ನ್ಯೂಸ್

ಬಹಳ ಸಂಭ್ರಮದಿಂದ ನಡೆಯುತ್ತಿದ್ದ ಮದುವೆಗೆ ಹುಳಿ ಹಿಂಡಿದ ಮುಸುಕುಧಾರಿ..!

ಚಂಡೀಗಢ (ಪಂಜಾಬ್​): ಮುಸುಕುಧಾರಿಯೊಬ್ಬನ ದುಷ್ಕೃತ್ಯದಿಂದ ಚಂಡೀಗಢದ ಹೋಟೆಲ್​ ಒಂದರಲ್ಲಿ ಬಹಳ ಸಂಭ್ರಮ ಸಡಗರದಿಂದ ನಡೆಯುತ್ತಿದ್ದ ಮದುವೆ ಒಂದು ಕ್ಷಣ ಕಣ್ಣೀರಿಗೆ ಜಾರಿದ ಘಟನೆ ನಡೆದಿದೆ.

ಸುಮಾರು 3 ಲಕ್ಷ ಮೌಲ್ಯದ ಉಡುಗೊರೆ, ಡೈಮಂಡ್​ ರಿಂಗ್​ ಮತ್ತು ಎರಡು ಮೊಬೈಲ್​ಗಳನ್ನು ವ್ಯಕ್ತಿಯೊಬ್ಬ ಕಳ್ಳತನ ಮಾಡಿರುವುದು ಮದುವೆ ಸಂಭ್ರಮಕ್ಕೆ ಹುಳಿ ಹಿಂಡಿದಂತಾಗಿದೆ.

ಉಷಾ ಠಾಕೂರ್​ ಎಂಬುವರು ತನ್ನ ಮಗಳ ಮದುವೆಯನ್ನು ಚಂಡೀಗಢದ 22ನೇ ಸೆಕ್ಟರ್​ನ ಹೋಟೆಲ್​ ಒಂದರಲ್ಲಿ ಆಯೋಜಿಸಿದ್ದರು. ಈ ವೇಳೆ ಅವರು ಒಂದು ಹ್ಯಾಂಡ್​ಬ್ಯಾಗ್​​ ಅನ್ನು ತೆಗೆದುಕೊಂಡು ಹೋಗಿದ್ದರಂತೆ. ಅದರಲ್ಲಿ ನವದಂಪತಿಗೆ ನೀಡಿದ 3 ಲಕ್ಷ ರೂ. ಮೌಲ್ಯದ ಉಡುಗೊರೆ ಸೇರಿದಂತೆ ಡೈಮಂಡ್​ ರಿಂಗ್​ ಮತ್ತು ಎರಡು ಮೊಬೈಲ್​ಗಳನ್ನು ಇಟ್ಟಿದ್ದರಂತೆ. ಆದರೆ, ಸ್ವಲ್ಪ ಹೊತ್ತಿನ ಬಳಿಕ ನೋಡಿದಾಗ ಹ್ಯಾಂಡ್​ ಬ್ಯಾಗ್​​ ಇರಲಿಲ್ಲ ಎಂದು ಉಷಾ ಹೇಳಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಬಳಿಕ ಮದುವೆ ನಡೆದ ಹೋಟೆಲ್​ನ ಸಿಸಿಟಿವಿ ಪರಿಶೀಲಿಸಿದ ಪೊಲೀಸರಿಗೆ ಸಂಬಧಿಕರ ವೇಷದಲ್ಲಿ ಬಂದಿದ್ದ ಮುಸುಕುಧಾರಿಯ ದುಷ್ಕೃತ್ಯ ಬಯಲಾಗಿದೆ. ಹ್ಯಾಂಡ್​ಬ್ಯಾಗ್​ ಹಿಡಿದುಕೊಂಡು ಹೋಡೆಲ್​ನಿಂದ ಹೊರಗಡೆ ಹೋಗಿತ್ತಿರುವ ದೃಶ್ಯ ಸೆರೆಯಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಖದೀಮನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. (ಏಜೆನ್ಸೀಸ್​)