ನ್ಯೂಸ್

ಮದುವೆಯಲ್ಲಿ 3 ಕ್ಕಿಂತ ಅಧಿಕ ಆಭರಣ ಧರಿಸುವುದು ಭಾರತದ ಈ ರಾಜ್ಯದಲ್ಲಿ ನಿಷೇಧ! | Jewelry

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಚಿನ್ನದ(Jewelry) ಬೆಲೆ ಗಗನಕ್ಕೆ ಏರುತ್ತಿದೆ. ಪ್ರತಿ 10 ಗ್ರಾಂ ಚಿನ್ನಕ್ಕೆ 1 ಲಕ್ಷದ 20 ಸಾವಿರ ಇದೆ. ಇಷ್ಟಿದ್ದರೂ ಮದುವೆ, ಸಮಾರಂಭ ಮತ್ತು ಹಬ್ಬಗಳಲ್ಲಿ ಖರೀದಿಸುವವರ ಸಂಖ್ಯೆ ಕಡಿಮೆಯೇ ಆಗಿಲ್ಲ. ಆದರೆ, ಭಾರತದ ಈ ಒಂದು ಗ್ರಾಮದಲ್ಲಿ 3ಕ್ಕಿಂತ ಅಧಿಕ ಚಿನ್ನದ ಆಭರಣ ಧರಿಸುವಂತಿಲ್ಲ ಎಂದು ನಿರ್ಬಂಧ ಮಾಡಲಾಗಿದೆ.

ಹೌದು, ಉತ್ತರಖಂಡದ ಡೆಹ್ರಾಡೂನ್ ಜಿಲ್ಲೆಯ ಯಮುನಾ ಮತ್ತು ಟನ್ಸ್ ನದಿಗಳ ನಡುವೆ ಇರುವ ಕಂದಹಾರ್ ಮತ್ತು ಇಂದ್ರಾಣಿ ಗ್ರಾಮಗಳಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ. ಸ್ಥಳೀಯ ಪಂಚಾಯತ್ ಈ ಆದೇಶವನ್ನು ಹೊರಡಿಸಿದೆ. ಇದು ಜಾನ್ಸರ್ ಪರಿಶಿಷ್ಟ ಪಂಗಡದ ಪ್ರದೇಶವಾಗಿದ್ದು, ಅತಿಯಾದ ಚಿನ್ನವನ್ನು ಧರಿಸಿ ಪ್ರದರ್ಶನ ಮಾಡುವುದನ್ನು ನಿಲ್ಲಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ಇದು ಕೇವಲ ಮೂರು ಆಭರಣಗಳ ಹೆಸರಿನಲ್ಲಿ ಕಿಲೋಗ್ರಾಂಗಳಷ್ಟು ಚಿನ್ನವನ್ನು ಧರಿಸುವುದರ ಬಗ್ಗೆ ಅಲ್ಲ. ಮದುವೆಗಳಲ್ಲಿ ಮಹಿಳೆಯರು ಮೂಗುತಿ, ಕಿವಿಯೋಲೆಗಳು ಮತ್ತು ಮಂಗಳಸೂತ್ರಗಳನ್ನು ಮಾತ್ರ ಧರಿಸಲು ಅನುಮತಿಸಲಾಗುವುದು ಎಂದು ವರದಿ ಉಲ್ಲೇಖಿಸಿದೆ.

ಉಲ್ಲಂಘನೆ ಮಾಡಿದ್ರೆ 50 ಸಾವಿರ ದಂಡ!

ನಿರ್ಬಂಧ ಉಲ್ಲಂಘನೆ ಮಾಡಿ ತಪ್ಪಿತಸ್ಥರೆಂದು ಕಂಡುಬಂದ ಯಾರಾದರೂ 50,000 ರೂ. ದಂಡವನ್ನು ಎದುರಿಸಬೇಕಾಗುತ್ತದೆ. ಆಡಂಬರದ ಚಿನ್ನದ ಪ್ರದರ್ಶನಗಳು ಅಸೂಯೆ ಮತ್ತು ಕೌಟುಂಬಿಕ ವಿವಾದಗಳಿಗೆ ಕಾರಣವಾಗಬಹುದು, ಆದ್ದರಿಂದ ಹೆಚ್ಚು ಚಿನ್ನ ಧರಿಸುವುದನ್ನು ನಿಷೇಧಿಸಲಾಗಿದೆ ಎಂಬ ಕಾರಣವನ್ನು ನೀಡಲಾಗಿದೆ.

ಅಸಮಾನತೆ ಕಡಿಮೆ ಮಾಡುವ ಗುರಿ

ಈ ಬಗ್ಗೆ ಪಿಟಿಐ ಜೊತೆ ಮಾತನಾಡಿದ ಪಂಚಾಯತ್ ಮುಖ್ಯಸ್ಥ ಅರ್ಜುನ್ ಸಿಂಗ್, "ಚಿನ್ನದ ಬೆಲೆ ಏರಿಕೆಯಿಂದ ಅನೇಕ ಮಹಿಳೆಯರಿಗೆ ಕಷ್ಟವಾಗಿದೆ. ಆದರೆ ಮದುವೆಯ ಸಮಯದಲ್ಲಿ ಚಿನ್ನ ಖರೀದಿಸುವುದು ಅನಿವಾರ್ಯವಾಗುತ್ತದೆ. ಇದು ಅವರಿಗೆ ಒತ್ತಡವನ್ನುಂಟು ಮಾಡುತ್ತದೆ. ಇದು ಕೌಟುಂಬಿಕ ವಿವಾದಗಳು ಮತ್ತು ಆರ್ಥಿಕ ಒತ್ತಡವನ್ನು ಉಂಟುಮಾಡುತ್ತದೆ. ಈ ಅಸಮಾನತೆಯನ್ನು ಕಡಿಮೆ ಮಾಡುವುದು ನಮ್ಮ ಗುರಿಯಾಗಿದೆ" ಎಂದು ಹೇಳಿದರು.(ಏಜೆನ್ಸೀಸ್​)