ಬೆಂಗಳೂರು: ವಾಸ್ತವ ಗಡಿರೇಖೆ ಬಳಿ ಚೀನಿಯರು ನಮ್ಮ ದೇಶದ ಮೇಲೆ ದಾಳಿ ಮಾಡಿದ್ದಾರೆ. ಇದಕ್ಕೆ ಸುಮ್ಮನಿರಲು ಸಾಧ್ಯವಿಲ್ಲ. ಈ ವಿಷಯವಾಗಿ ನೀವು ತೆಗೆದುಕೊಳ್ಳುವ ನಿರ್ಧಾರಗಳಿಗೆ ನಮ್ಮ ಸಂಪೂರ್ಣ ಬೆಂಬಲ ಇರುತ್ತದೆ ಎಂದು ರಾಜ್ಯಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭರವಸೆ ನೀಡಿದ್ದಾರೆ.
ನಾವು ಸಂಪೂರ್ಣ ಬೆಂಬಲ ನೀಡುತ್ತಿದ್ದೇವೆ ಎಂದ ಮಾತ್ರಕ್ಕೆ ಸತ್ಯವನ್ನು ಮರೆಮಾಚಬೇಡಿ. ಜನರ ಮುಂದೆ ಸತ್ಯವನ್ನು ತೆರೆದಿಡಿ ಎಂದು ಮನವಿ ಮಾಡಿಕೊಂಡರು.
ಚೀನಾದೊಂದಿಗಿನ ಘರ್ಷಣೆಯ ವಿಷಯವಾಗಿ ಪ್ರಧಾನಿ ಮೋದಿ ಹೇಳಿದ್ದೇ ಸತ್ಯ ಎಂದು ನಂಬುವವರು ಎಲ್ಲ ಮಾಧ್ಯಮಗಳಲ್ಲೂ ಇದ್ದಾರೆ. ಆದರೂ ಕೆಲ ಮಾಧ್ಯಮಗಳಲ್ಲಿ ಈ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೂಡ ಈ ಬಗ್ಗೆ ಪ್ರಶ್ನೆ ಎತ್ತಿದ್ದರು. ಆದ್ದರಿಂದ, ಪ್ರಧಾನಿ ಮೋದಿ ಈ ಬಗ್ಗೆ ಈಗಲಾದರೂ ಬಾಯಿ ತೆರೆಯಬೇಕು ಎಂದು ಆಗ್ರಹಿಸಿದರು.
ನಾವೆಲ್ಲರೂ ಸೇರಿ ದೇಶವನ್ನು ಉಳಿಸಬೇಕಿದೆ. ಆದರೆ ಪ್ರಧಾನಿ ಮೋದಿ ತಾವು ಹೇಳಿದ್ದೇ ಸರಿ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ ಎಂದರು.