ನ್ಯೂಸ್

ವಯನಾಡು ಭೂ ಕುಸಿತ: ಸಾವಿನ ಸಂಖ್ಯೆ 270ಕ್ಕೆ ಏರಿಕೆ

ವಯನಾಡ್​: ಕೇರಳದ ವಯನಾಡು ಜಿಲ್ಲೆಯ ಚೂರಲ್ ಮಲ ಮತ್ತು ಮುಂಡಕೈ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 270 ಕ್ಕೆ ತಲುಪಿದೆ. ಈ ಪೈಕಿ 89 ಜನರನ್ನು ಗುರುತಿಸಲಾಗಿದೆ. ಇನ್ನೂ ಮೃತದೇಹಗಳು ಪತ್ತೆಯಾಗುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ವಯನಾಡಿನ ಚೂರಲ್ ಮಲ ಮತ್ತು ಮುಂಡಕೈ ದುರಂತದಲ್ಲಿ ಬುಧವಾರದವರೆಗೆ 270 ಮಂದಿ ಸಾವಿಗೀಡಾಗಿದ್ದಾರೆ ಎಂದು ಮಲಯಾಳಂನ ಮನೋರಮಾ ನ್ಯೂಸ್ ವರದಿ ಮಾಡಿದೆ. ಅಲ್ಲದೆ 143 ಮೃತದೇಹಗಳ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದ್ದು, ಈ ಪೈಕಿ 32 ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎನ್ನಲಾಗಿದೆ.

ವಯನಾಡ್ ಜಿಲ್ಲಾಡಳಿತದ ಪ್ರಕಾರ, ಇದುವರೆಗೆ 167 ಮೃತದೇಹಗಳ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಅದರಲ್ಲಿ 77 ಪುರುಷರು, 67 ಮಹಿಳೆಯರು ಮತ್ತು 22 ಮಕ್ಕಳು ಸೇರಿದಂತೆ 96 ಜನರನ್ನು ಗುರುತಿಸಲಾಗಿದೆ. 166 ಮೃತದೇಹಗಳು ಮತ್ತು 61 ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅಲ್ಲದೆ 75 ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎನ್ನಲಾಗಿದೆ ಎಂದು ತಿಳಿಸಿದೆ.

ಮುಂಡಕೈ ನದಿಯಲ್ಲಿ ಪ್ರವಾಹ ಜೋರಾದರೂ ಸೇನೆ ಸೇತುವೆ ಕಾಮಗಾರಿ ಮುಂದುವರೆಸಿದೆ. ಕಳೆದ ದಿನ ಸೇನೆ ಸಿದ್ಧಪಡಿಸಿದ್ದ ಕಾಲುಸಂಕವೂ ಮುಳುಗಡೆಯಾಗಿತ್ತು. ಮಳೆಯಲ್ಲೂ ಯಾಂತ್ರೀಕೃತ ಹುಡುಕಾಟ ಮುಂದುವರಿದಿದೆ. ರಕ್ಷಣಾ ಕಾರ್ಯಾಚರಣೆಯ ಭಾಗವಾಗಿ ತಂದಿರುವ ಮಣ್ಣು ತೆಗೆಯುವ ಯಂತ್ರವನ್ನು ಬಳಸಿ ಮನೆಗಳ ಅವಶೇಷಗಳು ಮತ್ತು ಮಣ್ಣನ್ನು ಸ್ಥಳಾಂತರಿಸುವ ಮೂಲಕ ಶೋಧ ನಡೆಸಲಾಯಿತು.