ನ್ಯೂಸ್

ವಿಧಾನಸೌಧದಲ್ಲಿ ಆಯುದ್ಧ ಪೂಜೆ ಸಡಗರ

ಬೆಂಗಳೂರು: ಆಡಳಿತದ ಶಕ್ತಿ ಕೇಂದ್ರಗಳಾದ ವಿಧಾನಸೌಧ, ವಿಕಾಸಸೌಧ, ಬಹುಮಹಡಿಗಳ ಕಟ್ಟಡಗಳ ಬಹುತೇಕ ಕಚೇರಿಗಳಲ್ಲಿ ಮಂಗಳವಾರವೇ ಆಯುಧ ಪೂಜೆಯನ್ನು ಸಡಗರದಿಂದ ನೆರವೇರಿಸಲಾಯಿತು.

ಬುಧವಾರ ಮತ್ತು ಗುರುವಾರ ರಜೆಯಿರುವ ಹಿನ್ನೆಲೆಯಲ್ಲಿ ವಿಧಾನಸೌಧ, ವಿಕಾಸಸೌಧದ ವಿವಿಧ ಕಚೇರಿಗಳನ್ನು ತಳಿರು-ತೋರಣಗಳಿಂದ ಸಿಂಗರಿಸಿ, ಕಚೇರಿ ಮುಂದೆ ರಂಗೋಲಿ ಬಿಡಿಸಿ ವಿಶೇಷವಾಗಿ ಅಲಂಕರಿಸಲಾಗಿತ್ತು. ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಧಾನ ಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಕಚೇರಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ, ಸಚಿವರ, ಉನ್ನತ ಅಧಿಕಾರಿಗಳ ಕಚೇರಿಗಳನ್ನೂ ವಿಶೇಷವಾಗಿ ಅಲಂಕರಿಸಿ ಆಯುಧ ಪೂಜೆ ಮಾಡಲಾಯಿತು.

ಪರಸ್ಪರ ಸಿಹಿ ಹಂಚಿ ಆಯುಧ ಪೂಜೆ, ವಿಜಯದಶಮಿಯ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡುಬಂದಿತು. ಬಹುತೇಕ ಕಚೇರಿಗಳಲ್ಲಿ ದೈನಂದಿನ ಕೆಲಸ ಕಾರ್ಯಗಳಿಗಿಂತ ಹಬ್ಬದ ಸಡಗರ-ಸಂಭ್ರಮದಲ್ಲೇ ಅಧಿಕಾರಿ, ಸಿಬ್ಬಂದಿ ಮಗ್ನರಾಗಿದ್ದರು.