ನ್ಯೂಸ್

ಸರ್ಕಾರದ ವಿರುದ್ಧ ಸಂಘಟಿತ ಹೋರಾಟಕ್ಕೆ ವಿಪಕ್ಷಗಳ ನಿರ್ಣಯ; ರೈತರ ಪರ ಬೀದಿಗಿಳಿಯುವುದು ಅನಿವಾರ್ಯ, ಕೈ ನಾಯಕರ ಎಚ್ಚರಿಕೆ

ಬೆಂಗಳೂರು: ಲಾಕ್​ಡೌನ್​ನಿಂದಾಗಿ ತೊಂದರೆಗೆ ಸಿಲುಕಿರುವ ರೈತರು, ಶ್ರಮಿಕ ವರ್ಗದವರ ಪರ ಸಂಘಟಿತ ಹೋರಾಟ ನಡೆಸಲು ವಿರೋಧ ಪಕ್ಷಗಳು ನಿರ್ಣಯಿಸಿವೆ. ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ವಿರೋಧ ಪಕ್ಷಗಳು ಕರೊನಾ ವಿಚಾರದಲ್ಲಿ ಸರ್ಕಾರಕ್ಕೆ ಸಹಕರಿಸುತ್ತ ಬಂದಿವೆ. ಆದರೂ ರೈತರು, ಶ್ರಮಿಕ ವರ್ಗದವರ ಬಗ್ಗೆ ಪ್ರತಿಪಕ್ಷಗಳು ನೀಡುತ್ತಿರುವ ಮನವಿಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು. ಕಾಂಗ್ರೆಸ್, ಜೆಡಿಎಸ್, ಸಿಪಿಐಎಂ, ಸಿಪಿಐ ಹಾಗೂ ರೈತ ಸಂಘಟನೆಗಳ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು. ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿದ್ದರಾಮಯ್ಯ, ಸಭೆಯಲ್ಲಿ ರೈತರ ಜತೆ ವಿವಿಧ ವಲಯಗಳ ಕಾರ್ವಿುಕರು, ಸಾಂಪ್ರದಾಯಿಕ ವೃತ್ತಿ ಅವಲಂಬಿಸಿ ಜೀವನ ನಡೆಸುತ್ತಿರುವ ವಿವಿಧ ಸಮುದಾಯಗಳವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಸಮಾಲೋಚಿಸಲಾಯಿತು ಎಂದರು.

ಸಭೆಯಲ್ಲಿನ ಚರ್ಚೆ ಆಧರಿಸಿ ಬೇಡಿಕೆಗಳ ಪಟ್ಟಿ ಸಿದ್ಧಪಡಿಸಿದ ಬಳಿಕ ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಅದಕ್ಕೂ ಸರ್ಕಾರ ಕಿವಿಗೊಡದಿದ್ದರೆ ವಿರೋಧ ಪಕ್ಷಗಳು ಒಟ್ಟಾಗಿ ಬೀದಿಗಿಳಿಯುವುದು ಅನಿವಾರ್ಯ ಎಂದರು.

ಕರೊನಾ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಪ್ರಧಾನಿ ಮಂತ್ರಿ ಪರಿಹಾರ ನಿಧಿಗಳಿಗೆ ರಾಜ್ಯದಿಂದ ಸಂದಾಯವಾದ ಹಣ ಏನಾಯಿತು? ಕೇಂದ್ರದಿಂದ ರಾಜ್ಯಕ್ಕೂ ಹಣ ಬರಲಿಲ್ಲ. ಹಾಗಿದ್ದರೆ ಎಲ್ಲಿ ಹೋಯಿತು? ಎಂದು ಪ್ರಶ್ನಿಸಿದರು.

ಲಾಕ್​ಡೌನ್ ಜಾರಿಯಾಗಿ 40 ದಿನಗಳಾಗುತ್ತಿದ್ದರೂ ಅದು ಮತ್ತೆ ಮುಂದುವರಿಯುವುದೋ ಇಲ್ಲವೋ ಗೊತ್ತಿಲ್ಲ. ಆದರೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಹಣ್ಣು-ತರಕಾರಿಗಳನ್ನು ಸರ್ಕಾರವೇ ಖರೀದಿಸಿ ಬಡವರಿಗೆ, ಪಡಿತರ ಚೀಟಿದಾರರಿಗೆ ಉಚಿತವಾಗಿ ನೀಡಬೇಕು ಎಂದು ಆಗ್ರಹಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಸಲೀಂ ಅಹಮದ್, ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಸೇರಿ ಹಲವರು ಇದ್ದರು.

ಅವ್ಯವಹಾರ ನೋಡಿ ಸುಮ್ಮನಿರಲಾಗದು: ಸರ್ಕಾರಕ್ಕೆ ನೀಡಿದ್ದ ಸಹಕಾರ ಕಾಲಾವಕಾಶ ಮುಗಿದಿದೆ. ಬಡವರಿಗೆ ನೀಡುವ ಅಕ್ಕಿಯಿಂದ ಹಿಡಿದು, ಹಾಲು, ತರಕಾರಿ, ದಿನಸಿ ಹಂಚಿಕೆವರೆಗೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇನ್ನೇನಿದ್ದರೂ ನಾವು ಸರ್ಕಾರದ ವೈಫಲ್ಯಗಳ ವಿರುದ್ಧ ಬೀದಿಗಿಳಿದು ಹೋರಾಡಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎಚ್ಚರಿಸಿದ್ದಾರೆ. ಒಂದು ತಿಂಗಳಿಂದ ಸಂಕಷ್ಟದ ಸಮಯದಲ್ಲಿ ನಾವು ಸರ್ಕಾರಕ್ಕೆ ಸಂಪೂರ್ಣ ಸಹಕರಿಸಿದ್ದೇವೆ. ರಾಜಕಾರಣ ಮಾಡಬಾರದು ಹಾಗೂ ಮಾನವೀಯತೆ ದೃಷ್ಟಿಯಿಂದ ಸರ್ಕಾರದ ಜತೆ ಕೈ ಜೋಡಿಸಿದ್ದೇವೆ. ಆದರೆ ಸಚಿವರ ನಡುವೆ ಸಮನ್ವಯತೆ, ಅಧಿಕಾರಿಗಳಲ್ಲಿ ಹೊಂದಾಣಿಕೆ ಕೊರತೆ ಇದ್ದು, ಪ್ರತಿ ವಿಚಾರದಲ್ಲೂ ದಂಧೆ ನಡೆಯುತ್ತಿದೆ. ಅದನ್ನು ನೋಡಿಕೊಂಡು ಸುಮ್ಮನೆ ಕೂರಲು ಇನ್ನು ಸಾಧ್ಯವಿಲ್ಲ ಎಂದರು. ಕೇಂದ್ರ-ರಾಜ್ಯ ಸರ್ಕಾರಗಳು ಜನರಿಗೆ ಕೊಟ್ಟ ಆಶ್ವಾಸನೆಗಳಲ್ಲಿ ಒಂದೂ ಕಾರ್ಯ ರೂಪಕ್ಕೆ ಬಂದಿಲ್ಲ. ಆಹಾರ ವಿತರಣೆಯಲ್ಲಿ ಶೇ.20 ಕೆಲಸ ಆಗಿರುವುದು ಬಿಟ್ಟರೆ, ಆರೋಗ್ಯ ವಿಷಯದಿಂದ ಹಿಡಿದು ಕಾರ್ವಿುಕರ ಸಮಸ್ಯೆವರೆಗೂ ಎಲ್ಲೂ ಕೆಲಸ ಆಗಿಲ್ಲ ಎಂದರು.

ಕೇರಳ ಸರ್ಕಾರ ಕರೊನಾ ನಿಯಂತ್ರಣಕ್ಕೆ 20 ಸಾವಿರ ಕೋಟಿ ರೂ. ವೆಚ್ಚ ಮಾಡಿಲ್ಲವೇ? ಒಂದು ವೇಳೆ ರಾಜ್ಯ ಸರ್ಕಾರಕ್ಕೆ ಹಣಕಾಸು ತೊಂದರೆ ಇದ್ದಲ್ಲಿ ಸರ್ಕಾರ ಕೇಂದ್ರದ ನೆರವು ಕೋರಲಿ. | ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ ತೋಟಗಳಲ್ಲಿ ಫಲಗಳು ಕೊಳೆಯುತ್ತಿವೆ. ಮುಸಲ್ಮಾನ ವ್ಯಾಪಾರಿಗಳಿಗೆ ತೋಟದೊಳಗೆ ಕಾಲಿಡಲು ಅವಕಾಶ ನೀಡುತ್ತಿಲ್ಲ, ಬೇರೆ ರಾಜ್ಯದವರು ಬರು ವಂತಿಲ್ಲ. ಎಲ್ಲ ವರ್ಗದ ಜನರ ಬದುಕು ಶೋಚನೀಯವಾಗಿದೆ. | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ