ನ್ಯೂಸ್

ಜನಾದೇಶ ಕೊಟ್ಟ ತೀರ್ಪನ್ನು ಗೌರವಿಸುತ್ತೇವೆ: ನವೀನ್ ಪಟ್ನಾಯಕ್​

ಭುವನೇಶ್ವರ: ಜನರ ತೀರ್ಪನ್ನು ಗೌರವಿಸುತ್ತೇನೆ ಎಂದು ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್ ಅವರು ಶನಿವಾರ ಹೇಳಿದರು. ಅಲ್ಲದೆ ಸಾಧ್ಯವಿರುವ ಎಲ್ಲಾ ವಿಧಗಳಲ್ಲಿ ಒಡಿಶಾದ ಜನರ ಸೇವೆ ಮಾಡುವುದನ್ನು ಮುಂದುವರಿಸುತ್ತೇನೆ ಎಂದು ಹೇಳಿದರು.

ಪಿಟಿಐ ಸುದ್ದಿಸಂಸ್ಥೆ ಜೊತೆ ಮಾತನಾಡಿರುವ ಅವರು, ಬಿಜೆಡಿ ಸರ್ಕಾರ ಮತ್ತು ಪಕ್ಷದ ಬಗ್ಗೆ ನನಗೆ ಹೆಮ್ಮೆ ಇದೆ. "ನಾವು ನಮ್ಮ ಪ್ರಯತ್ನ ಮಾಡಿದ್ದೇವೆ. ಅತ್ಯುತ್ತಮವಾದ ಕೆಲಸವನ್ನು ಮಾಡಿದ್ದೇವೆ. ನಮ್ಮ ಸರ್ಕಾರ ಮತ್ತು ಪಕ್ಷದ ಬಗ್ಗೆ ನಮಗೆ ಅಪಾರ ಹೆಮ್ಮೆ ಇದೆ. ಪ್ರಜಾಪ್ರಭುತ್ವದಲ್ಲಿ, ನೀವು ಒಂದೋ ಸೋಲಬೇಕು ಅಥವಾ ಗೆಲ್ಲಬೇಕು ಎಂದು ಅವರು ತಿಳಿಸಿದರು.

"ಸುದೀರ್ಘ ಅವಧಿಯ ಬಳಿಕ ನಾವು ಸೋಲನ್ನು ಅನುಭವಿಸಿದ್ದೇವೆ. ಜನರ ತೀರ್ಪನ್ನು ಬಹಳ ಗೌರವದಿಂದ ಸ್ವೀಕರಿಸಬೇಕಿದೆ. ಒಡಿಶಾದ 4.5 ಕೋಟಿ ಜನರು ನನ್ನ ಕುಟುಂಬ ಎಂದು ನಾನು ಹಲವು ಬಾರಿ ಹೇಳಿದ್ದೇನೆ. ಸಾಧ್ಯವಿರುವ ಎಲ್ಲಾ ವಿಧಗಳಲ್ಲಿ ಅವರ ಸೇವೆ ಮಾಡುವುದನ್ನು ಮುಂದುವರೆಯುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.

ಒಡಿಶಾದ ಜನರು ನನಗೆ ಪದೇ ಪದೇ ಆಶೀರ್ವಾದವನ್ನು ಮಾಡಿದ್ದಾರೆ. ಅವರಿಗೆ ನಾನು ಋಣಿ ಎಂದು ಮಾಜಿ ಸಿಎಂ ಪಟ್ನಾಯಕ್​ ಹೇಳಿದರು.

ಸತತ 24 ವರ್ಷಗಳ ಕಾಲ ಒಡಿಶಾದ ಮುಖ್ಯಮಂತ್ರಿಯಾಗಿದ್ದ ನವೀನ್ ಪಟ್ನಾಯಕ್​, ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೋಲು ಅನುಭವಿಸಿ ಅಧಿಕಾರ ಕಳೆದುಕೊಂಡಿದ್ದರು. 147 ಸದಸ್ಯ ಬಲದ ವಿಧಾನಸಭೆಯಲ್ಲಿ 78 ಸ್ಥಾನಗಳನ್ನು ಗೆಲ್ಲುವ ಮೂಲಕ ಪಟ್ನಾಯಕ್ ನೇತೃತ್ವದ ಪಕ್ಷವು 51 ಸ್ಥಾನಗಳನ್ನು ಗೆದ್ದುಕೊಂಡಿತು, ಕಾಂಗ್ರೆಸ್ ಕೇವಲ 14 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು.