ನವದೆಹಲಿ: ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಮುಂದಿನ ನಾಲ್ಕು ದಿನಗಳಲ್ಲಿ ಉತ್ತರ ಪೆನಿನ್ಸುಲರ್ ಭಾರತ, ಒಡಿಶಾ ಮತ್ತು ಛತ್ತೀಸ್‌ಗಢದಲ್ಲಿ ಮಳೆ ಮುಂದುವರೆಯಲಿದೆ. ಸೆಪ್ಟೆಂಬರ್ 5 ರಿಂದ ಈಶಾನ್ಯ ಭಾರತ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ದಕ್ಷಿಣ ಭಾರತದಲ್ಲಿ ಹವಾಮಾನ ಹೇಗಿರುತ್ತದೆ?
ಹವಾಮಾನ ಇಲಾಖೆ ಪ್ರಕಾರ, ಇಂದಿನಿಂದ ಸೆಪ್ಟೆಂಬರ್ 7 ರವರೆಗೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕರ್ನಾಟಕದ ಜತೆಗೆ ತಮಿಳುನಾಡು, ಪುದುಚೇರಿ, ಕಾರೈಕಲ್, ಕರಾವಳಿ ಆಂಧ್ರಪ್ರದೇಶ, ಯಾನಂ, ಕೇರಳ, ಮಾಹೆ ಮತ್ತು ತೆಲಂಗಾಣದಲ್ಲಿ ಲಘು/ಮಧ್ಯಮದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇದರೊಂದಿಗೆ ಉತ್ತರ ಒಳ ಕರ್ನಾಟಕ ಮತ್ತು ರಾಯಲಸೀಮೆಯಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದೆ.
ಮಹಾರಾಷ್ಟ್ರ
ಇಂದಿನಿಂದ ಸೆಪ್ಟೆಂಬರ್ 7 ರವರೆಗೆ, ಕೊಂಕಣ, ಗೋವಾ, ಮಧ್ಯ ಮಹಾರಾಷ್ಟ್ರ ಮತ್ತು ಮರಾಠವಾಡದ ಕೆಲವು ಸ್ಥಳಗಳಲ್ಲಿ ಲಘು / ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇದರೊಂದಿಗೆ ಚಂಡಮಾರುತ, ಸಿಡಿಲು ಸಹ ಬೀಳುವ ಸಾಧ್ಯತೆ ಇದೆ.
ದೆಹಲಿ
ಇಂದು ದೆಹಲಿಯಲ್ಲಿ ಆಕಾಶವು ಶುಭ್ರವಾಗಿರುತ್ತದೆ. ಜನರು ಆರ್ದ್ರ ಶಾಖವನ್ನು ಎದುರಿಸಬೇಕಾಗುತ್ತದೆ. ಇಲಾಖೆ ಪ್ರಕಾರ ಕೆಲ ದಿನಗಳ ಕಾಲ ಇದೇ ವಾತಾವರಣ ಇರಲಿದೆ.
ಉತ್ತರಾಖಂಡ
ಉತ್ತರಾಖಂಡದ ಬಹುತೇಕ ಭಾಗಗಳಲ್ಲಿ ಇಂದು ಬಿಸಿಲು ಇರುತ್ತದೆ. ಆದರೆ ಪ್ರತ್ಯೇಕ ಸ್ಥಳಗಳಲ್ಲಿ ಸ್ವಲ್ಪ ಮಳೆಯಾಗುವ ಸಾಧ್ಯತೆಯಿದೆ. ಇಂದು ಆಕಾಶವೂ ಶುಭ್ರವಾಗಿರಲಿದೆ. ಆದರೆ ಕೆಲವು ಸ್ಥಳಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ.
ಉತ್ತರಪ್ರದೇಶ
ಉತ್ತರ ಪ್ರದೇಶದಲ್ಲಿ ತಾಪಮಾನ ನಿರಂತರವಾಗಿ ಹೆಚ್ಚುತ್ತಿದೆ. ಆದರೆ, ಮುಂದಿನ ದಿನಗಳಲ್ಲಿ ಮಳೆಯಿಂದ ಜನರಿಗೆ ನೆಮ್ಮದಿ ಸಿಗಲಿದೆ. ಬಹುತೇಕ ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು.
ಹಿಮಾಚಲ ಪ್ರದೇಶ
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ. ರಾಜ್ಯದ ಏಳು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಹಲವೆಡೆ ಮಳೆಯೂ ಸುರಿದಿದೆ.
ಒಡಿಶಾ
ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಒಡಿಶಾದಲ್ಲಿ ಇಂದಿನಿಂದ ಸೆಪ್ಟೆಂಬರ್ 7 ರವರೆಗೆ ಅನೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇದರೊಂದಿಗೆ ಚಂಡಮಾರುತ, ಸಿಡಿಲು ಸಹ ಬೀಳುವ ಸಾಧ್ಯತೆ ಇದೆ.
ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ
ಸೆಪ್ಟೆಂಬರ್ 6 ಮತ್ತು 7 ರಂದು ಪಶ್ಚಿಮ ಮಧ್ಯಪ್ರದೇಶ, ಪೂರ್ವ ಮಧ್ಯಪ್ರದೇಶ, ವಿದರ್ಭ ಮತ್ತು ಛತ್ತೀಸ್‌ಗಢದಲ್ಲಿ ಲಘು/ಮಧ್ಯಮದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಗುಡುಗು, ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆಯೂ ವ್ಯಕ್ತವಾಗಿದೆ. ಇಲಾಖೆಯ ಪ್ರಕಾರ, ಸೆಪ್ಟೆಂಬರ್ 5 ರಂದು ದಕ್ಷಿಣ ಛತ್ತೀಸ್‌ಗಢದ ವಿವಿಧ ಸ್ಥಳಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ.
ಈಶಾನ್ಯ ಭಾರತ
ಸೆಪ್ಟೆಂಬರ್ 6 ಮತ್ತು 7 ರ ಅವಧಿಯಲ್ಲಿ ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಲಘು/ಮಧ್ಯಮದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ ನಾಲ್ಕು ದಿನಗಳಲ್ಲಿ ವಾಯುವ್ಯ ಭಾರತದಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ.