಿದ್ದೆಲ್ಲಾ ಚಿನ್ನವಾಗಬೇಕಾದರೆ ಶ್ರಮಪಡಲೇಬೇಕು, ತಾತ್ಕಾಲಿಕವಾಗಿ ಶನಿಯು ವಕ್ರನಾಗಿದ್ದು, ಲಾಭವೂ , ಧನವೂ, ತಡವಾಗಿ ಬಂದು ಕೊರತೆ ಉಂಟಾಗುವ ಸಂಭವವಿರುತ್ತದೆ. ಗುರು ಸಹಿತ ಶನಿ ಗ್ರಹವನ್ನು ಪೂಜಿಸಿ. ನಿಮ್ಮ ಪ್ರಾರ್ಥನೆ ಒಂದೇ ಕೆಲಸ ಮಾಡುತ್ತದೆ.

ಕುಂಭ: ಕುಂಭಕ್ಕೆ ಕಂಬವು ತಾಗಿದರೆ ಒಡೆಯುತ್ತದೆ. ಎಚ್ಚರದಿಂದ ಮುಂದುವರಿದರೆ, ಮಾತಾಪಿತರ ಅನುಗ್ರಹ ಸಂಪಾದಿಸಿದರೆ ಅನುಕೂಲವಾಗುತ್ತದೆ. ತಂದೆ-ತಾಯಿಯ ಸೇವೆ ಮಾಡಬೇಕು. ಹೆಂಡತಿಗೆ ಪ್ರೀತಿಯನ್ನು ಕೊಡಬೇಕು. ಉಮಾಮಹೇಶ್ವರ ಸ್ವರೂಪಿಗಳಾದ ನಿಮ್ಮ ತಂದೆ-ತಾಯಿಯನ್ನು ಪೂಜಿಸಿ ಕಷ್ಟವನ್ನು ದಾಟಿ ಸುಖವನ್ನು ಅನುಭವಿಸಿ.

ಮೀನ: ವಕ್ರಶನಿಯು ಬುದ್ದಿಯನ್ನು ಕೆಡಿಸುತ್ತಾನೆ. ವಿನಾಕಾರಣ ಬೇರೆಯವರ ಮೇಲೆ ಅನುಮಾನಪಡುವಂತೆ ಮಾಡುತ್ತಾನೆ. ಲಾಭವಿಲ್ಲದೇ ದುಡಿಮೆ, ಅಗಸನ ಕತ್ತೆಯೂ ನೀರಿಲ್ಲದ ಕೆರೆಗೆ ಹೋದಂತೆ ಆಗುವುದು ಬೇಡ. ಗುರುಚರಿತ್ರೆಯಲ್ಲಿ ಅಗಸನೇ ಗುರುವಿನ ಕೃಪೆಯಿಂದ ಅರಸನಾಗುತ್ತಾನೆ. ನೀವೇ ನಿಮಗೆ ಆಳಾಗಿ ಕೆಲಸವನ್ನು ಮಾಡಿದಾಗ ರಾಜಯೋಗವನ್ನು ದೇವರೇ ಕರುಣಿಸುತ್ತಾನೆ. ಗ್ರಹಸಂಚಾರ ಬದಲಾಗುವವರೆಗೆ ಮನೆಯಲ್ಲಿ ಶ್ರೀಕೃಷ್ಣನನ್ನು ತೊಟ್ಟಿಲಲ್ಲಿ ತೂಗಿ ತುಪ್ಪದ ಆರತಿಯನ್ನು ಮಾಡಿ.