ಬೆಂಗಳೂರು: ಹವಾಮಾನ ಪ್ರಕಾರ ದೇಶದಲ್ಲಿ 4 ಕಾಲಗಳಿವೆ. ಮಾರ್ಚ್‌ನಿಂದ ಮೇ ವರೆಗೆ ಪೂರ್ವ ಮುಂಗಾರು, ಜೂನ್‌ನಿಂದ ಸೆಪ್ಟಂಬರ್‌ವರೆಗೆ ನೈಋತ್ಯ ಮುಂಗಾರು, ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಈಶಾನ್ಯ ಮಾರುತ ಹಾಗೂ ಜನವರಿಯಿಂದ ಫೆಬ್ರವರಿ ವರೆಗೆ ಚಳಿಗಾಲ ಎಂಬುದಾಗಿ ಹವಾಮಾನ ಇಲಾಖೆ ವಿಂಗಡಿಸಿದೆ.
ಶೇ. 48 ಮಳೆ
ಅ.1ರಿಂದ ಡಿ.31ರವರೆಗಿನ ಅವಧಿಯನ್ನು ಈಶಾನ್ಯ ಮಾರುತವೆಂದು ಕರೆಯಲಾಗುತ್ತದೆ. ಈಶಾನ್ಯ ಮಾರುತವು ದಕ್ಷಿಣ ರಾಜ್ಯಗಳಲ್ಲಿ ಪ್ರಧಾನ ಮಳೆಗಾಲ. ಕರಾವಳಿ ಆಂಧ್ರಪ್ರದೇಶ, ರಾಯಲಸೀಮಾ, ತಮಿಳುನಾಡು ಹಾಗೂ ಪಾಂಡಿಚೇರಿಗೆ ಉತ್ತಮ ಮಳೆ ತರಲಿದೆ. ತಮಿಳುನಾಡಿಗೆ ವಾರ್ಷಿಕ ಒಟ್ಟು ಮಳೆಯಲ್ಲಿ ಶೇ.48 ಮಳೆ ಈಶಾನ್ಯ ಮಾರುತದಿಂದ ಬರಲಿದೆ. ದಕ್ಷಿಣ ಒಳನಾಡಿನಲ್ಲಿ ವಾರ್ಷಿಕ ಒಟ್ಟು ಮಳೆಯಲ್ಲಿ ಶೇ.21 ಈಶಾನ್ಯ ಮಾರುತದಿಂದ ಮಳೆಯಾಗಲಿದೆ. ದಕ್ಷಿಣ ಒಳನಾಡಿನಲ್ಲಿ ಒಟ್ಟು ವಾರ್ಷಿಕ ಮಳೆ 1,019 ಮಿಮೀ ಇದ್ದು, ಅದರಲ್ಲಿ 210 ಮಿಮೀ ಮಳೆಯು ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಸುರಿಯಲಿದೆ. ಅಕ್ಟೋಬರ್‌ನಲ್ಲೇ ಅತಿ ಹೆಚ್ಚು ಅಂದರೆ 171 ಮಿಮೀ ಮಳೆಯಾಗಲಿದೆ. ಬೆಂಗಳೂರಿನಲ್ಲಿ ವಾರ್ಷಿಕ ಮಳೆ 977 ಮಿಮೀ ಆಗಿದ್ದು, ಅದರಲ್ಲಿ 245 ಮಿಮೀ ಮಳೆ ಈಶಾನ್ಯ ಮಾರುತದಿಂದ ಬರಲಿದೆ.
ಜೂನ್‌ನಲ್ಲಿ ಮುಂಗಾರು ಪ್ರವೇಶ
ಜೂನ್ ಮೊದಲ ವಾರದಲ್ಲಿ ನೈಋತ್ಯ ಮುಂಗಾರು ದೇಶಕ್ಕೆ ಪ್ರವೇಶಿಸಲಿದೆ. ಸೆ.30ಕ್ಕೆ ಮುಂಗಾರು ಮುಗಿದಿದ್ದರೂ ಅ.15ರವರೆಗೆ ಮಳೆಯಾಗತ್ತಿದೆ. ನೈಋತ್ಯ ಮಾನ್ಸೂನ್ ದಕ್ಷಿಣ ಭಾರತಕ್ಕೆ ಗಾಳಿಯು ನೈಋತ್ಯ ದಿಕ್ಕಿನಿಂದ ಬರಲಿದೆ. ಈಶಾನ್ಯ ಮಾರುತದಲ್ಲಿ ಗಾಳಿಯು ಈಶಾನ್ಯ ದಿಕ್ಕಿನಿಂದ ಬರುತ್ತದೆ. ಈಶಾನ್ಯ ಮಾರತವು ದಕ್ಷಿಣ ಭಾರತದಲ್ಲಿ ಕಾಲಿಡುವುದಕ್ಕೆ ಅನೇಕ ಕಾರಣಗಳಿವೆ. ನೈಋತ್ಯ ಮಾನ್ಸೂನ್‌ನಲ್ಲಿ ಗಾಳಿಯು ಹಿಂಬದಿಯಾಗಿ ಚಲಿಸಲಿದೆ. ಅಂದರೆ, ಗಾಳಿಯು ದಿಕ್ಕು ವಿರುದ್ಧವಾಗಿರಲಿದೆ. ಅದೇರೀತಿ, ಈಶಾನ್ಯ ಮಾರುತವು ದಕ್ಷಿಣ ಭಾರತದಲ್ಲಿ ಕಾಲಿಡಲು ಮುಖ್ಯ ಕಾರಣಗಳಿದ್ದು, ಅಳವಾದ ಪೂರ್ವದ ಅಲೆಗಳು ಕರಾವಳಿ ತಮಿಳುನಾಡಿನಲ್ಲಿ ತರತಕ್ಕದ್ದು ಅಥವಾ ಬಂಗಾಳಕೊಲ್ಲಿಯ ನೈರುತ್ಯ ಭಾಗದಲ್ಲಿ ತಮಿಳುನಾಡು ಸಮೀಪ ಹವಾಮಾನದ ಒತ್ತಡ ಕಡಿಮೆಯಾಗಿರಬೇಕು. ಜತೆಗೆ ತಮಿಳುನಾಡಿನ ಬಹುತೇಕ ಎಲ್ಲ ಸ್ಥಳಗಳಲ್ಲಿ ಮಳೆಯಾಗಿರಬೇಕು. ಇದರ ಆಧಾರದಲ್ಲಿ ಈಶಾನ್ಯ ಮಾರುತವು ದೇಶಕ್ಕೆ ಪ್ರವೇಶಿಸಲಿದೆ ಎಂಬುದು ಗೊತ್ತಾಗಲಿದೆ. ಅದರಂತೆ, ಸಾಮಾನ್ಯವಾಗಿ ಈಶಾನ್ಯ ಮಾರುತವು ಅ.20ರಂದು ದೇಶಕ್ಕೆ ಕಾಲಿಡಲಿದೆ. ಕೆಲ ಸಂದರ್ಭಗಳಲ್ಲಿ ವಾಡಿಕೆಯಂತೆ ಪ್ರವೇಶಿಸಿದರೆ ಕೆಲ ಸಂದರ್ಭಗಳಲ್ಲಿ ಅ.28 ರೊಳಗೆ ಪ್ರವೇಶಿಸಲಿದೆ. ಈಶಾನ್ಯ ಮಾರುತವು ಸಾಮಾನ್ಯವಾಗಿ ಡಿ.29ರವರೆಗೆ ಇದ್ದರೂ ಮುಂದಿನ 14 ದಿನಗಳವರೆಗೆ ಮಳೆಯಾಗಲಿದೆ. ಈಶಾನ್ಯ ಮಾರುತದಲ್ಲಿ ಸೈಕ್ಲೋನ್ ಸೀಸನ್ ಅಂತ ಕರೆಯಲಾಗುತ್ತದೆ. ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಸೈಕ್ಲೋನ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಈಶಾನ್ಯ ಮಾರುತವು ರಷ್ಯಾದ ಸೈಬೇರಿಯಾದಲ್ಲಿ ಹುಟ್ಟಲಿದೆ. ಈ ಪ್ರದೇಶದಲ್ಲಿ ಚಳಿಗಾಲ ಆರಂಭವಾಗುತ್ತಿದ್ದಂತೆ ತಂಪಾಗುವುದರಿಂದ ವಾಯು ಒತ್ತಡ ಹೆಚ್ಚಾಗಲಿದೆ. ವಾಯುವಿನ ಅಧಿಕ ಒತ್ತಡ ಪರಿಣಾಮದ ಬಂಗಾಳ ಉಪಸಾಗರದಲ್ಲಿ ವಾಯುವಿನ ಒತ್ತಡವು ಕುಸಿಯುತ್ತದೆ. ಇದರ ಪರಿಣಾಮದಿಂದ ಗಾಳಿಯ ಅಧಿಕ ಒತ್ತಡದಿಂದ ಕಡಿಮೆ ಒತ್ತಡ ಪ್ರದೇಶದ ಕಡೆ ಚಲಿಸುತ್ತದೆ.
| ಸಿ.ಎಸ್. ಪಾಟೀಲ, ಹವಾಮಾನ ಇಲಾಖೆ ನಿರ್ದೇಶಕರು.