ಬೆಂಗಳೂರು: ಪೊಲೀಸ್ ಅಧಿಕಾರಿ, ಸಿಬ್ಬಂದಿ ವರ್ಗಾವಣೆ ವಿಳಂಬ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಜಿ.ಪರಮೇಶ್ವರ, ಒಂದು ವಾರದೊಳಗೆ ಅಂತಿಮ ಮಾಡುತ್ತೇವೆ. ಬಹುಶಃ ಇನ್ನೊಂದು ವಾರದಲ್ಲಿ ಪೊಲೀಸ್ ಇಲಾಖೆ ವರ್ಗಾವಣೆ ಪೂರ್ಣವಾಗಲಿದೆ ಎಂದು ಹೇಳಿದ್ದಾರೆ.
ವರ್ಗಾವಣೆಗೆ ಶಾಸಕರ ಶಿಫಾರಸು ಪತ್ರ ಒಂದು ಹಂತ. ಶಾಸಕರ ಶಿಫಾರಸು ಪತ್ರದ ಜತೆ ಪರಿಶೀಲನೆಯನ್ನೂ ಮಾಡಿ ವರ್ಗಾವಣೆ ಮಾಡಲಾಗುತ್ತದೆ ಎಂದು ಹೇಳಿದರು.
ನ್ಯಾ.ಸದಾಶಿವ ಆಯೋಗದ ಕುರಿತು ಪ್ರತಿಕ್ರಿಯೆ ನೀಡಿ, ಸದಾಶಿವ ಆಯೋಗ ವರದಿ ಜಾರಿಗೆ ನಾವು ಬದ್ಧರಾಗಿದ್ದೇವೆ. ಬಿಜೆಪಿಯವರು ಈ ಹಿಂದೆ ಶೇ.2ರಂತೆ ಹಂಚಿಕೆ ಮಾಡಿದ್ದಾರೆ. ಆದರೆ ಅವರ ಪಕ್ಷದ ಕೇಂದ್ರ ಮಂತ್ರಿ ನಾರಾಯಣಸ್ವಾಮಿಯೇ ಇದು ಸಾಧ್ಯವಿಲ್ಲ ಅಂತ ಹೇಳಿದ್ದಾರೆ. ಹೀಗಾಗಿ ನಾವು ಕುಳಿತು ಚರ್ಚೆ ಮಾಡುತ್ತೇನೆ. ಯಾರ‌್ಯಾರಿಗೆ ಎಷ್ಟೆಷ್ಟು ಮೀಸಲಾತಿ ಹಂಚಿಕೆ ಅಂತ ತೀರ್ಮಾನ ಮಾಡುತ್ತೇವೆ ಎಂದರು.
ರಾಹುಲ್ ಗಾಂಧಿ ಅನರ್ಹತೆ ವಾಪಾಸ್ ಪಡೆದ ವಿಚಾರದ ಬಗ್ಗೆ ಮಾತನಾಡಿ, ನ್ಯಾಯಾಲಯ ನಿಜವಾಗಿ ನ್ಯಾಯ ಎತ್ತಿ ಹಿಡಿಯುತ್ತೆ ಅನ್ನೋದಕ್ಕೆ ಇದು ಒಂದು ನಿದರ್ಶನ. ರಾಹುಲ್ ಪ್ರಚಾರದ ವೇಳೆ ಆಡಿದ ಒಂದು ಮಾತಿಗೆ ಲಕ್ಷಾಂತರ ಮತದಾರರು ಆಯ್ಕೆ ಮಾಡಿದ ಸಂಸತ್ ಸದಸ್ಯತ್ವ ರದ್ದು ಮಾಡಿದ್ದರು. ಅದು ನ್ಯಾಯ ಸಮ್ಮತವಲ್ಲ ಎಂಬ ದೃಷ್ಟಿಕೋನದಲ್ಲಿ ಉಚ್ಚ ನ್ಯಾಯಾಲಯ ತೀರ್ಪು ನೀಡಿದೆ. ಬಹುಶಃ ಮುಂದೆ ಅಂತಿಮ ತೀರ್ಪು ರಾಹುಲ್ ಪರ ಬರಲಿದೆ. ಇದಕ್ಕೂ ಕೆಟ್ಟದಾಗಿ ಅವಹೇಳನವಾಗಿ ಮಾತನಾಡಿರುವುದನ್ನ ನೋಡಿದ್ದೇವೆ ಎಂದರು.