ಹೈದರಾಬಾದ್: ವಿವಾದಾತ್ಮಕ ಟ್ವೀಟ್‌ಗಳಿಗೆ ಹೆಸರುವಾಸಿಯಾಗಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಭಾರತೀಯ ಚಲನಚಿತ್ರ ನಿರ್ಮಾಪಕರ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ಸಂದರ್ಶವೊಂದರಲ್ಲಿ ರಾಮ್ ಗೋಪಾಲ್ ವರ್ಮಾ ಅವರಿಗೆ ಹಾಲಿವುಡ್ ಚಿತ್ರ ನಿರ್ಮಾಪಕರು 70-80 ವರ್ಷ ವಯಸ್ಸಿನಲ್ಲೂ ಅಂತಹ ಉತ್ತಮ ಚಿತ್ರಗಳನ್ನು ಹೇಗೆ ಮಾಡುತ್ತಾರೆ? ಪ್ರೇಕ್ಷಕರ ಅಭಿರುಚಿಯನ್ನು ಬದಲಾಯಿಸಿದರೂ ಅವರ ಚಿತ್ರಗಳು ಹೇಗೆ ಹಿಟ್ ಆಗುತ್ತವೆ ಎಂದು ಕೇಳಲಾಯಿತು.
ಅದಕ್ಕೆ ಪ್ರತಿಕ್ರಿಯಿಸಿದ ಅವರು, ನೀವು ಸ್ಕೋರ್ಸೆಸ್ ಬಗ್ಗೆ ಮಾತನಾಡಿದರೆ ಅಥವಾ ಕ್ಲಿಂಟ್ ಈಸ್ಟ್‌ವುಡ್ ಬಗ್ಗೆ ಮಾತನಾಡಿದರೆ, ಅವರು ತಮ್ಮ ಚಲನಚಿತ್ರಗಳಿಗೆ ನೈಜತೆ ಮತ್ತು ಪರಿಣಾಮಕಾರಿಯಾಗಿರುವಂತಹ ಆಸಕ್ತಿದಾಯಕ ವಿಷಯಗಳನ್ನು ಆಯ್ದುಕೊಂಡು ಅಷ್ಟೇ ಆಸಕ್ತಿದಾಯಕವಾಗಿ ಸಿನಿಮಾ ಮಾಡುತ್ತಾರೆ. ಅದಕ್ಕಿಂತ ಹೆಚ್ಚಾಗಿ ಅವರ ವೈಯಕ್ತಿಕ ದೃಷ್ಟಿಕೋನವು ಅವರ ಚಲನಚಿತ್ರಗಳಲ್ಲಿ ಪ್ರತಿಫಲಿಸುತ್ತದೆ ಎಂದು ಹೇಳಿದ್ದಾರೆ.
ಮೊದಲನೆಯದಾಗಿ, ನಾವು ಅವರಂತೆ ಚಿತ್ರಗಳನ್ನು ಮಾಡುವುದಿಲ್ಲ. ನಾವು ಪ್ರೇಕ್ಷಕರನ್ನು ಮೂರ್ಖರು ಎಂದು ಪರಿಗಣಿಸುತ್ತೇವೆ. ಈಗ ಸಿನಿಮಾ ಮಾಡುತ್ತಿರುವ ರೀತಿ ಒಂದೇ ಆಗಿರುತ್ತದೆ. ಹಾಲಿವುಡ್‌ನಲ್ಲಿ ಇದು ನಡೆಯುತ್ತಿಲ್ಲ. ಅವರು ತಮ್ಮ ಪ್ರೇಕ್ಷಕರನ್ನು ಅರ್ಥಮಾಡಿಕೊಳ್ಳುತ್ತಾರೆ. ಅಲ್ಲಿನ ಸಿನಿಮಾ ಮತ್ತು ಅಲ್ಲಿನ ಮಾನದಂಡವೆ ಬೇರೆ. ಇಲ್ಲಿಯ ಬೆಂಚ್‌ಮಾರ್ಕ್ ಏನೆಂದು ಊಹಿಸಿ. ಅಲ್ಲಿ ಎಲ್ಲಾ ಸ್ಟಾರ್ ಸೆಲಿಬ್ರಿಟಿಗಳು ಸೇರಿ ಓಪನ್‌ಹೈಮರ್‌ನಂತಹ ಸಿನಿಮಾ ಮಾಡುತ್ತಾರೆ. ಆದರೆ ಇಲ್ಲಿ ಸ್ಟಾರ್ ಸೆಲೆಬ್ರಿಟಿಗಳು ಒಟ್ಟಾಗಿ ಸೇರಿ ಥಗ್ಸ್ ಆಫ್ ಹಿಂದೂಸ್ತಾನ್ನಂತಹ ಚಿತ್ರ ಮಾಡುತ್ತಾರೆ ಎಂದಿದ್ದಾರೆ.
ಇಲ್ಲಿಯ ದಿ ಕಾಶ್ಮೀರ್ ಫೈಲ್ಸ್', 'ಹನುಮಾನ್', 'ಅನಿಮಲ್' ಮತ್ತು 'ಕಲ್ಕಿ 2898 AD' ನಂತಹ ಚಲನಚಿತ್ರಗಳನ್ನು ರಾಮ್ ಗೋಪಾಲ್ ವರ್ಮಾ ಬೆಂಬಲಿಸಿದ್ದಾರೆ. ಶಿವ ಸಿನಿಮಾದ ಮೂಲಕ ಚಲನಚಿತ್ರ ನಿರ್ದೇಶಕರಾಗಿ 1989ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ,1990 ರಲ್ಲಿ ಅದೇ ಚಿತ್ರವನ್ನು 'ಶಿವಂ' ಎಂದು ರಿಮೇಕ್ ಮಾಡಿದರು. ಬಾಲಿವುಡ್ನಲ್ಲಿ ಇದು ಅವರ ಚೊಚ್ಚಲ ಸಿನಿಮಾವಾಗಿದೆ. (ಏಜೆನ್ಸೀಸ್)