PM Modi: ನೇಪಾಳದಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾದ ಭೂಕುಸಿತ ಮತ್ತು ಪ್ರವಾಹದಲ್ಲಿ ಕನಿಷ್ಠ 52 ಜನರು ಸಾವನ್ನಪ್ಪಿದ್ದಾರೆ. ಪ್ರವಾಹ ಪೀಡಿತ ನೇಪಾಳದೊಂದಿಗೆ ಭಾರತ ಸದಾ ಇರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ನೇಪಾಳದಲ್ಲಿ ಭಾರೀ ಮಳೆಯಿಂದ ಉಂಟಾದ ಜೀವ ಹಾನಿ ಮತ್ತು ಆಸ್ತಿಪಾಸ್ತಿ ನಷ್ಟವು ಹೃದಯವಿದ್ರಾವಕವಾಗಿದೆ. ಈ ಕಷ್ಟದ ಸಮಯದಲ್ಲಿ ನಾವು ನೇಪಾಳ ಜನರು ಮತ್ತು ನೇಪಾಳ ಸರ್ಕಾರದೊಂದಿಗೆ ನಿಲ್ಲುತ್ತೇವೆ. ಅಲ್ಲದೆ, ಸ್ನೇಹಪರ ನೆರೆಹೊರೆಯವರಿಗೆ ಅಗತ್ಯವಿರುವ ಯಾವುದೇ ರೀತಿಯ ಸಹಾಯವನ್ನು ಒದಗಿಸಲು ಭಾರತ ಬದ್ಧವಾಗಿದೆ ಎಂದು ಅಶ್ವಾಸನೆ ನೀಡಿದ್ದಾರೆ.
ಇದನ್ನೂ ಓದಿ: Jitan Manjhi | ಬಿಹಾರ ಚುನಾವಣೆ; 25 ಟಿಕೆಟ್ ಬೇಕು ಎಂದು ಎನ್ಡಿಎ ಮುಂದೆ ಡಿಮ್ಯಾಂಡ್ ಇಟ್ಟ ಮಾಜಿ ಸಿಎಂ ಜಿತನ್ ರಾಮ್ ಮಾಂಝಿ
ನೇಪಾಳದಲ್ಲಿ ಕಳೆದ ಶುಕ್ರವಾರದಿಂದ ನಿರಂತರ ಮಳೆಯಾಗುತ್ತಿದೆ. ಈ ಪರಿಸ್ಥಿತಿಯಿಂದಾಗಿ ಹಲವಾರು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು, ಪೂರ್ವ ನೇಪಾಳದಲ್ಲಿ ಎಂಟು ಪ್ರಮುಖ ನದಿಗಳು ಅಪಾಯದ ಮಟ್ಟ ದಾಟಿ ಹರಿಯುತ್ತವೆ. ಪ್ರವಾಹ ಪೀಡಿತ ಸ್ಥಳಗಳಿಗೆ ರಕ್ಷಣಾ ಕಾರ್ಯಾಚರಣೆ ನಡೆಸಲು ನೇಪಾಳ ಸೇನೆ, ಪೊಲೀಸರು ಮತ್ತು ಸಶಸ್ತ್ರ ಪೊಲೀಸ್ ಪಡೆ (ಎಪಿಎಫ್) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಈ ವಿಪತ್ತಿಗೆ ಪ್ರತಿಕ್ರಿಯೆಯಾಗಿ, ನೇಪಾಳ ಸರ್ಕಾರ ಭಾನುವಾರ ಮಳೆ ಸಂಬಂಧಿತ ವಿಪತ್ತುಗಳಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ತಕ್ಷಣದ ಪರಿಹಾರವಾಗಿ 2,00,000 ನೇಪಾಳಿ ರೂಪಾಯಿಗಳನ್ನು ಘೋಷಿಸಿದೆ. ರಾಷ್ಟ್ರೀಯ ವಿಪತ್ತು ಮತ್ತು ಅಪಾಯ ಕಡಿತ ನಿರ್ವಹಣಾ ಪ್ರಾಧಿಕಾರ (NDRRMA)ದ ಹೇಳಿಕೆಯ ಪ್ರಕಾರ, ಮೃತಪಟ್ಟವರಿಗೆ ಪರಿಹಾರದ ಜತೆಗೆ, ಗಾಯಾಳುಗಳಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗುವುದು ಎಂದು ತಿಳಿದು ಬಂದಿದೆ.
ನೇಪಾಳದಲ್ಲಿ ಇಲಾಮ್ ಅತ್ಯಂತ ಹಾನಿಗೊಳಗಾದ ಪ್ರದೇಶವಾಗಿದ್ದು, ಭೂಕುಸಿತ ಮತ್ತು ಪ್ರವಾಹದಿಂದ 37 ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ, ಇತರ ಜಿಲ್ಲೆಗಳಲ್ಲಿ, ಇನ್ನೂ 12 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೋಶಿಯಲ್ಲಿ ಇನ್ನೂ ಒಬ್ಬರು ಕಾಣೆಯಾಗಿದ್ದಾರೆ ಮತ್ತು ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ ಎಂದು ಸಶಸ್ತ್ರ ಪೊಲೀಸ್ ಪಡೆ ಪ್ರಧಾನ ಕಚೇರಿ ಹೇಳಿದೆ. (ಏಜೆನ್ಸೀಸ್)