ಮೇಷ: ಅ. 17ರಂದು ತಲಕಾವೇರಿಯಲ್ಲಿ ತೀಥೋದ್ಭವ. ತಲಕಾವೇರಿಯ ಸ್ನಾನ ಅತ್ಯಂತ ಶುಭಫಲ ನೀಡುತ್ತದೆ. ತುಲಾ ಸಂಕ್ರಮಣದಲ್ಲಿ ಪಿತೃದೇವತೆಗಳಿಗೆ ತರ್ಪಣ ನೀಡಬೇಕು. ಅ. 18ರಂದು ಕಟಕಕ್ಕೆ ಗುರು ಬಂದು ತುಲಾ ರಾಶಿಗೆ ರವಿ ಬಂದು ಸೇರಿ ಶನಿ ವಕ್ರಗತಿಯಲ್ಲಿ ಸಾಗುತ್ತಾನೆ. ನೀವು ಎಚ್ಚರ ವಹಿಸಿ ವ್ಯವಹಾರಗಳನ್ನು ನಾಜೂಕಾಗಿ ಮಾಡಿದರೆ ತೊಂದರೆ ಆಗದು. ದೈವಸಹಾಯ ಅಗತ್ಯ. ನ. 26ರವರೆಗೆ ಶನಿ 11ನೇ ಮನೆಯ ಫಲ ನೀಡಿ, ಬಾಕಿ ಇರುವ ಧನ ನಿಮ್ಮನ್ನು ಬಂದು ಸೇರುತ್ತದೆ.
ವೃಷಭ: ಈ ರಾಶಿಯವರಿಗೆ ಶನಿಯು ಮತ್ತೆ ನವೆಂಬರ್ನಿಂದ ಗುರು ಮನೆಗೆ ಹೋಗುತ್ತಾನೆ. ಆತುರ ಪಡದೆ ಬೇಡದ ಆಯಾಸ ಮಾಡಿಕೊಳ್ಳದೆ ಚತುರತೆಯಿಂದ ಕೆಲಸ ಮಾಡಿಕೊಳ್ಳಬೇಕು. ಮೌನ ಬೆಳ್ಳಿ, ಮಾತು ಬೆಂಕಿ. ಮಾತನಾಡುವಾಗ ಎಚ್ಚರ ವಹಿಸಿ. ನಿಮ್ಮ ಕುಲದೇವರನ್ನು ಪ್ರಾರ್ಥಿಸಿ.
ಮಿಥುನ: ಈ ರಾಶಿಯವರಿಗೆ ಗುರುವು ಅ. 18ರಿಂದ ಕಟಕ ರಾಶಿಗೆ ಬಂದು ಕುಟುಂಬದಲ್ಲಿ ಸೌಖ್ಯ, ಶಾಂತಿ, ಧನಲಾಭ ಆಗಿ, ವೈರಿಗಳು ದೂರ ಸರಿದು ಶತ್ರು ಭಯ ನಿವಾರಣೆ ಆಗುತ್ತದೆ. ಸಮಯವು ಚೆನ್ನಾಗಿದ್ದಾಗ ಉಪಯೋಗಿಸಿಕೊಂಡು ಒಳ್ಳೆಯ ಕೆಲಸ ಮಾಡಬೇಕು. ಪಾರ್ವತಿ ಸಹಿತ ಸಾಂಬಸದಾಶಿವನನ್ನು ಪೂಜಿಸಿದರೆ ಬುದ್ಧಿ ಸ್ಥಿಮಿತಕ್ಕೆ ಬಂದು ಮನಸ್ಸಿಗೆ ಆನಂದ ಉಂಟಾಗುತ್ತದೆ.
ಕಟಕ: 12ನೇ ಮನೆಯ ಗುರುವು ಇದೇ ಅ. 18ರಿಂದ ಲಗ್ನಕ್ಕೆ ಬರುತ್ತಾನೆ. ನಿಂತು ಹೋದ ಕೆಲಸಗಳು ಮುಂದೆ ಸಾಗಿ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ಆರೋಗ್ಯವೂ ಸುಧಾರಿಸಿ ಕೆಲಸದಲ್ಲಿ ಉತ್ಸಾಹವನ್ನೂ ತರುತ್ತದೆ. ಉಮಾಮಹೇಶ್ವರನ ಪ್ರಾರ್ಥನೆ ಸದಾ ಇರಲಿ. ಈಶ್ವರನಿಗೆ ಬಿಲ್ವಾರ್ಚನೆ ಮಾಡಿರಿ.
ಸಿಂಹ: ಈ ರಾಶಿಗೆ ಗುರು 12ನೇ ಮನೆಗೆ ಬಂದರೂ ಅಷ್ಟೇನೂ ತೊಂದರೆ ಕೊಡನು. ಆದರೂ ಗುರು ಪ್ರಾರ್ಥನೆ ಇರಲೇಬೇಕು. ನಿಮ್ಮನ್ನು ಕಂಡು ಆಗದಿರುವವರು ಕೋಪದಿಂದ ಮಾತನಾಡಬಹುದು. ತೇಜೋವಧೆ ಮಾಡಬಹುದು. ಎಲ್ಲಕ್ಕೂ ಸಿದ್ಧವಾಗಿರಿ. ಗುರುವನ್ನು ಪ್ರಾರ್ಥಿಸಿ. ಗುರುವೇ ನಿಮ್ಮನ್ನು ರಕ್ಷಿಸುವನು. ದತ್ತಾತ್ರೇಯ ಗುರುಚರಿತ್ರೆಯ 14ನೇ ಅಧ್ಯಾಯ ಪಾರಾಯಣ ಮಾಡಿ. ಸೂರ್ಯ ನಾರಾಯಣ ಅಷ್ಟೋತ್ತರ ಪಠಿಸಿ.
ಕನ್ಯಾ: ಈ ರಾಶಿಗೆ 11ರ ಗುರುವು ವಿಶೇಷ ಲಾಭ ಕೊಟ್ಟು, ನಿಂತಿರುವ ಕೆಲಸಗಳಿಗೆ ಚಾಲನೆ ನೀಡುತ್ತಾನೆ. ಮುಖಬೆಲೆ ಜಾಸ್ತಿಯಾಗಿ ಜನರೂ ಗೌರವ ಕೊಡು ತ್ತಾರೆ. ಕಪಟ ನಾಟಕವಾಡುವುದನ್ನು ಗುರುವು ಸಹಿಸಲಾರನು. ಯಾರನ್ನೂ ನಿಂದನೆ ಮಾಡದೆ ಇದ್ದರೆ ಶುಭ ಕಾರ್ಯಗಳು ಕ್ಷಿಪ್ರವಾಗಿ ನಡೆಯುತ್ತವೆ. ಮಹಾವಿಷ್ಣುವನ್ನು ಆರಾಧನೆ ಮಾಡಿ. ಸಾಧ್ಯವಾದಲ್ಲಿ ಮಹಾವಿಷ್ಣುವಿನ ಯಾನವನ್ನೇ ಮಾಡಿ.
ತುಲಾ: ದಶಮಕ್ಕೆ ಗುರುವು ಉಚ್ಚ ರಾಶಿಗೆ ಬರುವಾಗ ಧೈರ್ಯ ಕೀರ್ತಿ ಲಾಭವನ್ನೂ, ಮಾಡಿದ ಕೆಲಸಕ್ಕೆ ಒಳ್ಳೆಯ ಪ್ರತಿಫಲವನ್ನೂ, ವ್ಯಾಪಾರ ಉದ್ಯೋಗದಲ್ಲಿ ಜಯವನ್ನೂ ತರುತ್ತಾನೆ. 12ರ ಸೂರ್ಯನು ಅ. 17ರಂದು ತುಲಾ ರಾಶಿಗೆ ಬಂದು ಸೇರಿದಾಗ ಎರಡು ಪಾಪಗ್ರಹಗಳ ಜತೆ ಬುಧನೂ ಇರುವುದರಿಂದ ಏಕಕಾಲದಲ್ಲಿ ಸೂರ್ಯ ನಾರಾಯಣನನ್ನು, ಸುಬ್ರಹ್ಮಣ್ಯನನ್ನು ಪೂಜಿಸಿ ಇಷ್ಟಾರ್ಥ ಸಿದ್ಧಿಸಿಕೊಳ್ಳಿ.
ವೃಶ್ಚಿಕ: ಈ ರಾಶಿಯವರಿಗೆ 12ರಲ್ಲಿ ಸೂರ್ಯನು ಬರುತ್ತಾನೆ. ಶತ್ರುಗಳು ನಿರೀಕ್ಷೆ ಇಲ್ಲದ ಕೆಲವು ವಿಚಾರಗಳಲ್ಲಿ ಕ್ಯಾತೆ ತೆಗೆಯಬಹುದು. ಅದಕ್ಕೆ ನಿಮ್ಮ ಉತ್ತರ ಮೌನ ಹಾಗೂ ಅಂಥವರೆಡೆಗೆ ತಿರುಗಿ ನೋಡದೇ ಇರುವುದೇ ನಿಮ್ಮ ಪ್ರತ್ಯುತ್ತರ ಆಗಿರಲಿ. ಅ.18ರಿಂದ 9ರ ಗುರುವು ನಿಮಗೆ ವಿಶೇಷ ಧನಲಾಭ, ಶುಭಫಲ, ಉದ್ಯೋಗದಲ್ಲಿ ಪ್ರಗತಿ ಕೊಡುತ್ತಾನೆ. ರಾಶ್ಯಾಧಿಪತಿಯು 12ರಲ್ಲಿದ್ದು ಸುಬ್ರಹ್ಮಣ್ಯ ದೇವರ ಪ್ರಾರ್ಥನೆ ಅಗತ್ಯ.
ಧನುಸ್ಸು: ಸಪ್ತಮ ಗುರುವು ಅಷ್ಟಮಕ್ಕೆ ಬಂದರೂ ಗುರು ರಾಶಿಯಲ್ಲಿ ಹುಟ್ಟಿದ ನಿಮಗೆ ಭಯವೂ ಭೀತಿಯೂ ಬೇಡ. ಯಾವ ಗೊಂದಲವು, ಯಾರೇ ನಿಮ್ಮನ್ನು ದೂರವಿಟ್ಟು ಕಾರ್ಯಾಚರಣೆ ಮಾಡಿದರೆ ಕಷ್ಟಪಡಬೇಕಾಗುತ್ತದೆ. ನಿಮ್ಮಂತೆ ನೀವಿರಿ. ಗುರುವೇ ಬಂದು ಕಾಪಾಡುತ್ತಾನೆ. ಪ್ರತಿನಿತ್ಯ ಗುರು ಚರಿತ್ರೆ ಪಾರಾಯಣ ಅಥವಾ ಅರುಣ ಪಾರಾಯಣ ಅಥವಾ ಆದಿತ್ಯ ಹೃದಯ ಪಾರಾಯಣ ಮಾಡಿದರೆ ಶ್ರೇಯೋವಂತರಾಗಿ ಬದುಕುತ್ತೀರಿ.
ಮಕರ: ಸಪ್ತಮಕ್ಕೆ ಗುರು ಬಂದು ಉಚ್ಚ ರಾಶಿಯಲ್ಲಿ ಇರುತ್ತಾನೆ. ಸುಖ, ಸಂತಸ, ಆರೋಗ್ಯ ಎಲ್ಲವೂ ಬಂದು ಸೇರುತ್ತದೆ. ದ್ವಿತೀಯದಲ್ಲಿ ರಾಹು ಇರುವುದರಿಂದ ಕೆಲವು ವಿಚಾರಗಳಲ್ಲಿ ಅಡೆತಡೆಗಳು ಎದುರಾಗುತ್ತವೆ. ನಾಗದೇವರನ್ನು ಪೂಜಿಸಿ, ಪ್ರಾರ್ಥಿಸುವ ಮೂಲಕ ಇದನ್ನು ಸರಿಪಡಿಸಿಕೊಳ್ಳಿ.
ಕುಂಭ: ಲಗ್ನದಲ್ಲಿ ರಾಹು ಇರುವುದರಿಂದ ಸಂಶಯದ ಬುದ್ಧಿ, ಗುರುಗಳ ಮಾತಿನಲ್ಲಿ ನಂಬಿಕೆ ಇಲ್ಲದೆ ನೀವೇ ಆಲೋಚಿಸುವುದನ್ನು ಮಾಡದೇ ಗುರುವಿನಲ್ಲಿ ದೃಢವಾದ ನಂಬಿಕೆ, ವಿಶ್ವಾಸ ಇಡಬೇಕು. ಗುರುಗಳ ಮಾತಿನಂತೆ ನಡೆದುಕೊಳ್ಳಬೇಕು. ಒಂದೊಮ್ಮೆ ತಪ್ಪು ನಡೆದರೂ ಆಗ ಗುರುವೇ ನಿಮ್ಮನ್ನು ರಕ್ಷಿಸುವನು. ದತ್ತಪಾದುಕೆ ದರ್ಶಿಸಿ.
ಮೀನ: ದ್ವಂದ್ವ ಮನಸ್ಸು, ಯಾವ ಕೆಲಸ ಮಾಡಲೂ ಹತ್ತಾರು ಗೊಂದಲಗಳು. ಎಷ್ಟು ಪ್ರಯತ್ನ ಮಾಡಿದರೂ ಕೆಲಸ ಆಗದು ಅಥವಾ ಕೆಲಸ ಮಾಡಲು ಆಲಸ್ಯ ಬಿಡುವುದಿಲ್ಲ. ಮನಃಕಾರಕ ಚಂದ್ರನನ್ನು ಪ್ರಾರ್ಥಿಸಿ. ಚಂದ್ರಾಷ್ಟೋತ್ತರ ಪಠಿಸಿ. ಶಿವಾಲಯಕ್ಕೆ 5 ಸೋಮವಾರ ಹೋಗಿಬನ್ನಿ. ನಿಮ್ಮಲ್ಲಿ ನೀವೇ ಬದಲಾವಣೆ ಕಂಡು, ಎಲ್ಲಿಲ್ಲದ ಉತ್ಸಾಹ, ಧೈರ್ಯ, ಕಾರ್ಯಪ್ರವೃತ್ತಿ ಕಂಡುಬರುತ್ತದೆ.