ಹೈದರಾಬಾದ್: ಇನ್ನೇನು ಕೆಲವೇ ಗಂಟೆಗಳಲ್ಲಿ ವರ ತಾಳಿ ಕಟ್ಟಬೇಕು ಅಷ್ಟರಲ್ಲಿ ವಧು ಸಾವಿನ ಹಾದಿ ಹಿಡಿದ ಆತಂಕಕಾರಿ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ನವೀಪೇಟೆಯಲ್ಲಿ ನಡೆದಿದೆ.
ಮೃತ ವಧುವನ್ನು ರಾವಲ್ಲಿ ಎಂದು ಗುರುತಿಸಲಾಗಿದೆ. ಇಂದು ಮುಂಜಾನೆ ಈ ದುರ್ಘಟನೆ ನಡೆದಿದ್ದು, ಸಾವಿನ ಸುದ್ದಿ ಕೇಳಿ ಮದುವೆಗೆ ಬಂದಿದ್ದವರರೆಲ್ಲ ಆಘಾತಕ್ಕೊಳಗಾದರು. ಒಂದು ಕಡೆ ವಧು ಮತ್ತು ವರನ ಕುಟುಂಬಸ್ಥುರು ಮದುವೆಯ ಅಂತಿಮ ಸಿದ್ಧತೆಯಲ್ಲಿ ತೊಡಗಿದ್ದರು. ಇನ್ನೊಂದು ಕಡೆ ವಧು ರಾವಲ್ಲಿ ಸಾವಿನ ಹಾದಿಯನ್ನು ಹಿಡಿದಿದ್ದಾಳೆ.
ಬಲವಂತವದ ಮದುವೆ ಇಷ್ಟವಿಲ್ಲದ ಕಾರಣ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಇನ್ನೊಂದೆಡೆ ಭಾವಿ ಪತಿಯ ಕಿರುಕುಳದಿಂದ ರಾವಲ್ಲಿ ಸಾವಿಗೀಡಾಗಿದ್ದಾಳೆ ಎಂದು ಪಾಲಕರು ಆರೋಪ ಮಾಡಿದ್ದಾರೆ. ಆದರೆ, ನಿಖರ ಕಾರಣ ಏನು ಎಂಬುದು ಯಾರಿಗೂ ತಿಳಿದಿಲ್ಲ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರಾವಲ್ಲಿ ಮದುವೆ ನಿಜಾಮಾಬಾದ್ ಮೂಲದ ಸಂತೋಷ್ ಎಂಬುವರ ಜೊತೆ ನಿಗದಿಯಾಗಿತ್ತು. ಆದರೆ, ಮದುವೆ ದಿನವೇ ನಡೆದ ದುರಂತ ಎಲ್ಲರನ್ನು ಆಘಾತಕ್ಕೆ ದೂಡಿದ್ದು, ಮೃತಳ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. (ಏಜೆನ್ಸೀಸ್)