| ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಅ. 17ರಂದು ನಡೆಯಲಿರುವ ಪವಿತ್ರ ಕಾವೇರಿ ತೀರ್ಥೋದ್ಭವ ಸಂದರ್ಭ ತಲಕಾವೇರಿ ಕ್ಷೇತ್ರ ಪ್ರವೇಶಕ್ಕೆ ಅವಕಾಶ ನೀಡುವಂತೆ ಭಕ್ತರಿಂದ ಒತ್ತಡ ಹೆಚ್ಚಾಗುತ್ತಿದೆ. ಕೋವಿಡ್ ನಿಯಂತ್ರಣಕ್ಕಾಗಿ ಆಯ್ದ 55 ಜನರಿಗೆ ಮಾತ್ರ ಅವಕಾಶ ನೀಡುವ ನಿರ್ಧಾರಕ್ಕೆ ಜಿಲ್ಲಾಡಳಿತ ಬಂದಿದೆ. ಕೊಡಗಿನಲ್ಲಿ ಕರೊನಾ ಸೋಂಕು ಹರಡುವಿಕೆ ಗರಿಷ್ಠ ಮಟ್ಟಕ್ಕೆ ತಲುಪಿರುವುದರಿಂದ ಈ ತೀರ್ಮಾನ ಕೈಗೊಂಡಿರುವುದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸ್ಪಷ್ಟಪಡಿಸಿದ್ದಾರೆ.
ಈ ನಡುವೆ, ತಲಕಾವೇರಿಯ ಕಾವೇರಿ ಕೊಳದಲ್ಲಿ ಸ್ನಾನ ಮಾಡುವುದನ್ನು ನಿರ್ಬಂಧಿಸಿರುವುದು, ಅನ್ನದಾನ ರದ್ದುಪಡಿಸಿರುವುದು, ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಿರುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಹೇಳುತ್ತಿರುವುದಕ್ಕೆ ಭಕ್ತರು ಸಮ್ಮತಿ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಕಾವೇರಿ ತೀಥೋದ್ಭವ ವೇಳೆ ಕ್ಷೇತ್ರದಲ್ಲಿ ಇರಲು ಅವಕಾಶ ನೀಡುವಂತೆ ಒತ್ತಡ ಹೇರುತ್ತಿದ್ದಾರೆ.
ತೀರ್ಥೋದ್ಭವ ಸಂದರ್ಭ ಸಾಂಪ್ರದಾಯಿಕ ಉಡುಪಿನಲ್ಲಿ ಬರುವವರಿಗೆ ಹಾಗೂ ಮೂಲನಿವಾಸಿಗಳಿಗೆ ಅವಕಾಶ ಮಾಡಿಕೊಡಬೇಕು. ಹೊರ ಜಿಲ್ಲೆ, ಹೊರ ರಾಜ್ಯದ ಭಕ್ತರನ್ನು ಈ ವರ್ಷದ ಮಟ್ಟಿಗೆ ನಿಯಂತ್ರಿಸುವುದು ಒಳಿತು ಎಂದು ಅಖಿಲ ಕೊಡವ ಸಮಾಜ ಯುವ ಘಟಕದ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಸಾಮಾಜಿಕ ಜಾಲತಾಣದ ಮೂಲಕ ಒತ್ತಾಯಿಸಿದ್ದಾರೆ.
‘ಇದಕ್ಕೆಲ್ಲ ಕರೊನಾವೇ ಕಾರಣವಾಗಿದ್ದಲ್ಲಿ ಆದಷ್ಟೂ ಬೇಗ ಕಾವೇರಿಯಲ್ಲಿ ಅದು ಮುಳುಗಿಹೋಗಲಿ. ರಾಜಕಾರಣ ಕಾರಣವಾಗಿದ್ದರೆ ಆದಷ್ಟು ಬೇಗ ಅವರೂ ಮಣ್ಣೊಳಗೆ ಕೊಳೆತು ಹೋಗಲಿ’ ಎಂದು ಕೊಟ್ರಂಡ ಶ್ರೀಕಾಂತ್ ಪೂವಣ್ಣತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಪರಸ್ಪರ ಅಂತರ ಕಾಯ್ದುಕೊಂಡು ಕೊಡಗಿನ ಭಕ್ತರಿಗೆ ಮಾತ್ರ ಈ ವರ್ಷ ದರ್ಶನಕ್ಕೆ ಅವಕಾಶ ಮಾಡಿಕೊಡಬಹುದಿತ್ತು. ಕರೊನಾ ಸಂದರ್ಭ ಚುನಾವಣೆ ಘೊಷಣೆ ಮಾಡಿದರೆ ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುತ್ತದೆ, ಅಲ್ಲದೆ, ಪ್ರತಿಭಟನೆ, ರ್ಯಾಲಿಗಳಿಗೆ ಇಲ್ಲದ ನಿರ್ಬಂಧ ಸಾಂಪ್ರದಾಯಿಕ ಹಬ್ಬಗಳಿಗೆ ಮಾತ್ರ ಏಕೆ ಎಂದು ಮಡಿಕೇರಿಯ ಕೆ.ಎಂ. ಹರೀಶ್ ಪ್ರಶ್ನಿಸಿದ್ದಾರೆ.
ತೀರ್ಥೋದ್ಭವ ಮುಹೂರ್ತದಲ್ಲಿ ಸಾರ್ವಜನಿಕರಿಗೆ ಪ್ರವೇಶ ಇಲ್ಲವೆಂದು ಮಂಗಳವಾರ ಜಿಲ್ಲಾಧಿಕಾರಿ ಸುದ್ದಿಗೋಷ್ಠಿಯಲ್ಲಿ ಹೇಳುತ್ತಿದ್ದಂತೆ ಭಕ್ತರು ಪ್ರವೇಶಕ್ಕೆ ಪಟ್ಟು ಹಿಡಿದಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಜನರು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರ ಗಮನ ಸೆಳೆದಿದ್ದಾರೆ.
ತಲಕಾವೇರಿ- ಭಗಂಡೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ, ಬೆಂಗಳೂರು ಕೊಡವ ಸಮಾಜದ ಕಾರ್ಯದರ್ಶಿ ಚಿರಿಯಪಂಡ ಸುರೇಶ್ ಮಂಗಳವಾರ ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ, ಮುನ್ನೆಚ್ಚರಿಕೆ ಕ್ರಮದೊಂದಿಗೆ ಭಕ್ತರ ಪ್ರವೇಶಕ್ಕೆ ಅವಕಾಶ ಮಾಡಿಕೊಡುವ ಕುರಿತು ಗಮನ ಸೆಳೆದಿದ್ದಾರೆ. ನಂತರ ಸಚಿವರು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: Web Exclusive| ‘ಭಾನುವಾರ ಮಾರುಕಟ್ಟೆ’ ನನೆಗುದಿಗೆ
ತಲಕಾವೇರಿ- ಭಗಂಡೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಪ್ರತಿವರ್ಷ ತೀರ್ಥೋದ್ಭವ ವೇಳೆ ಹೆಚ್ಚಿನ ಭಕ್ತರು ಬ್ರಹ್ಮಕುಂಡಿಕೆಯ ದೃಶ್ಯಾವಳಿ ವೀಕ್ಷಿಸಲು ಅನುವಾಗುವಂತೆ ಕ್ಷೇತ್ರ ವ್ಯಾಪ್ತಿಯಲ್ಲಿ ಬೃಹತ್ ಪರದೆ ಅಳವಡಿಸುತ್ತಿತ್ತು. ಅದೇ ರೀತಿ ಈ ಬಾರಿಯೂ 2 ಎಲ್ಇಡಿ ಪರದೆ ಹಾಕಲು ಗುತ್ತಿಗೆ ನೀಡಿದೆ. ಈ ನಡುವೆ, ಜಿಲ್ಲಾಧಿಕಾರಿ ಕಚೇರಿಯಿಂದ ಗುತ್ತಿಗೆದಾರರ ಕಡೆಯವರಿಗೆ ಕರೆ ಮಾಡಿದ ಸಿಬ್ಬಂದಿ, ಎಲ್ಇಡಿ ಪರದೆ ಹಾಕದಂತೆ ಸೂಚನೆ ನೀಡಿರುವುದು ಗೊಂದಲ ಸೃಷ್ಟಿಸಿದೆ. ಎಲ್ಇಡಿ ಪರದೆ ಅಳವಡಿಸಬೇಕೆಂದು ಬಿ.ಎಸ್. ತಮ್ಮಯ್ಯ ಪಟ್ಟು ಹಿಡಿದ್ದಾರೆ.
ಕುಪ್ಯ ಚ್ಯಾಲೆ ಧರಿಸಿ ತಲಕಾವೇರಿ ಕ್ಷೇತ್ರಕ್ಕೆ ತೀಥೋದ್ಭವ ಸಂದರ್ಭ ಆಗಮಿಸಬಾರದೆಂಬ ಹೇಳಿಕೆ ಹಿನ್ನೆಲೆಯಲ್ಲಿ ಕೊಡವ ಸಮುದಾಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಕಾರಣಕ್ಕಾಗಿ ಕೋವಿಡ್ ಮುಂದಿಟ್ಟುಕೊಂಡು ಕೊಡವರು ಸಾಂಪ್ರದಾಯಿಕ ಉಡುಗೆ- ತೊಡುಗೆಯಲ್ಲಿ ಕ್ಷೇತ್ರಕ್ಕೆ ಆಗಮಿಸುವುದನ್ನು ತಡೆಯುವ ಪ್ರಯತ್ನ ಎಂಬ ಗುಮಾನಿ ಎದ್ದಿದೆ. ಈ ವಿಚಾರದಲ್ಲಿ ಜನಪ್ರತಿನಿಧಿ ಹಾಗೂ ಪೊಲೀಸ್ ಅಧಿಕಾರಿಯೊಬ್ಬರು ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂಬ ಆಕ್ಷೇಪ ವ್ಯಕ್ತವಾಗುತ್ತಿದೆ.
ಕೊಡವರಿಗೆ ನಿರ್ಬಂಧ ಹೇರುವ ಪ್ರಯತ್ನ ನಡೆಯುತ್ತಿದೆ ಎಂಬ ಕಾರಣಕ್ಕಾಗಿ ಕೊಡವ ತರುಣರು ಆಕ್ರೋಶಿತರಾಗಿದ್ದಾರೆ. ನಮ್ಮ ಕುಲದೇವಿ ತೀರ್ಥರೂಪಿಣಿಯಾಗಿ ದರ್ಶನ ನೀಡುವ ವೇಳೆ ಕ್ಷೇತ್ರಕ್ಕೆ ನಾವು ಏಕೆ ಹೋಗಬಾರದೆಂದು ಉತ್ಸಾಹಿ ಕೊಡವ ತರುಣರು ತೀಕ್ಷ್ಣವಾಗಿ ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ: Web Exclusive: ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿವಿಗಿಲ್ಲ ನಾವಿಕ; ಎರಡೂವರೆ ವರ್ಷದಿಂದಲೂ ಗ್ರಹಣ
ಭಕ್ತರನ್ನು ಎಲ್ಲಿ ತಡೆಯಬಹುದೆಂಬ ವಿಷಯ ಕುರಿತು ಕುತೂಹಲಕಾರಿ ಚರ್ಚೆ ನಡೆದಿದೆ. ಬ್ರಹ್ಮಕುಂಡಿಕೆ ಸುತ್ತಮುತ್ತ ಹೋಗಲು ಬಿಡುವುದಿಲ್ಲ. ಕ್ಷೇತ್ರ ವ್ಯಾಪ್ತಿಯಲ್ಲಿರಲು ಅವಕಾಶ ಸಿಗುತ್ತದೆ ಎಂಬ ಆಶಾಭಾವನೆಯಲ್ಲಿ ಹಲವರಿದ್ದಾರೆ. ಕೈಲಾಸ ಆಶ್ರಮ ಸಮೀಪದಲ್ಲಿರುವ ಗೇಟ್ ಬಂದ್ ಮಾಡಿ ತಡೆಯುವ ನಿರೀಕ್ಷೆಯಲ್ಲಿ ಹಲವರಿದ್ದಾರೆ. ಭಾಗಮಂಡಲದಲ್ಲಿಯೇ ತಡೆಹಿಡಿಯುವ ಸಾಧ್ಯತೆ ಇದೆ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ.
ಕರೊನಾ ಸೋಂಕು ಹರಡುವಿಕೆ ಗರಿಷ್ಠ ಹಂತಕ್ಕೆ ತಲುಪಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜನದಟ್ಟಣೆ ನಿಯಂತ್ರಿಸಲು ಮಾರ್ಗಸೂಚಿ ರೂಪಿಸಲಾಗುತ್ತಿದೆ. ಈ ಹಿಂದಿನ ಹಬ್ಬಹರಿದಿನ ಸಂದರ್ಭದಲ್ಲಿಯೂ ನಿಯಂತ್ರಣ ಕ್ರಮ ಜಾರಿಯಲ್ಲಿತ್ತು. ಸಾಂಪ್ರದಾಯಿಕ ಆಚರಣೆ, ಪೂಜಾ ಕೈಂಕರ್ಯಕ್ಕೆ ಅಡೆತಡೆ ಇರುವುದಿಲ್ಲ.
| ಅನೀಸ್ ಕಣ್ಮಣಿ ಜಾಯ್ ಜಿಲ್ಲಾಧಿಕಾರಿ, ಕೊಡಗು
ಬ್ರಹ್ಮಕುಂಡಿಕೆ, ಸ್ನಾನ ಕೊಳದ ಸುತ್ತಮುತ್ತ ಯಾರಿಗೂ ಪ್ರವೇಶ ಬೇಡ. ಆದರೆ, ತೀರ್ಥೋದ್ಭವ ಸಂದರ್ಭ ಭಕ್ತರಿಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಪರಸ್ಪರ ಅಂತರ ಕಾಯ್ದುಕೊಂಡು ಇರಲು ಅವಕಾಶ ನೀಡಬೇಕಾಗಿದೆ. ಭಕ್ತರಿಗೆ ತೀರ್ಥೋದ್ಭವ ದೃಶ್ಯ ವೀಕ್ಷಿಸಲು ಎರಡು ಎಲ್ಇಡಿ ಪರದೆ ಅಳವಡಿಸಲಾಗುವುದು.
| ಬಿದ್ದಾಟಂಡ ಎಸ್.ತಮ್ಮಯ್ಯ ಅಧ್ಯಕ್ಷರು, ತಲಕಾವೇರಿ- ಭಗಂಡೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ