ವೆನಿಸ್: ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ (61) ವಿವಾಹ ಪತ್ರಕರ್ತೆ ಲಾರೆನ್ ಸ್ಯಾಂಚೆಜ್ (55) ಜತೆ ಇಟಲಿಯ ವೆನಿಸ್ನಲ್ಲಿರುವ ಐತಿಹಾಸಿಕ ಸ್ಯಾನ್ ಜಾರ್ಜಿಯೋ ದ್ವೀಪದಲ್ಲಿ ನೆರವೇರಿತು. ಜೂ. 26ರಿಂದ 28ರವರೆಗೆ 3 ದಿನಗಳ ಕಾಲ ನಡೆದ ಈ ‘ಶತಮಾನದ ಅದ್ದೂರಿ ಮದುವೆ’ಗೆ ಜಗತ್ತಿನ ವಿವಿಧ ದೇಶಗಳ 250ಕ್ಕೂ ಹೆಚ್ಚು ‘ಅತಿಗಣ್ಯ ವ್ಯಕ್ತಿ’ಗಳು ಸಾಕ್ಷಿಯಾದರು. ಈ ವಿವಾಹಕ್ಕೆ ಒಟ್ಟು 480 ಕೋಟಿ ರೂ. ವೆಚ್ಚ ಮಾಡಲಾಗಿದೆ. ಬೆಜೋಸ್ ಕಪ್ಪು ಬಣ್ಣದ ಕ್ಲಾಸಿಕ್ ಟಕ್ಸೆಡೊ (ಸೂಟ್ನಂತಹ ದಿರಿಸು) ಧರಿಸಿದ್ದರೆ, ವಧು ಸ್ಯಾಂಚೆಜ್ ಬಿಳಿ ಬಣ್ಣದ ವಿಶಿಷ್ಟ ವಿನ್ಯಾಸದ ಸಾಂಪ್ರದಾಯಿಕ ಗೌನ್ ತೊಟ್ಟಿದ್ದರು. ಈ ಗೌನ್ ತಯಾರಿಸಲು 18 ತಿಂಗಳಿಗಿಂತ ಹೆಚ್ಚು ಸಮಯ ಹಿಡಿದಿದೆ ಎನ್ನಲಾಗಿದೆ. ಸ್ಯಾಂಚೆಜ್ ಈ ಮದುವೆಯ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಅವು ಭಾರಿ ವೈರಲ್ ಆಗಿವೆ.
ಗಿಫ್ಟ್ ಬದಲು ದೇಣಿಗೆ: ಉಡುಗೊರೆ ನೀಡುವ ಬದಲು ಅದೇ ಹಣವನ್ನು ವೆನಿಸ್ನ ಸಂಸ್ಥೆಗಳಿಗೆ ದೇಣಿಗೆ ನೀಡುವಂತೆ ಆಮಂತ್ರಿತರಿಗೆ ಆಹ್ವಾನ ಪತ್ರಿಕೆಯಲ್ಲೇ ಮನವಿ ಮಾಡಲಾಗಿತ್ತು. ಇದಲ್ಲದೆ ವಧು-ವರ ಕೂಡ ವೆನಿಸ್ನ ಐತಿಹಾಸಿಕ ಸ್ಥಳಗಳ ರಕ್ಷಣೆಗಾಗಿ 9.5 ಕೋಟಿ ರೂ. ದೇಣಿಗೆ ನೀಡಿದರು.
ಯಾರ್ಯಾರು ಬಂದಿದ್ದರು?: ಬಿಲ್ ಗೇಟ್ಸ್, ಇವಾಂಕಾ ಟ್ರಂಪ್, ಲಿಯೋನಾಡೋ ಡಿಕ್ಯಾಪ್ರಿಯೋ, ಆರ್ಲಾಂಡೊ ಬ್ಲೂಮ್ ಟಾಮ್ ಬ್ರ್ಯಾಡಿ, ಜೋರ್ಡಾನ್ನ ರಾಣಿ ರಾನಿಯಾ, ಕ್ರಿಸ್ ಜೆನ್ನರ್, ಓಪ್ರಾ ವಿನ್ಫ್ರೇ, ಕಿಮ್ ಕರ್ದಾಶಿಯಾನ್ ಸೇರಿದಂತೆ ಜಗತ್ಪ್ರಸಿದ್ಧ ವ್ಯಕ್ತಿಗಳು ಮದುವೆಗೆ ಬಂದಿದ್ದರು. ಬಹುತೇಕ ಮಹಿಳಾ ಗಣ್ಯರು ಪಿಂಕ್ ಗೌನ್ ಧರಿಸಿ, ಐಷಾರಾಮಿ ವಾಟರ್ ಟ್ಯಾಕ್ಸಿಗಳಲ್ಲಿ ಬಂದಿಳಿದರು.
ಮದುವೆಗೆ ಮೊದಲೇ ಒಪ್ಪಂದ: ಬೆಜೋಸ್ 244 ಶತಕೋಟಿ ಡಾಲರ್ ಸಂಪತ್ತಿನ ಒಡೆಯ. ಮುಂದಿನ ದಿನಗಳಲ್ಲಿ ವಿಚ್ಛೇದನವಾಗಿ, ಸಂಪತ್ತಿನ ಹಂಚಿಕೆ ವಿಷಯದಲ್ಲಿ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ಮದುವೆಗೆ ಮೊದಲೇ ವಧು-ವರನ ನಡುವೆ ಸ್ಪಷ್ಟ ಲಿಖಿತ ಒಪ್ಪಂದವಾಗಿದೆ ಎನ್ನಲಾಗಿದೆ. ಈ ಮದುವೆಯು ನಗರದ ಹಾಲ್ನಲ್ಲಿ ನಡೆಯದ ಕಾರಣ, ಇಟಲಿಯ ಕಾನೂನಿನ ಪ್ರಕಾರ ಇದು ವೈವಾಹಿಕ ಕಟ್ಟುಪಾಡುಗಳಿಗೆ ಒಳಪಡುವುದಿಲ್ಲ ಎಂದೂ ಹೇಳಲಾಗುತ್ತಿದೆ. ಸಾಕಷ್ಟು ಹಿಂದೆಯೇ ಇವರಿಬ್ಬರೂ ಅಮೆರಿಕದಲ್ಲಿ ಕಾನೂನಾತ್ಮಕವಾಗಿ ಮದುವೆ ಮಾಡಿಕೊಂಡಿದ್ದಾರೆ ಎಂದೂ ಕೆಲವರು ಹೇಳುತ್ತಿದ್ದಾರೆ.
ಇಬ್ಬರಿಗೂ 2ನೇ ಮದುವೆ: ಬೆಜೋಸ್ 1993ರಲ್ಲಿ ಮೆಕೆಂಜಿ ಸ್ಕಾಟ್ ಅವರನ್ನು ಮದುವೆ ಆಗಿದ್ದರು. 2019ರಲ್ಲಿ ವಿಚ್ಛೇದನವಾಗಿತ್ತು. ಅವರಿಗೆ 4 ಮಕ್ಕಳಿದ್ದಾರೆ. ಬಳಿಕ ಸ್ಯಾಂಚೆಜ್ ಜತೆಗಿನ ಬೆಜೋಸ್ ಸಂಬಂಧ ಬಹಿರಂಗವಾಗಿತ್ತು. ಟಿವಿ ನ್ಯೂಸ್ ರಿಪೋರ್ಟರ್ ಮತ್ತು ಆಂಕರ್ ಆಗಿದ್ದ ಸ್ಯಾಂಚೆಜ್ಗೂ 2005 ರಲ್ಲಿ ಪ್ಯಾಟ್ರಿಕ್ ವೈಟ್ಸೆಲ್ ಜತೆ ವಿವಾಹವಾಗಿತ್ತು. 2023ರಲ್ಲಿ ವಿಚ್ಛೇದನವಾಗಿತ್ತು. ಅವರಿಗೆ ಮೂವರು ಮಕ್ಕಳಿದ್ದಾರೆ.
ಆರ್ಥಿಕ ಪರಿಣಾಮ: ಈ ಮದುವೆಯಿಂದಾಗಿ ವೆನಿಸ್ನ ವಿವಿಧ ವಲಯಗಳಲ್ಲಿ ಅಂದಾಜು 9,582 ಕೋಟಿ ರೂ.ನಷ್ಟು ಹಣಕಾಸಿನ ವಹಿವಾಟು ನಡೆದಿದೆ. ಅಷ್ಟರಮಟ್ಟಿಗೆ ವೆನಿಸ್ನ ಆರ್ಥಿಕತೆಗೆ ಲಾಭವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.