ವಯನಾಡ್: ಭೂ ಕುಸಿತ ಸಂಭವಿಸಿದ ವಯನಾಡ ಸ್ಥಳಗಳಲ್ಲಿ ಸಂತ್ರಸ್ತರ ಕಾಳಜಿ ಕೇಂದ್ರಗಳಾಗಿ ಶಾಲೆಗಳು ಪರಿವರ್ತಿತವಾಗಿದ್ದು, ಅಲ್ಲಿ ಶೀಘ್ರವೇ ತರಗತಿಗಳನ್ನು ಪುನರಾರಂಭಿಸಲಾಗುವುದು ಎಂದು ಕೇರಳ ಶಿಕ್ಷಣ ಮತ್ತು ಕಾರ್ಮಿಕ ಸಚಿವ ವಿ. ಶಿವನ್ ಕುಟ್ಟಿ ತಿಳಿಸಿದ್ದಾರೆ.
ಅನೇಕ ಶಾಲೆಗಳನ್ನು ಕಾಳಜಿ ಶಿಬಿರಗಳಾಗಿ ಪರಿವರ್ತಿಸಲಾಗಿದೆ. ಶಿಕ್ಷಕರು, ಪೋಷಕರು ಮತ್ತು ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಲಾಗಿದ್ದು, 10-20 ದಿನಗಳಲ್ಲಿ ತರಗತಿಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ತರಗತಿಗಳ ಆರಂಭಕ್ಕೂ ಮುನ್ನ ಶಾಲೆಗಳಿಗೆ ಮೂಲಸೌಕರ್ಯಗಳನ್ನು ಒದಗಿಸಬೇಕಾದ ಅಗತ್ಯವಿದೆ. ಭೂಕುಸಿತ ಪೀಡಿತ ಪ್ರದೇಶಗಳಲ್ಲಿನ ಮಕ್ಕಳ ಶಿಕ್ಷಣಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಿರ್ದೇಶನದ ನೀಡಿದ್ದಾರೆ ಎಂದು ಹೇಳಿದರು.
ಭೂಕುಸಿತದಲ್ಲಿ 36 ಮಕ್ಕಳು ಸಾವನ್ನಪ್ಪಿದ್ದಾರೆ. 17 ಮಂದಿ ಮಕ್ಕಳು ನಾಪತ್ತೆಯಾಗಿದ್ದಾರೆ. 316 ಮಂದಿಯನ್ನು ಕಾಳಜಿ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಮತ್ತು ಐವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಾಮಾನ್ಯ ಶಿಕ್ಷಣ ಇಲಾಖೆ ತಿಳಿಸಿದೆ. ದುರಂತದಲ್ಲಿ 276 ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ಕಳೆದುಕೊಂಡಿದ್ದಾರೆ. 438 ವಿದ್ಯಾರ್ಥಿಗಳು ಇತರ ಅಧ್ಯಯನ ಸಾಮಗ್ರಿಗಳನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದೆ.
ಭೂಕುಸಿತದಲ್ಲಿ ಗಾಯಗೊಂಡ ಕಾರ್ಮಿಕರು ಮತ್ತು ಸಾವನ್ನಪ್ಪಿದ ಕಾರ್ಮಿಕರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ಕಾರ್ಮಿಕ ಮಂಡಳಿ ನಿರ್ಧರಿಸಿದೆ ಎಂದು ಸಚಿವರು ಹೇಳಿದರು. ವಲಸೆ ಕಾರ್ಮಿಕರಿಗೆ ಚಿಕಿತ್ಸೆ ಸೇರಿದಂತೆ ಆರ್ಥಿಕ ನೆರವು ನೀಡಲಾಗುವುದು. ಶಿವನಕುಟ್ಟಿ ಮಾತನಾಡಿ, ಭೂಕುಸಿತದಿಂದ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ಮೊದಲ ಕಂತಾಗಿ 1 ಲಕ್ಷ ರೂ. ನೀಡಲಾಗುವುದು ಎಂದು ಹೇಳಿದ್ದಾರೆ.