ಬೆಂಗಳೂರು: ವಕ್ಫ್ ವಿಚಾರವಾಗಿ ಎರಡನೇ ಹಂತದ ಹೋರಾಟ ಮುಂದುವರಿಸುತ್ತೇವೆ(We will fight for the second stage of waqf) . ಶುಕ್ರವಾರ ಈ ಕುರಿತು ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ. ನಮ್ಮ ನಡೆ ಜನರ ಕಡೆಗೆ, ನಮ್ಮ ನಡೆ ದೆಹಲಿ ಕಡೆಯಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್(Basanagowda Patil Yatnal) ತಿಳಿಸಿದರು.
ವಕ್ಫ್ ವಿರುದ್ಧದ ಹೋರಾಟ ಮುಂದುವರಿಯುತ್ತದೆ. ನಾವು ಈ ಮೊದಲೇ ಘೋಷಣೆ ಮಾಡಿದ್ದೇವೆ. ನಾವು ಹೋರಾಟ ಮಾಡೇ ಮಾಡುತ್ತೇವೆ. ಹಿಂದುಗಳು, ರೈತರಿಗೆ ಈ ಸರ್ಕಾರದಿಂದ ಅನ್ಯಾಯ ಆಗಿದೆ. ಮುಂದಿನ ದಿನಗಳಲ್ಲಿ ಸಭಾಧ್ಯಕ್ಷರ ಪೀಠದ ಮೇಲೆ ಮೌಲ್ವಿಗಳು ಬಂದು ಕೂರ್ತಾರೆ ಎಂದು ಲೇವಡಿ ಮಾಡಿದರು.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿಯಾಗುವ ಅವಶ್ಯಕತೆ ನನಗಿಲ್ಲ, ಅವರಾಗಿಯೇ ಬಂದು ನನ್ನ ಜೊತೆ ಮಾತನಾಡಿಸಿದರೂ ನಾನು ಮಾತನಾಡುವುದಿಲ್ಲ. ನಾನೇಕೆ ವಿಜಯೇಂದ್ರ ಅವರ ಜೊತೆ ಮಾತನಾಡಬೇಕು? ಹೈಕಮಾಂಡ್ ಕರೆದು ಮಾತನಾಡಿಸಿದರೆ ಮಾತನಾಡುತ್ತೇನೆ. ನಮಗೆ ಏನು ಅನ್ಯಾಯ ಆಗಿದೆ ಎಂಬುದು ನಮಗೆ ಗೊತ್ತಿದೆ. ನಮ್ಮ ನೋವು ನಮಗಿದೆ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ವಿಜಯೇಂದ್ರ ದೂರು ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮಗೆ ಹೊಸ ವರ್ಷ ಯುಗಾದಿ. ವಿಜಯೇಂದ್ರ ಅವರಿಗೆ ಯಾವುದು ಹೊಸ ವರ್ಷ ಎಂಬುದು ನನಗೆ ಗೊತ್ತಿಲ್ಲ. ಪಕ್ಷದಿಂದ ನನ್ನ ಉಚ್ಚಾಟನೆ ಆಗುವುದಿಲ್ಲ. ಉಚ್ಚಾಟನೆ ಎನ್ನುವುದು ಮಾಧ್ಯಮಗಳು ಸೃಷ್ಟಿ ಮಾಡಿರುವುದು. ನನ್ನನ್ನ ಏಕೆ ಉಚ್ಚಾಟನೆ ಮಾಡುತ್ತಾರೆ? ಎಂದು ಪ್ರಶ್ನಿಸಿದರು.
ನಾನು ಯಾರ ಜೊತೆಯೂ ಅಡ್ಜೆಸ್ಮೆಂಟ್ ಮಾಡಿಕೊಂಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಜಮೀರ್ ಅಹಮದ್ ಖಾನ್ ಜೊತೆ ನನ್ನ ಅಡ್ಜೆಸ್ಮೆಂಟ್ ಇಲ್ಲ. ವಿಜಯೇಂದ್ರಗೆ ದೆಹಲಿ ನಾಯಕರು ಪದೇ ಪದೇ ಅಪಾಯಿಂಟ್ಮೆಂಟ್ ಕೊಡುತ್ತಿದ್ದಾರೆ. ಅದಕ್ಕೆ ಹೋಗುತ್ತಾರೆ. ಆದರೆ ನಾವು ಯಾರ ಅಪಾಯಿಂಟ್ಮೆಂಟ್ ಕೇಳಿಲ್ಲ ಎಂದು ಹೇಳಿದರು.
ನಾವು ಯಾರ ಮೇಲೂ ದೂರು ಕೊಡುವುದಿಲ್ಲ. ನಮ್ಮದು ಜನರ ಆಂದೋಲನ. ನಮ್ಮದು ದಿಲ್ಲಿ ಆಂದೋಲನ ಅಲ್ಲ. ನನ್ನಂತ ಪಕ್ಷ ನಿಷ್ಠ ಯಾರು ಇಲ್ಲ. ನಾನು ಕಾಂಗ್ರೆಸ್ ಭಿಕ್ಷೆಯಿಂದ ಶಾಸಕನಾಗಿಲ್ಲ, ನಾನು ಹಿಂದೂಗಳಿಂದ, ಬಿಜೆಪಿಯಿಂದ ಶಾಸಕ ಆಗಿರೋದು. ವಿಜಯೇಂದ್ರ ಭೇಟಿಯಾಗುವ ಅವಶ್ಯಕತೆ ನನಗೆ ಇಲ್ಲ. ಯತ್ನಾಳ್ ಏನು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಯತ್ನಾಳ್ ಹೇಳಿದರು.