ನ್ಯೂಸ್

ವಾರ ಭವಿಷ್ಯ: ಈ ರಾಶಿಯವರಿಗೆ ಅಷ್ಟಮದಲ್ಲಿ ಶನಿಯಿರುವುದರಿಂದ ಎದುರಾಗಲಿದೆ ಸಮಸ್ಯೆ, ನಿವಾರಣೆಗೆ ಹೀಗೆ ಮಾಡಿ...

ಮೇಷ: 2022ನೇ ಇಸವಿ ಆರಂಭವಾಗಿ ಸೂರ್ಯನ ತೇಜಾಂಶವು ಕಡಿಮೆಯಾಗಿ ಇನ್ನು ಕೆಲವೇ ದಿನದಲ್ಲಿ ಮಕರ ರಾಶಿಯನ್ನು ಸೇರಲಿದ್ದಾನೆ. ಮೇಷ ರಾಶಿಯವರು 11ರ ಗುರುವಿನ ಉಪಯೋಗ ಪಡೆದುಕೊಂಡು ಏನೇನು ಮಾಡಿದ್ದಾರೆಂದು ತಮ್ಮನ್ನು ತಾವೇ ಪ್ರಶ್ನೆ ಕೇಳಿಕೊಳ್ಳಬೇಕು. ಸತ್ಯ, ಧರ್ಮ, ದಯೆ, ಕರುಣೆ ಎಲ್ಲರಿಂದಲೂ ಶೋಭಿಸುವವರಿಗೆ ಸುಬ್ರಹ್ಮಣ್ಯನ ಆಶೀರ್ವಾದ ಪರಿಪೂರ್ಣವಾಗಿ ಇರುತ್ತದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಎಲ್ಲರಿಗೂ ಉಪಕಾರಿಯಾಗಿ ಬದುಕಬೇಕು. ಅಸತ್ಯ ಮಾತನಾಡಬಾರದು. ಸಮಯವು ಚೆನ್ನಾಗಿದೆ.

ವೃಷಭ: ಧರ್ಮವನ್ನು, ದೇವರನ್ನು ಏಕಪಕ್ಷೀಯವಾಗಿ ನೋಡದೆ ಎಲ್ಲರ ಮನಸ್ಸನ್ನು ಅರಿತು ಮಾತನಾಡಬೇಕು. ನಿಮ್ಮ ಬಳಿಯಿರುವ ಒಂದು ಜಟಿಲವಾದ ಪ್ರಶ್ನೆಗೆ ದೇವರೇ ಉತ್ತರಿಸುತ್ತಾನೆ. ದೇವರಲ್ಲಿ ಇಟ್ಟ ಆಣೆ, ಕೊಟ್ಟ ಮಾತು ಎಂದಿಗೂ ಸುಳ್ಳಾಗಬಾರದು. ಏಪ್ರಿಲ್ ನಂತರದಲ್ಲಿ ಗುರು ಏಕಾದಶಕ್ಕೆ ಬಂದಾಗ ನಿಮ್ಮ ಜೀವನದಲ್ಲಿ ಬದಲಾವಣೆ ಕಾಣುತ್ತೀರ. ಸಮಯ ಚೆನ್ನಾಗಿದೆ. ಯಾವುದೇ ವಿಷಯದ ಬಗ್ಗೆ ನಿರ್ಣಯ ಮತ್ತು ನಿರ್ಧಾರ ಕೈಗೊಳ್ಳುವ ಮುನ್ನ ಹಿರಿಯರನ್ನು, ಗುರುಗಳನ್ನು ಕೇಳಿ ಮುನ್ನಡೆಯಿರಿ.

ಮಿಥುನ: ಒಂಭತ್ತರಲ್ಲಿ ಗುರುವಿದ್ದಾನೆ. ಶುಭಕಾಲ ಅನುಭವಿಸುವಿರಿ. ಅಷ್ಟಮದಲ್ಲಿ ಶನಿಯಿರುವುದನ್ನು ಮರೆಯಬೇಡಿ. ಅನಾವಶ್ಯಕವಾಗಿ ಇತರರ ವಿಷಯದ ಚರ್ಚೆ ಮಾಡಬೇಡಿ. ದೋಷಾರೋಪಣೆ, ಅತೃಪ್ತಿ ಇವೆಲ್ಲವೂ ಮನಸ್ಸಿನ ಆರೋಗ್ಯವನ್ನು ಕೆಡಿಸುತ್ತವೆ. ದೈವವನ್ನು ನೆನೆದು ಅನನ್ಯವಾಗಿ ಲಕ್ಷ್ಮೀ ನರಸಿಂಹನನ್ನು ಪ್ರಾರ್ಥಿಸಿ. ಸುಖವನ್ನು ಪಡೆದುಕೊಳ್ಳಿ.

ಕಟಕ: ಸಪ್ತಮ-ಅಷ್ಟಮ ಗುರು-ಶನಿಗ್ರಹಗಳು ಅಷ್ಟು ಶುಭದಾಯಕ ಅಲ್ಲದಿದ್ದರೂ ಪೂರ್ವಪುಣ್ಯವು ಕಾಪಾಡಿ ಮುಂದೆ ಸಾಗಿಸುತ್ತದೆ. ಅಷ್ಟಮ ಗುರುವಿಗೆ ಮೃತ್ಯುಂಜಯ ನೀಲಕಂಠನನ್ನು ಪ್ರಾರ್ಥಿಸಿ. ಸಪ್ತಮ ಶನಿಗೆ ಮಕರ ಸಂಕ್ರಾಂತಿ ಸಮಯದಲ್ಲಿ ಎಳ್ಳು, ಎಳ್ಳುಂಡೆ, ಎಳ್ಳೆಣ್ಣೆ ಬೆಲ್ಲದಲ್ಲಿಯೇ ಎಲ್ಲ ಪರಿಕರಗಳನ್ನು ಹಾಕಿ ಎಳ್ಳನ್ನು ಮಿಶ್ರ ಮಾಡಿ ಹಂಚಿ. ಸುಖ-ಶಾಂತಿ ಲಭಿಸುತ್ತದೆ. ಖರ್ಚುವೆಚ್ಚ ದೇವರೇ ಭರಿಸುತ್ತಾನೆ. ‘ಓಂ ಹ್ರೀಂ ನಮಃ ಶಿವಾಯ’ ಮಂತ್ರ ಪಠಿಸಿ.

ಸಿಂಹ: ಜಗತ್ತಿನಲ್ಲಿ ತೇಜೋಮಯನಾಗಿರುವವನು ಸೂರ್ಯ. ಅವನಿಂದ ಮತ್ತು ಸಪ್ತಮ ಗುರು, ಷಷ್ಠ ಶನಿಯಿಂದ ಪರಿಪೂರ್ಣ ಅನುಗ್ರಹ ಆನುಭವಿಸುತ್ತಿರುವ ಏಕೈಕ ರಾಶಿ ಸಿಂಹ. ಯಾವುದೇ ಕೊರತೆಯಿಲ್ಲ. ದೇವರನ್ನು ಎಂದು ಬಿಟ್ಟಿರೋ ಅಂದು ಕೆಟ್ಟಿರಿ. ಸೂರ್ಯಾಷ್ಟಕವನ್ನು ಓದಿ. ಆದಿತ್ಯಹೃದಯ ಪಾರಾಯಣ ಮಾಡಿ. ಮನುಷ್ಯರ ಒಳಿತಿಗಾಗಿ ಚಿಂತಿಸುತ್ತ ನಡೆದರೆ ದೇವರು ಕಾಪಾಡುತ್ತಾನೆ.

ಕನ್ಯಾ: ಹೆಣ್ಣು ಮುಗುಳ್ನಕ್ಕರೆ ಶಾರದೆ, ಸಿಟ್ಟಾದರೆ ಕಾಳಿಯಾಗುತ್ತಾಳೆ. ಅಶಾಂತಿ ತಲೆದೋರಿದರೆ ಚಂಡಿಕೆಯಾಗುತ್ತಾಳೆ. ಇದನ್ನು ಅರ್ಥೈಸಿಕೊಂಡು 4 ತಿಂಗಳ ಕಾಲ ಎಚ್ಚರವಾಗಿರಿ. ಆರೋಗ್ಯ ಕಾಪಾಡಿಕೊಳ್ಳಲು ದುರ್ಗೆಯನ್ನು ಪ್ರಾರ್ಥಿಸಿ. ಅದರ ಬೆನ್ನಹಿಂದೆಯೇ ಸುವರ್ಣ ಕಾಲವು ಬರುತ್ತದೆ. ನಿಮ್ಮ ಶಕ್ತಿ-ಭಕ್ತಿಯನ್ನು ಅರಿತು ಲಕ್ಷ್ಮೀ ಸತ್ಯನಾರಾಯಣನನ್ನು ಪೂಜಿಸಿ. ನಿಮ್ಮನ್ನು ಕಾಪಾಡುತ್ತಾನೆ.

ತುಲಾ: ಚತುರ್ಥದಲ್ಲಿ ಶನಿಯಿದ್ದರೂ, ಪಂಚಮ ಗುರು ಒಬ್ಬನೇ ಸಾಕು ಬೇಡಿದ್ದನ್ನು ಕೊಡಲು. ಗುರುದತ್ತಾತ್ರೇಯನನ್ನು ಪೂಜಿಸಿ, ಸಂಕಷ್ಟಹರ ಗಣಪತಿ ವ್ರತ ಕಥೆಯನ್ನು ಓದಿ. ಯಾವುದೇ ಸಮಸ್ಯೆ ಬಂದರೂ ಗುರುವೇ ಮುನ್ನಡೆಸುತ್ತಾನೆ. ಪಂಚಮ ಗುರುವು ನ್ಯಾಯಾಲಯದಲ್ಲೋ ಒಳ್ಳೆಯ ವಿಚಾರದಲ್ಲೋ ನಿಮಗೆ ಜಯವನ್ನು ತಂದುಕೊಡುತ್ತಾನೆ.

ವೃಶ್ಚಿಕ: ಸುಬ್ರಹ್ಮಣ್ಯ, ಗಣಪತಿಯನ್ನು ಪೂಜಿಸಿ. ಏನೇನು ಬೇಕೋ ಎಲ್ಲವನ್ನೂ ಪಡೆಯಬಹುದು. ದೇವರ ಹೆಸರಲ್ಲಿ ನಿರ್ದಿಷ್ಟ ಸೇವೆ ಮಾಡುತ್ತೇವೆಂದು ಪ್ರಾರ್ಥನೆ ಇಟ್ಟು, ತಪ್ಪಿದರೂ ತಪ್ಪೇ. ಭೂಲೋಕದಲ್ಲಿ ಯಾರಿಗೆ ಮಾತು ಕೊಟ್ಟರೂ ಉಳಿಸಿಕೊಳ್ಳದಿರುವುದು ತಪ್ಪೇ. ಮಾಡಿದ ತಪು್ಪ ತಿದ್ದಿ ದೇವರು ಸಮಯ, ಬುದ್ಧಿ, ಜ್ಞಾನವನ್ನು ನೀಡುತ್ತಾನೆ. ವ್ಯವಹಾರ ಶುದ್ಧತೆ ಇರಲಿ. ದೇವರಲ್ಲಿ ಅಪಾರ ಸಂಬಿಕೆಯಿರಲಿ. ಸುಗಮವಾಗಿ ಧನ, ಕನಕ ವಸ್ತು, ವಾಹನಾದಿಗಳು ಬಂದುಸೇರುತ್ತವೆ.

ಧನು: ದೇವರು ಕೊಟ್ಟ ಕೆಲಸವನ್ನು ಆಚ್ಚುಕಟ್ಟಾಗಿ ಮಾಡಿ. ಅನ್ಯರ ಚಿಂತೆ ಬೇಡ. ಬೇಡರ ಕಣ್ಣಪ್ಪ ದೇವಸ್ಥಾನವನ್ನು ಹುಡುಕಿ ಅವನನ್ನು ಪೂಜಿಸಿ. ನಂತರದಲ್ಲಿ ಗುರುಗಣೇಶನನ್ನು ಪ್ರಾರ್ಥಿಸಿ. ಗುರು ರಾಶಿಯಲ್ಲಿ ಹುಟ್ಟಿದವರು ಗುರುವಿನ ದಾಕ್ಷಿಣ್ಯದಲ್ಲೇ ಬದುಕಬೇಕು. ಜನ್ಮಕೊಟ್ಟವರು ಗುರುಸ್ಥಾನದಲ್ಲೇ ಇರುತ್ತಾರೆ. ಸರಿಯಾಗಿ ನಡೆದರೆ ಸಾಕ್ಷಾತ್ ವಾಮದೇವರೇ ನಿಮ್ಮನ್ನು ಕಾಪಾಡುವುದರಲ್ಲಿ ಸಂಶಯಬೇಡ. ಆರೋಗ್ಯ, ಸುಖ, ಧನದಲ್ಲಿ ಪ್ರಗತಿ ಸಾಧಿಸುತ್ತೀರ.

ಮಕರ: ನಮ್ಮಲ್ಲಿ ನ್ಯಾಯ, ನೀತಿಯಿದ್ದರೆ ಯಾರಿಗೂ ಹೆದರುವ ಅಗತ್ಯವಿಲ್ಲ. ನ್ಯಾಯ, ನೀತಿ, ಧರ್ಮದಿಂದ ಸಾಗಿರಿ. ಶನಿಯ ಭಯ ಬೇಡ. ಅವನೇ ಕಾಪಾಡಿ ಮುನ್ನಡೆಸುತ್ತಾನೆ. ಆರೋಗ್ಯವಾಗಿರಲು ದೈವಪ್ರಾರ್ಥನೆ ಇರಲಿ. ನಡೆದುಬಂದ ದಾರಿಯಲ್ಲಿ ಸಾಗಿ. ಶನಿ ಅರ್ಚನೆಯನ್ನು ಬಿಲ್ವಪತ್ರೆಯಲ್ಲಿ ಮಾಡಿರಿ. ದ್ವಿತೀಯ ಗುರುವಿಗೆ ಗುರುಗಣೇಶನನ್ನು ಪೂಜಿಸಿ.

ಕುಂಭ: ಮನುಷ್ಯನ ಬಾಯಾರಿಕೆಯನ್ನು ನಿವಾರಿಸಿ ಅಮೃತಪಾನ ಮಾಡಿಸುವ ಭಗವಂತನನ್ನು ಎಂದಿಗೂ ಮರೆಯದಿರಿ. ನಿಮ್ಮ ಚಿತ್ತ ಸದಾ ಅವನ ಮೇಲಿರಲಿ. ಸಾಯಿಸದಾಶಿವನನ್ನು ಪೂಜಿಸಿ. ಏಪ್ರಿಲ್ ವರೆಗೂ ಸೋಮವಾರದಂದು ಏಕಭುಕ್ತಿ ಮಾಡಿ ಶಿವಸಹಸ್ರನಾಮ, ಶಿವಪಂಚಾಕ್ಷರಿ ಜಪ ಮಾಡಿ ಸಕಲ ಭೋಗಭಾಗ್ಯ ಪಡೆದು ಮುಂದೆ ಬಾಳನ್ನು ನಡೆಸಬಹುದು.

ಮೀನ: ಮನುಷ್ಯನ ಪುಣ್ಯಾಂಶದಲ್ಲಿ ಏನೇನು ಠೇವಣಿ ಇರುತ್ತದೋ ಅದನ್ನು ಪರಮಾತ್ಮನು ಕೊಟ್ಟೆಕೊಡುತ್ತಾನೆ. ಇಲ್ಲದ್ದನ್ನು ಯಾವ ದೇವರು ತಂದುಕೊಡಲು ಸಾಧ್ಯವಿಲ್ಲ. ಆದರೆ ಈ ಜಗತ್ತಿಗೆ ದೊರೆಯಾದ ನಾರಾಯಣ ಸ್ವರೂಪಿ ತ್ರಿಮೂರ್ತಿ ಅವತಾರ ದತ್ತಾತ್ರೇಯ ಒಬ್ಬನೇ ಸಾಕು ಬೇಡಿದ್ದನ್ನು ಕೊಡಲು. 11ರಲ್ಲಿ ಶನಿ ಶುಭ-ಲಾಭ ತಂದು ಕೊಡುತ್ತಾನೆ. 12ರ ಗುರುವಿಗೆ ಅಚಂಚಲ ಭಕ್ತಿಯಿಂದ ದತ್ತನನ್ನು ಪೂಜಿಸಿ-ಔದುಂಬರ ವೃಕ್ಷಕ್ಕೆ 21 ಬಾರಿ ಪ್ರದಕ್ಷಿಣೆ, ನಮಸ್ಕಾರ ಮಾಡಿ. ಒಳ್ಳೆಯದಾಗುವುದರಲ್ಲಿ ಸಂಶಯವಿಲ್ಲ.