ನ್ಯೂಸ್

ವಾರ ಭವಿಷ್ಯ: ಈ ರಾಶಿಯವರಿಗೆ ಧನವನ್ನು ತಂದು ಕೊಡುತ್ತದೆ

ಬಾಬುಪ್ರಸಾದ್​ ಮೋಡಿಸ್​
ಮೇಷ: ಐದು ಗ್ರಹಗಳು ಮೀನ ರಾಶಿಯಲ್ಲಿ ಸೇರಿ ಶನಿಯೂ ಅಲ್ಲೇ ಕುಳಿತಿದ್ದಾನೆ. ಮಹಾವಿಷ್ಣು ಸ್ವರೂಪ ಶ್ರೀರಾಮನ ಪೂಜಿಸಿ ಗುರುಬಲ ಇರುವುದರಿಂದ ನೀವು ಏರುವ ಮೆಟ್ಟಿಲ ಕಡೆಗೆ ಯೋಚನೆ ಆಲೋಚನೆ ಎರಡೂ ಇರಲಿ. ಸುಬ್ರಹ್ಮಣ್ಯನ ಪೂಜೆಯೇ ಜಯವನ್ನು, ಧನವನ್ನು ತಂದು ಕೊಡುತ್ತದೆ. ರಾಮನಾಮವನ್ನು ನಿತ್ಯ ಪಠಿಸಿದರೆ, ಶನಿಯ ಸಂಕಟವನ್ನು ದೂರ ಮಾಡುತ್ತಾನೆ.

ವೃಷಭ:ವೃಷಭ ರಾಶಿಯವರಿಗೆ ಏಕಾದಶದಲ್ಲಿ ಶನಿಯು ನಿರೀಕ್ಷೆಗೂ ಮೀರಿ ಅನುಗ್ರಹ ಮಾಡುತ್ತಾನೆ. ಗುರುವು ಜನ್ಮದಲ್ಲಿ ಇರುವುದರಿಂದ, ಮೇ 13ರ ನಂತರ ಗುರುಬಲವು ಸಿಕ್ಕಿ ಚಿಂತಿಸಿದ ಕಾರ್ಯಗಳಲ್ಲಿ ಜಯವೂ ಸಿಗುತ್ತದೆ. ಮಹಾಕಾಳಿ-ಮಹಾಲಕ್ಷ್ಮೀ ಮಹಾ ಸರಸ್ವತಿ ಸ್ವರೂಪ ಚಂಡಿಕಾ ದುರ್ಗಾ ಪರಮೇಶ್ವರಿಯನ್ನು ಶ್ರದ್ಧಾಭಕ್ತಿಯಿಂದ ಪೂಜಿಸಿರಿ.

ಮಿಥುನ:ಮಿಥುನ ರಾಶಿಯವರಿಗೆ ಇನ್ನೂ ಗುರುವು ದ್ವಾದಶದಲ್ಲಿ ಇರುವುದರಿಂದ, ಗುರು ವಿನ ಅನುಗ್ರಹ ಬೇಕಾಗುತ್ತದೆ. ದಶಮ ಶನಿಯು ಮಧ್ಯಮ ಗತಿಯಲ್ಲಿ ಫಲವನ್ನು ಕೊಟ್ಟು ಉತ್ಸಾಹ ಮೂಡಿಸಿ ಕೆಲವೊಂದು ಕೆಲಸ ಯಶಸ್ವಿಯಾಗುತ್ತದೆ. 12ರ ಗುರು ಲಗ್ನಕ್ಕೆ ಬಂದಾಗ ಹದಗೆಟ್ಟ ಮನಸ್ಸು ಸುಧಾರಿಸಿ ನಿಮ್ಮನ್ನು ನೀವು ತಿದ್ದಿ ನಡೆಯುವ ಸಮಯ ಬರುತ್ತದೆ. ಪಂಡರಾಪುರದ ಪುಂಡಲೀಕನನ್ನು ಪ್ರಾರ್ಥಿಸಿ ಪೂಜಿಸಿ.

ಕಟಕ: 9ನೇ ಮನೆಗೆ ಶನಿ ಬಂದಿರುವುದು ಶುಭ ಸಂಕೇತ. ಎರಡೂವರೆ ವರ್ಷಗಳು ಸಾಧಿಸಲಾಗದ ಕೆಲಸಗಳು ನಿರೀಕ್ಷಿಸಿದ ಮಟ್ಟಕ್ಕೆ ತಂದು, ಗುರುಬಲದಿಂದ ಪರಿಪೂರ್ಣವಾದ ಯಶಸ್ಸನ್ನು ಕಂಡುಕೊಳ್ಳಲು ಸುಸಮಯ. ತ್ರಿಪುರಾಸುರ ಸಂಹಾರದಲ್ಲಿ ಈಶ್ವರನ ಪಾತ್ರವೇ ಮನುಷ್ಯನಿಗೆ ದಾರಿದೀಪವಾಗುತ್ತದೆ. ರಾಜನಾಗಿ ಧನಕನಕ ವಸ್ತು ವಾಹನಾದಿಗಳು ಇದ್ದರೂ ದುರಹಂಕಾರದಿಂದ ಮೆರೆದಿದ್ದರಿಂದ ತ್ರಿಪುರಾಸುರನ ಸಂಹಾರ ಶಿವನ ಕೈಯಿಂದಾಯಿತು. ನಿಮ್ಮನ್ನು ಯಾರು ಕೆಟ್ಟ ದೃಷ್ಟಿಯಿಂದ ನೋಡುವರೋ, ಕೇಡನ್ನು ಬಯಸುವರೋ ನೀವು ಪೂಜಿಸುವ ಉಮಾ ಮಹೇಶ್ವರನೇ ಅವರಿಂದ ನಿಮ್ಮನ್ನು ಕಾಪಾಡುತ್ತಾನೆ.

ಸಿಂಹ: ಅಷ್ಟಮ ಶನಿ ಗುರು ಮನೆಯಲ್ಲಿ ಇದ್ದರೂ ಉಪಟಳದಿಂದ ತಪ್ಪಿಸಿಕೊಳ್ಳಲು ದೈವಾಂಶ ಸಂಭೂತರಾಗಿರಬೇಕು. ದೇವಾನುದೇವತೆಗಳು ಯಾವ ರೀತಿ ಅಸುರರನ್ನು ಸಂಹರಿಸಿ ದುಷ್ಟ ಶಿಕ್ಷೆ ಶಿಷ್ಟರಿಗೆ ರಕ್ಷೆಯನ್ನು ನೀಡಿದಂತೆ, ನಿಮ್ಮ ಮನಃ ಸಂಕಲ್ಪ, ದೃಢವಾದ ಮನಸ್ಸು ನಿಮ್ಮನ್ನು ಮೇಲಕ್ಕೆ ಕೊಂಡೊಯ್ಯುತ್ತದೆ. ಯಶಸ್ಸನ್ನು ಕಾಣಲು ಗಣಪತಿಯನ್ನು ಪ್ರಾರ್ಥಿಸಿ. ಆರೋಗ್ಯಕ್ಕಾಗಿ ಆದಿತ್ಯ ಹೃದಯ ಪಾರಾಯಣ, ಮಹಾಲಕ್ಷ್ಮಿ ಐಶ್ವರ್ಯಕ್ಕಾಗಿ ಪೂಜಿಸಿರಿ.

ಕನ್ಯಾ: ಸಪ್ತಮ ಶನಿಯಿದ್ದರೂ, ಗುರುವಿನ ಭಾಗ್ಯವೂ ಇರುವುದರಿಂದ, ಕಷ್ಟವನ್ನು ಲೆಕ್ಕಕ್ಕಿಡದೆ ಮುಂದೆ ಹೋಗುತ್ತಿದ್ದೀರಿ. ಗುರುಬಲವು ಮುಗಿದರೆ, ದೈವಬಲ, ಗ್ರಹಬಲ, ಅದೃಷ್ಟ ಬಲ ಏನೆಂಬುದನ್ನು ದೈವವೇ ತಿಳಿಸುತ್ತಾನೆ. ಮನುಷ್ಯನು ದೀನನಾಗಿ ದೈವಸ್ತುತಿ ಮಾಡಿದರೆ ಕಷ್ಟದಲ್ಲೂ ಸುಖವನ್ನು ತೋರಿಸುತ್ತಾನೆ.

ತುಲಾ: ತುಲಾ ರಾಶಿಯವರಿಗೆ ಧೈರ್ಯ, ಆರೋಗ್ಯ, ಉತ್ಸಾಹವು ಗ್ರಹಗಳ ಒಳ್ಳೆಯ ಸಂಪರ್ಕದಿಂದ ಬಂದಿದೆ. ಕಷ್ಟಕಾಲ ಕಳೆದು ಮುಂದಿನ ಹೆಜ್ಜೆಯಿಟ್ಟು ಸಾಗಬೇಕು. ದೊಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ. ಬೆಟ್ಟದಷ್ಟು ಆಸೆ, ಸಕಲ ಸಂಪತ್ತು, ಮರ್ಯಾದೆ ಪಡೆಯುವ ಕಾಲ. ಇವೆಲ್ಲವನ್ನು ಕೊಟ್ಟ ಗುರು ಗಳನ್ನು, ದೈವವನ್ನು ಮರೆಯದಿರಿ. ಲಲಿತಾಪರಮೇಶ್ವರಿಯ ಪ್ರಾರ್ಥನೆ ಇರಲಿ.

ವೃಶ್ಚಿಕ: ಶನಿಯು ಗುರುವಿನ ಮನೆಯಲ್ಲಿದ್ದು, ಕೆಲಸ ಕಾರ್ಯದಲ್ಲಿ ಅಡಚಣೆ ಉಂಟಾ ದರೂ, ಗುರು ಸಪ್ತಮದಲ್ಲಿರುವುದರಿಂದ ಸುಖಕ್ಕೆ, ಸಂತೋಷಕ್ಕೆ ಗೆಲುವಿಗೆ ಅಡ್ಡಿ ಮಾಡುವುದಿಲ್ಲ. ಒಂದು ತಿಂಗಳ ಕಾಲ ಗುರುಬಲವು ಇರುವುದರಿಂದ ಭಗವನ್ನಾಮ ಚಿಂತನೆಯಿಂದ ಯಶಸ್ಸು ನಿಮ್ಮ ಪಾಲಾಗಲಿ.

ಧನುಸ್ಸು: ನೀವು ಸಮಾಧಾನಚಿತ್ತರಾಗಿ ಬಂದದ್ದೆಲ್ಲ ಬರಲಿ ದೈವಕೃಪೆ ಇರಲಿ ಎಂಬ ಮಾತಿ ನಂತೆ ನಡೆಯಿರಿ. ನಿಮ್ಮ ರಕ್ಷಾ ದೇವತೆಯಾದ ಮಹಾವಿಷ್ಣುವಿನ ಸಹಸ್ರನಾಮ ಪಾರಾಯಣ ಮಾಡಿ, ಶತ್ರು ಗಳನ್ನು ಕಟ್ಟಿಹಾಕಲು ಪ್ರತ್ಯಂಗೀರಾ ಮಂತ್ರವನ್ನು ಪಠಿಸಿ. ಜನ್ಮತಾ ಗುರು ರಾಶಿಯವರಾದ್ದರಿಂದ ಗುರುವಿನ ಕರುಣೆ ನಿಮಗಿದೆ.

ಮಕರ: ಜೀವನಕ್ಕೆ ದುಡ್ಡು ಮಾತ್ರ ಅವಶ್ಯವಲ್ಲ. ಆರೋಗ್ಯವು ಕೈಕೊಟ್ಟರೆ ದುಡ್ಡ್ಡು ಸಹ ಏನೂ ಮಾಡುವುದಿಲ್ಲ. ಮಕರ ರಾಶಿಯವರಿಗೆ ಈಗ ಸುಸಮಯ. ನಿಮ್ಮ ಎಲ್ಲ ಕೆಲಸಗಳನ್ನು ನೀವೇ ವಿವೇಚನೆಯಿಂದ ಮಾಡಿದರೆ, ಈ ಎರಡೂವರೆ ವರ್ಷಗಳು ನಿಮಗೆ ಚಿನ್ನದಂತಹ ಸಮಯ. ಉಪಯೋಗಿಸಿಕೊಳ್ಳಿ. ಶ್ರೀಕೃಷ್ಣನನ್ನು ಪೂಜಿಸಿ.

ಕುಂಭ: ಕುಂಭ ರಾಶಿಯವರಿಗೆ ಕಾಲವು ಕೈಕೊಟ್ಟರೂ ಸಾಲವನ್ನು ಕೊಟ್ಟಿರುವವರು ಸುತ್ತುವರಿದರೂ, ಶೂಲೆಯಿಂದ ಚುಚ್ಚಿದಂತೆ ಆದರೂ, ಶನಿಯು ಗುರುವಿನ ಮನೆಯಾದ ಮೀನ ರಾಶಿಗೆ ಹೋಗಿದ್ದರೂ ನಿಮ್ಮ ಸಮಸ್ಯೆ ದೇವರೇ ಪರಿಹರಿಸುತ್ತಾನೆ. ಮಾರ್ಗವನ್ನು ಸರಿಮಾಡಿಕೊಡುವುದು ದೇವರೊಬ್ಬನೇ. ಅನಂತಪದ್ಮನಾಭನ ವ್ರತಕಥೆಯನ್ನು ಓದಿರಿ.

ಮೀನ:ಮೀನಾಧಿಪತಿ ಗುರು. ಗುರು ದ್ವಿತೀಯದಲ್ಲಿ ಇದ್ದಾನೆ. ಬರುವಂತಹ ವಿಪತ್ತಿಗೆ ಮನುಷ್ಯನೇ ಕಾರಣಕರ್ತ. ಲಗ್ನದಲ್ಲೇ ಶನಿಯಿರುವುದರಿಂದ ಏಕಾಏಕಿ ಯಾರನ್ನೂ ನಂಬದೇ ದೈವವನ್ನು ನಂಬಿರಿ. ವಿಚಾರಗಳು ಬಂದಾಗ ಆಳವಾಗಿ ಯೋಚಿಸಿ ನಿರ್ಧಾರ ತೆಗೆದುಕೊಂಡರೆ ನಷ್ಟ ಕಳೆದು ಲಾಭವಾಗುತ್ತದೆ. ಗುರು ದತ್ತಾತ್ರೇಯನನ್ನು ಪೂಜಿಸಿ, ಆರೋಗ್ಯಕ್ಕೆ ಶ್ರೀಕಂಠೇಶ್ವರನ ಪ್ರಾರ್ಥನೆ ಮಾಡಿರಿ.