ತಿರುವನಂತಪುರಂ: ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ಅವರ ರಾಜೀನಾಮೆಯಿಂದ ತೆರವಾಗಿದ್ದ ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ(Wayanad By Election) ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸುತ್ತಿರುವುದು ಗೊತ್ತೆ ಇದೆ. ನಾನು ವಿವಿಧ ಚುನಾವಣೆಗಳಿಗಾಗಿ ಪ್ರಚಾರ ಮಾಡುತ್ತಾ 35 ವರ್ಷಗಳು ಕಳೆದಿವೆ. ಇದೇ ಮೊದಲ ಬಾರಿಗೆ ನಾನು ನನಗಾಗಿ ಮತ ಕೇಳುತ್ತಿದ್ದೇನೆ ಎಂದು ಸಾರ್ವಜನಿಕ ಸಭೆಯಲ್ಲಿ ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.
ಲೋಕಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವ ಮುನ್ನ ಕೇರಳದ ವಯನಾಡಿನಲ್ಲಿ ರೋಡ್ ಶೋ ನಡೆಸಿದ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ನಾನು ನನ್ನ ತಂದೆ (ಮಾಜಿ ಪ್ರಧಾನಿ ರಾಜೀವ್ ಗಾಂಧಿ) ಪರ ಪ್ರಚಾರ ಮಾಡುವಾಗ ನನಗೆ 17 ವರ್ಷ. ನಂತರ ನಾನು ನನ್ನ ತಾಯಿ ಮತ್ತು ಸಹೋದರ ಮತ್ತು ನನ್ನ ಅನೇಕ ಸಹೋದ್ಯೋಗಿಗಳಿಗಾಗಿ ಪ್ರಚಾರ ಮಾಡಿದ್ದೇನೆ. 35 ವರ್ಷಗಳಿಂದ ನಾನು ವಿವಿಧ ಚುನಾವಣೆಗಳಲ್ಲಿ ಪ್ರಚಾರ ಮಾಡುತ್ತಿದ್ದೇನೆ, ಆದರೆ ನಾನು ಇದೇ ಮೊದಲ ಬಾರಿಗೆ ನನಗಾಗಿ ಚುನಾವಣೆಯಲ್ಲಿ ಪ್ರಚಾರ ಮಾಡುತ್ತಿರುವುದು. ಅಲ್ಲದೆ ನನಗೆ ನಿಮ್ಮ ಬೆಂಬಲವನ್ನು ಕೋರುವುದು ತುಂಬಾ ವಿಭಿನ್ನವಾದ ಭಾವನೆಯಾಗಿದೆ ಎಂದು ಹೇಳಿದರು.
ನೀವು ನನಗೆ ಅವಕಾಶ ನೀಡಿದರೆ ನಿಮ್ಮನ್ನು ಪ್ರತಿನಿಧಿಸುವುದು ನನ್ನ ಗೌರವ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ವಯನಾಡು ಏನು ಮಾಡಿದೆ ಎಂಬುದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ವಯನಾಡು ಲೋಕಸಭೆಯಲ್ಲಿ ಅಧಿಕೃತ ಸಂಸದ ಮತ್ತು ಅನಧಿಕೃತ ಸಂಸದರನ್ನು ಹೊಂದಿರುತ್ತಾರೆ. ಇಬ್ಬರೂ ನಿಮ್ಮ ಸಮಸ್ಯೆಗಳನ್ನು ಪ್ರಸ್ತಾಪಿಸುತ್ತಾರೆ ಎಂದು ಅವರು ಹೇಳಿದರು.
400ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡ ವಿನಾಶಕಾರಿ ಭೂಕುಸಿತದ ನಂತರ ನಾನು ಮತ್ತು ರಾಹುಲ್ ಗಾಂಧಿ ವಯನಾಡಿನ ಮುಂಡಕ್ಕೈ ಮತ್ತು ಚುರಲ್ಮಲಾಗೆ ಭೇಟಿ ನೀಡಿದ್ದೇವು. ನಾನು ನನ್ನ ಸ್ವಂತ ಕಣ್ಣುಗಳಿಂದ ವಿನಾಶವನ್ನು ನೋಡಿದ್ದೇನೆ. ಕುಟುಂಬವನ್ನು ಕಳೆದುಕೊಂಡ ಮಕ್ಕಳನ್ನು, ಮಕ್ಕಳನ್ನು ಕಳೆದುಕೊಂಡ ತಾಯಂದಿರನ್ನು ಭೇಟಿ ಮಾಡಿದ್ದೇನೆ. ಇಡೀ ಜೀವನವೇ ಕೊಚ್ಚಿಹೋದ ಬಳಿಕ ನಿರಾಶ್ರಿರಾತರಾಗಿದ್ದ ಜನರನ್ನು ಭೇಟಿಯಾದೆ, ಒಬ್ಬರಿಗೊಬ್ಬರು ಸಹಾಯ ಮಾಡುವುದರಲ್ಲಿ ನಿರತರಾಗಿದ್ದರು. ಅವರು ದುರಾಸೆಯಿಲ್ಲದೆ ಮತ್ತು ಸಹಾನುಭೂತಿಯಿಂದ ಒಬ್ಬರಿಗೊಬ್ಬರು ಬೆಂಬಲಿಸಿದರು. ದುರಂತವನ್ನು ಎದುರಿಸಿದ ವಯನಾಡು ಜನರ ಧೈರ್ಯವನ್ನು ಮೆಚ್ಚುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
ಪ್ರಿಯಾಂಕಾ ಭಾಷಣದ ವೇಳೆ ವೇದಿಕೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ , ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಇತರ ಹಿರಿಯ ನಾಯಕರು ಉಪಸ್ಥಿತರಿದ್ದರು. ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧನ್ಯವಾದ ಹೇಳಿದರು.
ವಾಸ್ತವವಾಗಿ ರಾಹುಲ್ ಗಾಂಧಿ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಎರಡು ಸ್ಥಾನಗಳಿಂದ ಸ್ಪರ್ಧಿಸಿದ್ದರು. ಒಂದು ಕೇರಳದ ವಯನಾಡು ಮತ್ತು ಇನ್ನೊಂದು ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರ. ಸ್ಪರ್ಧಿಸಿದ ಎರಡೂ ಕ್ಷೇತ್ರಗಳಿಂದ ಚುನಾವಣೆಯಲ್ಲಿ ಗೆದ್ದಿದ್ದರು ಆದರೆ ಅವರು ರಾಯ್ ಬರೇಲಿ ಕ್ಷೇತ್ರವನ್ನು ಪ್ರತಿನಿಧಿಸಲು ನಿರ್ಧರಿಸಿ, ವಯನಾಡಿನಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದರಿಂದಲೇ ವಯನಾಡಿನಲ್ಲಿ ಉಪಚುನಾವಣೆ ನಡೆಯುತ್ತಿದೆ.
47 ವಿಧಾನಸಭಾ ಕ್ಷೇತ್ರಗಳೊಂದಿಗೆ ಉಪಚುನಾವಣೆ ನಡೆಸಲಾಗುವ ಏಕೈಕ ಲೋಕಸಭಾ ಕ್ಷೇತ್ರ ವಯನಾಡು. ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 25 ಕೊನೆಯ ದಿನವಾಗಿದ್ದು, ಉಮೇದುವಾರಿಕೆ ಹಿಂಪಡೆಯಲು ಅಕ್ಟೋಬರ್ 30 ಕೊನೆಯ ದಿನಾಂಕವಾಗಿದೆ. ನವೆಂಬರ್ 13 ರಂದು ಮತದಾನ ನಡೆಯಲಿದ್ದು ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ. ಅದೇ ದಿನಾಂಕದಂದು ಫಲಿತಾಂಶ ಪ್ರಕಟವಾಗಲಿದೆ.