ನ್ಯೂಸ್

ಮತ್ತೆ ಘರ್ಜಿಸುತ್ತಿವೆ ಬಿಬಿಎಂಪಿ ಜೆಸಿಬಿಗಳು! ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭ…

Webdesk - Athul Damale

ಬೆಂಗಳೂರು: ರಾಜಧಾನಿಯಲ್ಲಿ ಕೆರೆ, ರಾಜಕಾಲುವೆ ಹಾಗೂ ಸರ್ಕಾರಿ ಜಮೀನು ಒತ್ತುವರಿ ವಿಚಾರ ವಿಧಾನಸಭೆಯಲ್ಲಿ ಕಾವೇರಿದ ಚರ್ಚೆ ಉಂಟಾಗಿತ್ತು. ಅದರಲ್ಲೂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಬೆಂಗಳೂರಿನಲ್ಲಿ ಕೆರೆಗಳು ಬತ್ತಿವೆ ಎಂಬ ಕಾರಣ ನೀಡಿ ನಕ್ಷೆಯಿಂದ ತೆಗೆಯುವ ಪ್ರಯತ್ನವೂ ನಡೆದಿತ್ತು ಎಂದು ಸಿಎಂ ಬಸವರಾಜ ಬೊಮ್ಮಾಯಿ ನೇರ ದಾಳಿ ನಡೆಸಿದ್ದರು.

ಇದು ಕಾಂಗ್ರೆಸ್ ನಾಯಕರನ್ನು ಪೇಚಿಗೆ ಸಿಲುಕಿಸಿತ್ತು. ಈ ಸಂದರ್ಭ ಸಿಎಂ ಬೊಮ್ಮಾಯಿ, ಒತ್ತುವರಿ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಘೋಷಿಸಿದ್ದರು. ಈಗ ಬೆಂಗಳೂರಿನ ಮಹಾದೇವಪುರದಲ್ಲಿ ಮತ್ತೇ ಬಿಬಿಎಂಪಿಯ ಜೆಸಿಬಿಗಳು ಗರ್ಜಿಸಲು ಪ್ರಾರಂಭಿಸಿದ್ದು ಅಕ್ರಮ ಕಟ್ಟಡಗಳನ್ನು ಕೆಡವುತ್ತಿವೆ.

ಈಗ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾಗಿದ್ದು ಇಂದು ಮುನ್ನೇನಕೊಳಲು, ಶಾಂತಿನಿಕೇತನ ಲೇಔಟ್ ಹಾಗೂ ಎಬಿಕೆ ಹಳ್ಳಿಯಲ್ಲಿ ತೆರವು ಕಾರ್ಯಾಚರಣೆ ನಡೆದಿದೆ.

ಬಿಬಿಎಂಪಿ ಒಟ್ಟು 6 ಒತ್ತುವರಿಗಳ ತೆರವು ಕಾರ್ಯಾಚರಣೆ ಮಾಡಿದೆ. ಇಂದು ನೆಲಸವಾದ ಮುನ್ನೇನಕೊಳಲು ಹಾಗೂ ಶಾಂತಿನಿಕೇತನ ಲೇಔಟ್ ನಲ್ಲಿ 30*40 ಅಡಿ ಸ್ಥಳದಲ್ಲಿ ರಾಜಕಾಲುವೆಯ ಮೇಲೆ ನಿರ್ಮಿಸಿದ್ದ 2 ಕಟ್ಟಡಗಳನ್ನು (G + 1 ಕಟ್ಟಡಗಳು) ಕೆಡವಲಾಗಿದೆ.

ಇದೇ ಸ್ಥಳದಲ್ಲಿ ರಾಜಕಾಲುವೆಯ ಮೇಲೆ ನಿರ್ಮಿಸಿದ್ದ 2 ಶೆಡ್ ಗಳನ್ನು ಕೂಡಾ ತೆರವು ಮಾಡಲಾಗಿದ್ದು ಜೊತೆಗೆ ಅಮಾನಿ ಬೆಳ್ಳಂದೂರು ಖಾನೆ(ಎಬಿಕೆ) ಹಳ್ಳಿ ವ್ಯಾಪ್ತಿಯಲ್ಲಿ ರಾಜಕಾಲುವೆ ಮಾರ್ಗದಲ್ಲಿ ನಿರ್ಮಿಸಿದ್ದ 1 ಶೆಡ್ ಹಾಗೂ ಸುಮಾರು 60 ಮೀಟರ್ ಉದ್ದದ ಕಾಂಪೌಂಡ್ ಗೋಡೆಯನ್ನು ಕೂಡ ತೆರವು ಮಾಡಲಾಗಿದೆ.

ಬೆಂಗಳೂರು ನಗರ ಜಿಲ್ಲೆಯ ತಹಶೀಲ್ದಾರರು ಒತ್ತುವರಿದಾರರಿಗೆ ನೋಟಿಸ್ ಜಾರಿ ಮಾಡಿ ಆದೇಶ ಹೊರಡಿಸಿದ ನಂತರ ಬಾಕಿ ಒತ್ತುವರಿಗಳ ತೆರವು ಕಾರ್ಯಾಚರಣೆಯನ್ನು ನಡೆಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದರು. ಈ ವಲಯದಲ್ಲಿ 2015-16ರಿಂದ ಈವರೆಗೆ ಒಟ್ಟು 1,174 ರಾಜಕಾಲುವೆ ಒತ್ತುವರಿ ಗುರುತಿಸಲಾಗಿದೆ. ಇದರಲ್ಲಿ 1,032 ಒತ್ತುವರಿ ತೆರವುಗೊಳಿಸಲಾಗಿದ್ದು, ಉಳಿದಿರುವ 142 ಒತ್ತುವರಿಗಳ ಪೈಕಿ 11 ಪ್ರಕರಣ ನ್ಯಾಯಾಲಯದಲ್ಲಿವೆ. ಉಳಿದ ತೆರವು ಕಾರ್ಯಾಚರಣೆಗೆ ಸಂಬಂಧ ಸರ್ವೇ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.