ನ್ಯೂಸ್

Web Exclusive: ನಿಮ್ಮದೂ ನಕಲಿ ಮೇಲ್ ಇರಬಹುದು ಎಚ್ಚರ !; ಶ್ರೀಮಂತರು, ದೊಡ್ಡ ಕಂಪನಿಗಳೇ ಟಾರ್ಗೆಟ್

| ಕೇಶವಮೂರ್ತಿ ವಿ.ಬಿ. ಹುಬ್ಬಳ್ಳಿ

ಮೊಬೈಲ್ ನಂಬರ್, ಬ್ಯಾಂಕ್ ಅಕೌಂಟ್ ನಂಬರ್, ಒಟಿಪಿ ಮತ್ತಿತರ ಮಾಹಿತಿ ಪಡೆದು ವಂಚಿಸುತ್ತಿದ್ದ ಸೈಬರ್ ಕಳ್ಳರು ಇದೀಗ ಇ-ಮೇಲ್​ಗಳನ್ನು ಹ್ಯಾಕ್ ಮಾಡಿ, ಅದೇ ಹೆಸರಲ್ಲಿ ನಕಲಿ ಮೇಲ್ ಸೃಷ್ಟಿಸುವ ಮೂಲಕ ವಂಚಿಸುವ ಹೊಸ ಕುತಂತ್ರಕ್ಕೆ ಮುಂದಾಗಿದ್ದಾರೆ.

ಸೈಬರ್ ಅಪರಾಧ ಲೋಕ ದಿನದಿಂದ ದಿನಕ್ಕೆ ವಿಸ್ತರಣೆಯಾಗುತ್ತಿದ್ದು, ಸೈಬರ್ ಕಳ್ಳರು ಹೊಸ ಬಗೆಯ ವಂಚನೆಯ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಶ್ರೀಮಂತರು, ದೊಡ್ಡ ಕಂಪನಿಗಳ ವ್ಯಾಪಾರ- ವಹಿವಾಟಿನ ಮೇಲೆ ಕಳ್ಳನೋಟ ಇಟ್ಟಿರುವ ವಂಚಕರು, ಇ-ಮೇಲ್​ಗಳನ್ನು ಹ್ಯಾಕ್ ಮಾಡಿ ಅದರಲ್ಲಿನ ಮಾಹಿತಿ ಕದ್ದು, ಅದೇ ಹೆಸರಿನ ಮತ್ತೊಂದು ಮೇಲ್ ಸೃಷ್ಟಿಸಿ ವಂಚಿಸುತ್ತಿದ್ದಾರೆ.

ಇಂಥಹದ್ದೇ ಒಂದು ಘಟನೆ ಧಾರವಾಡದ ರಾಯಾಪುರದಲ್ಲಿ ನಡೆದಿದೆ. ಸರ್ಕಾರಿ ಸ್ವಾಮ್ಯಕ್ಕೆ ಒಳಪಟ್ಟಿರುವ ಇಂಡಕ್ಷನ್ ಮೋಟಾರ್ ಮತ್ತು ಎಲೆಕ್ಟ್ರಿಕಲ್ ಟ್ರಾನ್ಸ್​ಫಾರ್ಮರ್ ಉತ್ಪಾದಿಸುವ ನ್ಯೂ ಗವರ್ನಮೆಂಟ್ ಎಲೆಕ್ಟ್ರಿಕಲ್ ಫ್ಯಾಕ್ಟರಿ (ಎನ್​ಜಿಇಎಫ್) ಆನ್​ಲೈನ್ ಮೂಲಕ ವ್ಯವಹಾರ ನಡೆಸುತ್ತಿತ್ತು. ಇದನ್ನೂ ಓದಿ: Web Exclusive: ಹಾಸನಾಂಬೆ ದರ್ಶನ ಈ ಬಾರಿ ಅನುಮಾನ; ಸಂಭ್ರಮ ಕಸಿದ ಕರೊನಾ

ಉತ್ಪಾದನೆಗೆ ಬೇಕಾಗುವ ಕಚ್ಚಾ ವಸ್ತುಗಳನ್ನು ಬೆಂಗಳೂರಿನ ಹೈಟೆಕ್ ಬೇರಿಂಗ್ ಪ್ರೖೆವೇಟ್ ಲಿಮಿಟೆಡ್​ನಿಂದ ಆನ್​ಲೈನ್ ಮೂಲಕ ಖರೀದಿಸುತ್ತಿತ್ತು. ಕಚ್ಚಾ ವಸ್ತು ಕಳುಹಿಸುವಂತೆ ಎನ್​ಜಿಇಎಫ್ ಸೆ.12ರಂದು ಹೈಟೆಕ್ ಬೇರಿಂಗ್ ಕಂಪನಿಯ ಮೇಲ್ ಕಳುಹಿಸಿತ್ತು. ಎನ್​ಜಿಇಎಫ್ ಮೇಲ್ ಹ್ಯಾಕ್ ಮಾಡಿದ್ದ ವಂಚಕರು ಹೈಟೆಕ್ ಬೇರಿಂಗ್ ಕಂಪನಿಯ ಹೆಸರಲ್ಲಿ ನಕಲಿ ಮೇಲ್ ಸೃಷ್ಟಿಸಿದ್ದರು. ‘ಎಚ್​ಟಿಬಿಎಲ್’ ಬದಲು ‘ಎಬಿಟಿಎಲ್’ ಎಂದು ಬದಲಿಸಿ ಹೊಸ ಮೇಲ್ ಸೃಷ್ಟಿಸಿದ್ದರು.

ನಕಲಿ ಮೇಲ್​ನಿಂದ ಟ್ಯಾಕ್ಸ್ ಇನ್​ವೈಸ್, ಅಕೌಂಟ್ ನಂಬರ್ ಕಳುಹಿಸಿ ಹಣ ವರ್ಗಾಯಿಸುವಂತೆ ಸಂದೇಶ ರವಾನಿಸಿದ್ದರು. ಎಂದಿನಂತೆ ಮೇಲ್ ಮೂಲಕ ಆನ್​ಲೈನ್​ನಲ್ಲಿ ಹಣ ವರ್ಗಾವಣೆ ಮಾಡುತ್ತಿದ್ದ ಎನ್​ಜಿಇಎಫ್ 94,788 ರೂ. ಹಣ ವರ್ಗಾಯಿಸಿತ್ತು. ಮತ್ತೊಂದು ಕಂಪನಿಗೆ ಮೇಲ್ ಕಳುಹಿಸಿದಾಗ 1,35,464 ರೂ. ಕಳುಹಿಸುವಂತೆ ನಕಲಿ ಮೇಲ್​ನಿಂದ ಉತ್ತರ ಬಂದಾಗ ಎಚ್ಚೆತ್ತುಕೊಂಡ ಕಂಪನಿ ಹುಬ್ಬಳ್ಳಿ- ಧಾರವಾಡ ಸೈಬರ್ ಕ್ರೖೆಂ ಪೊಲೀಸ್ ಠಾಣೆಗೆ ದೂರು ನೀಡಿದೆ.

ಇಂತಹ ಸೈಬರ್ ವಂಚನೆಯಿಂದ ಬಚಾವಾಗಲು ಜಾಗೃತಿ ಮತ್ತು ಎಚ್ಚರಿಕೆಯೊಂದೇ ಸದ್ಯಕ್ಕಿರುವ ಮಾರ್ಗ. ಒಂದು ವೇಳೆ ವಂಚನೆಯಾದಲ್ಲಿ ಕೂಡಲೇ ಪೊಲೀಸರ ಗಮನಕ್ಕೆ ತಂದರೆ ಅವರು ಆ ಮೇಲ್​ಗಳನ್ನು ಬ್ಲಾಕ್ ಮಾಡುವ ಮೂಲಕ ಹೆಚ್ಚಿನ ಹಾನಿ ತಪ್ಪಿಸುತ್ತಾರೆ. ಇದನ್ನೂ ಓದಿ: Web Exclusive: ಪೊಲೀಸರಿಗೆ ಸಿಗುತ್ತಿಲ್ಲ ‘ಆರೋಗ್ಯ ಭಾಗ್ಯ’; ಚಿಕಿತ್ಸೆ ಸಿಗಲ್ಲವೆಂದು ಭಿತ್ತಿಪತ್ರ ಅಂಟಿಸಿದ ಆಸ್ಪತ್ರೆಗಳು

 ಇ-ಮೇಲ್ ಬಳಸುತ್ತಿದ್ದರೆ ಹೀಗೆ ಮಾಡಿ
  •  ಕಂಪನಿ ಅಥವಾ ವೈಯಕ್ತಿಕ ಇ-ಮೇಲ್​ಗಳನ್ನು ಅನ್ಯರಿಗೆ ಕೊಡಬೇಡಿ
  • ಹಣಕಾಸಿನ ವ್ಯವಹಾರವಿದ್ದಲ್ಲಿ ಸಂಬಂಧಪಟ್ಟವರಿಗೆ ಕರೆ ಮಾಡಿ ಖಚಿತಪಡಿಸಿಕೊಳ್ಳಿ
  • ಅಂಕಿ ಸಂಖ್ಯೆ ಮತ್ತು ಸಿಂಬಲ್​ಗಳುಳ್ಳ ಪಾಸ್​ವರ್ಡ್ ಬಳಸಿ
  •  ಆಗಾಗ ಪಾಸ್​ವರ್ಡ್ ಬದಲಾಯಿಸುತ್ತಿರಿ
  •  ಅಪರಿಚಿತ ಮೇಲ್​ಗೆ ಉತ್ತರಿಸಬೇಡಿ
ದೊಡ್ಡ ದೊಡ್ಡ ಕಂಪನಿಗಳ ಆನ್​ಲೈನ್ ವ್ಯವಹಾರದ ಮೇಲೆ ಕಣ್ಣಿಟ್ಟಿರುವ ವಂಚಕರು ನಕಲಿ ಮೇಲ್ ಸೃಷ್ಟಿಸಿ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕು. ವಂಚನೆಗೀಡಾದಲ್ಲಿ ತಕ್ಷಣ ಸೈಬರ್ ಕ್ರೖೆಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು. | ಎಸ್.ಬಿ. ಮಾಳಗೊಂಡ, ಇನ್ಸ್​ಪೆಕ್ಟರ್, ಹು-ಧಾ ಸೈಬರ್ ಕ್ರೖೆಂ ಪೊಲೀಸ್ ಠಾಣೆ