ನ್ಯೂಸ್

ನಾವು ಧರ್ಮದ ಆಧಾರದ ಮೇಲೆ ಉಗ್ರರನ್ನು ಕೊಂದಿಲ್ಲ, ಬದಲಾಗಿ ಕರ್ಮದ ಆಧಾರದ ಮೇಲೆ ಬಲಿ ತಗೆದುಕೊಂಡಿದ್ದೇವೆ ಎಂದ ರಕ್ಷಣಾ ಸಚಿವ|Rajnath Singh

Rajnath Singh: ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಧರ್ಮವನ್ನು ಕೇಳಿ ಜನರನ್ನು ಕೊಂದರು, ಆದರೆ ನಮ್ಮ ಸೈನಿಕರು ಧರ್ಮದ ಆಧಾರದ ಮೇಲೆ ಭಯೋತ್ಪಾದಕರನ್ನು ಕೊಂದಿಲ್ಲ, ಬದಲಿಗೆ ಅವರ ಕರ್ಮಗಳಿಗಾಗಿ ಕೊಂದಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ (ಆಗಸ್ಟ್​,25) ಹೇಳಿದ್ದಾರೆ.

ರಾಜಸ್ಥಾನದ ಜೋಧ್‌ಪುರದಲ್ಲಿ ಮಾತನಾಡಿದ ರಕ್ಷಣಾ ಸಚಿವರು, ಭಾರತವು ವಸುಧೈವ ಕುಟುಂಬಕಂ ಎಂಬ ಪರಿಕಲ್ಪನೆಯನ್ನು ನಂಬುತ್ತದೆ ಮತ್ತು ಜಾತಿ ಅಥವಾ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ನಮ್ಮ ರಕ್ಷಣಾ ಪಡೆಗಳು ಆಪರೇಷನ್ ಸಿಂಧೂರದಲ್ಲಿ ಪಾಕಿಸ್ತಾನಕ್ಕೆ ಸೂಕ್ತ ಪ್ರತ್ಯುತ್ತರ ನೀಡಿವೆ. ನಾವು ನಿರ್ಧರಿಸಿದ ನಿಖರ ಗುರಿಗಳ ಮೇಲೆ ದಾಳಿ ಮಾಡಿವೆ ಎಂದು ರಾಜನಾಥ್​ ಸಿಂಗ್ ಹೇಳಿದ್ದಾರೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕ ಹೊಂದಿರುವ ನೆಲೆಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ.

ರಾಜನಾಥ್​ ಸಿಂಗ್ ರಕ್ಷಣಾ ಮತ್ತು ಕ್ರೀಡಾ ಅಕಾಡೆಮಿಯನ್ನು ಉದ್ಘಾಟಿಸಲು ಮತ್ತು ಸೈನಿಕರ ಕುಟುಂಬಗಳನ್ನು ಗೌರವಿಸಲು ಜೋಧ್‌ಪುರದಲ್ಲಿ ಇದ್ದರು.

NCERT ಪಠ್ಯದಲ್ಲಿ ಆಪರೇಷನ್​ ಸಿಂಧೂರ

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT ) ಆಪರೇಷನ್ ಸಿಂಧೂರ ಕುರಿತು ವಿಶೇಷ ಮಾಡ್ಯೂಲ್‌ಗಳನ್ನು ಬಿಡುಗಡೆ ಮಾಡಿದೆ. ಇದನ್ನು 3 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ.

ಆಪರೇಷನ್ ಸಿಂಧೂರವು ಕೇವಲ ಮಿಲಿಟರಿ ಕಾರ್ಯಾಚರಣೆಯಾಗಿರಲಿಲ್ಲ, ಬದಲಾಗಿ ಶಾಂತಿಯನ್ನು ರಕ್ಷಿಸುವ ಮತ್ತು ಕಳೆದುಕೊಂಡ ಜೀವಗಳನ್ನು ಗೌರವಿಸುವ ಭರವಸೆಯಾಗಿತ್ತು ಎಂದು ಈ ಮಾಡ್ಯೂಲ್‌ ಹೇಳುತ್ತವೆ.

ಆಪರೇಷನ್ ಸಿಂಧೂರ್: ಎ ಸಾಗಾ ಆಫ್ ಶೌರ್ಯ' ಎಂಬ ಶೀರ್ಷಿಕೆಯ ಮಾಡ್ಯೂಲ್ 3 ರಿಂದ 8 ನೇ ತರಗತಿಗಳಿಗೆ ಮೀಸಲಾಗಿದ್ದರೆ, ಆಪರೇಷನ್ ಸಿಂಧೂರ್: ಎ ಮಿಷನ್ ಆಫ್ ಆನರ್ ಅಂಡ್ ಬ್ರೇವರಿ ಎಂಬ ಇನ್ನೊಂದು ಮಾಡ್ಯೂಲ್ 9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ. (ಏಜೆನ್ಸೀಸ್)