ನ್ಯೂಸ್

ಹೈಡ್ರೋಕ್ಸಿಕ್ಲೋರೋಕ್ವಿನ್​ ವಿಚಾರದಲ್ಲಿ ಪ್ರತೀಕಾರದ ಎಚ್ಚರಿಕೆ ನೀಡಿದ್ದ ಟ್ರಂಪ್​ಗೆ ಭಾರತದಿಂದ ಸಮಾಧಾನಕರ ಉತ್ತರ; ಜತೆಗೆ ಸಣ್ಣ ವಾರ್ನ್​!

ನವದೆಹಲಿ​: ಕರೊನಾ ಸೋಂಕಿಗೆ ಹೈಡ್ರೋಕ್ಸಿಕ್ಲೋರೋಕ್ವಿನ್​ ಔಷಧ ಪರಿಣಾಮಕಾರಿ ಎಂದು ಮನಗಂಡಿರುವ ಅಮೆರಿಕ ಅದನ್ನು ರಫ್ತು ಮಾಡುವಂತೆ ಭಾರತದ ದುಂಬಾಲು ಬಿದ್ದಿದೆ.

ಮಲೇರಿಯಾ ನಿಯಂತ್ರಣಕ್ಕೆ ಬಳಸುವ ಹೈಡ್ರೋಕ್ಸಿಕ್ಲೋರೋಕ್ವಿನ್​ನ್ನು ಕಳಿಸಿ ಎಂದು ಭಾರತಕ್ಕೆ ಮನವಿ ಮಾಡುವ ಜತೆ ಎಚ್ಚರಿಕೆಯನ್ನೂ ಡೊನಾಲ್ಡ್​ ಟ್ರಂಪ್​ ನೀಡಿದ್ದರು. ಔಷಧ ರಫ್ತು ಮಾಡಿದರೆ ಸಂತೋಷ. ಇಲ್ಲದಿದ್ದರೆ ಪ್ರತೀಕಾರಕ್ಕೂ ಮುಂದಾಗಬೇಕಾಗುತ್ತದೆ ಎಂದು ಮೋದಿಯವರಿಗೆ ಸವಾಲನ್ನೂ ಹಾಕಿದ್ದರು.

ಈಗ ಅಮೆರಿಕ ಅಧ್ಯಕ್ಷರ ಮನವಿಗೆ ಭಾರತ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದೆ. ಭಾರತ ಹೈಡ್ರೋಕ್ಸಿಕ್ಲೋರೋಕ್ವಿನ್​ ಔಷಧವನ್ನು ಅಮೆರಿಕಕ್ಕೆ ರಫ್ತು ಮಾಡುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ಅನುರಾಗ್​ ಶ್ರೀವಾಸ್ತವಾ ಈ ಬಗ್ಗೆ ಮಾಹಿತಿ ನೀಡಿದ್ದು, ಕರೊನಾ ವೈರಸ್​ ವಿರುದ್ಧ ಪರಿಣಾಮಕಾರಿಯಾಗಿರುವ ಹೈಡ್ರೋಕ್ಸಿಕ್ಲೋರೋಕ್ವಿನ್​ ಸೇರಿ ಅಗತ್ಯ ಔಷಧಗಳನ್ನು ನಾವು ನೆರೆ ರಾಷ್ಟ್ರಗಳಿಗೆ ಕಳಿಸುತ್ತೇವೆ. ಈ ಮೂಲಕ ಸಾಂಕ್ರಾಮಿಕ ರೋಗದಿಂದ ಪಾರಾಗಲು ಸಹಕರಿಸುತ್ತೇವೆ. ಹಾಗೇ ಇದೇ ವಿಚಾರವಿಟ್ಟುಕೊಂಡು ರಾಜಕೀಯ ಮಾಡುವುದನ್ನು, ಊಹಾಪೋಹಗಳನ್ನು ಹಬ್ಬಿಸುವುದನ್ನು ಖಂಡಿತ ಇಷ್ಟಪಡುವುದಿಲ್ಲ ಎಂದಿದ್ದಾರೆ. ಈ ಮೂಲಕ ಟ್ರಂಪ್​ಗೂ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ಕರೊನಾ ವೈರಸ್​ ಸಾಂಕ್ರಾಮಿಕ ತೀವ್ರವಾಗಿ ಬಾಧಿಸುತ್ತಿರುವ ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಗ್ಗಟ್ಟಾಗಿರಬೇಕು ಎಂಬುದನ್ನು ಭಾರತ ಮೊದಲಿನಿಂದಲೂ ಹೇಳುತ್ತ ಬಂದಿದೆ. ಮಾನವೀಯತೆಯ ನೆಲೆಗಟ್ಟಿನ ಮೇಲೆ ಭಾರತ ಇತರ ನೆರೆ ರಾಷ್ಟ್ರಗಳಿಗೆ ಹೈಡ್ರೋಕ್ಸಿಕ್ಲೋರೋಕ್ವಿನ್ ಮತ್ತು ಪ್ಯಾರೆಸಿಟಮಾಲ್ ಕಳಿಸಲಿದೆ ಎಂದಿದ್ದಾರೆ. ಹಾಗೇ ಈ ವಿಚಾರದಲ್ಲಿ ಅನಗತ್ಯ ವಿವಾದ ಸೃಷ್ಟಿಸುವ ಅಗತ್ಯವೂ ಇಲ್ಲ ಎಂದು ಹೇಳಿದ್ದಾರೆ.

ಹೈಡ್ರೋಕ್ಸಿಕ್ಲೋರೋಕ್ವಿನ್ ರಫ್ತು ನಿಷೇಧ ಮಾಡಿದ್ದರ ಬಗ್ಗೆ ಮಾತನಾಡಿದ ಅವರು, ಎಲ್ಲ ಜವಾಬ್ದಾರಿಯುತ ಸರ್ಕಾರಗಳ ಮೊದಲ ಆದ್ಯತೆ ನಮ್ಮ ದೇಶ ಮತ್ತು ಜನರು. ಈಗ ಭಾರತದಲ್ಲೂ ಕರೊನಾ ದಿನೇದಿನೆ ಹೆಚ್ಚುತ್ತಿದೆ. ಹೀಗಿರುವಾಗ ಔಷಧ ಸಂಗ್ರಹವೂ ಮುಖ್ಯವೇ. ಅದೇ ಕಾರಣಕ್ಕೆ ರಫ್ತು ನಿಷೇಧ ಮಾಡಲಾಗಿತ್ತು ಎಂದು ತಿಳಿಸಿದರು. (ಏಜೆನ್ಸೀಸ್​)