ನ್ಯೂಸ್

ವಿಪರೀತ ಹುಡುಕಾಟ! ಸಿಕ್ಕಿದ್ರೆ ಖಂಡಿತ ಕಥೆ ಮುಗಿಸುತ್ತಿದ್ದೆವು: ಅಚ್ಚರಿ ಹೇಳಿಕೆ ಕೊಟ್ಟ ಇಸ್ರೇಲ್​ ರಕ್ಷಣಾ ಸಚಿವ | Israel

Israel: ಇಸ್ರೇಲ್ ಮತ್ತು ಇರಾನ್ ನಡುವೆ ಭೀಕರ ಯುದ್ಧ ನಡೆದಿದ್ದು ಎಲ್ಲರಿಗೂ ಗೊತ್ತೇ ಇದೆ. ಸಂಘರ್ಷದ ಸಮಯದಲ್ಲಿ, ಅಮೆರಿಕ ಕೂಡ ಇರಾನ್ ಮೇಲೆ ಹಠಾತ್ ದಾಳಿ ನಡೆಸಿತು. ಇದು ಮೂರನೇ ಮಹಾಯುದ್ಧಕ್ಕೆ ಕಾರಣವಾಗಲಿದೆ ಎಂಬ ಭೀತಿ ಹಲವರಲ್ಲಿ ಮೂಡಿತ್ತು. ಆದರೆ, ಅನಿರೀಕ್ಷಿತ ಬೆಳವಣಿಗೆಗಳೊಂದಿಗೆ 12 ದಿನಗಳ ಯುದ್ಧಕ್ಕೆ ಕಡೆಗೂ ಕದನ ವಿರಾಮ ಸಿಕ್ಕಿದ್ದು, ವಾತಾವರಣ ಶಾಂತಿಯತ್ತ ಸಾಗಿದೆ. ಈ ಮಧ್ಯೆ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಕುರಿತು ಇಸ್ರೇಲ್​ ರಕ್ಷಣಾ ಸಚಿವ ನೀಡಿರುವ ಹೇಳಿಕೆ ಅಚ್ಚರಿ ಮೂಡಿಸಿದೆ.

"ಅಯತೊಲ್ಲಾ ಖಮೇನಿಗಾಗಿ ನಾವು ತುಂಬ ಹುಡುಕಾಟ ನಡೆಸಿದೆವು. ಆದರೆ, ಆತ ನಮ್ಮ ಗುರಿಗೆ ಸಿಗಲಿಲ್ಲ. ಬದಲಿಗೆ ಅವಿತುಕೊಂಡಿದ್ದರು. ಜೀವ ಭಯದಿಂದ ಪಲಾಯನ ಮಾಡಿ, ನಮ್ಮ ಗುರಿಯಿಂದ ಕಣ್ಮರೆಯಾದರು. ಸಿಕ್ಕಿದ್ದರೆ ಖಂಡಿತ ಇಷ್ಟೊತ್ತಿಗೆ ಅವರ ಹತ್ಯೆಯಾಗಿರುತ್ತಿತ್ತು. ಖಮೇನಿ ಹತ್ಯೆಗೆ ನಮಗೆ ಅಮೆರಿಕ ಅನಮತಿ ಬೇಕಿಲ್ಲ. ಆದರೆ, ಒಂದೊಳ್ಳೆ ಅವಕಾಶ ನಮ್ಮ ಪಾಲಾಗಲಿಲ್ಲ" ಎಂದು ಕಾಟ್ಜ್ ಹೇಳಿದ್ದಾರೆ.

"ಖಮೇನಿಯನ್ನು ಹೊಡೆದುರುಳಿಸಲು ನಾವು ಇಸ್ರೇಲ್ ರಕ್ಷಣಾ ಪಡೆಗಳಿಗೆ (IDF) ನಿರ್ದಿಷ್ಟ ಆದೇಶಗಳನ್ನು ಕೊಟ್ಟಿದ್ದೆವು. ಆದರೆ, ಆತ ಯಾವುದೋ ಒಂದು ಬಂಕರ್‌ನಲ್ಲಿ ಸುರಕ್ಷಿತವಾಗಿ ಅಡಗಿ ಕುಳಿತಿದ್ದ ಕಾರಣ, ನಮ್ಮ ಗುರಿಯಿಂದ ಬಚಾವ್ ಆಗಿದ್ದಾರೆ" ಎಂದು ನೇರವಾಗಿ ನುಡಿದರು.