ಶ್ರೀರಂಗಪಟ್ಟಣ ತಾಲೂಕಿನ ಮಂಡ್ಯದಕೊಪ್ಪಲು ಗ್ರಾಮ ಹೊರವಲಯದ ಪಿಕಪ್ ನಾಲೆ ಮತ್ತು ಶಾರದ ಹಳ್ಳ ನಾಲೆ ಕಾಮಗಾರಿಗಳಿಗೆ ಸೋಮವಾರ ಕ್ಷೇತ್ರದ ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಭೂಮಿಪೂಜೆ ನೆರವೇರಿಸಿದರು. ಎಂ.ಕೆ.ಮಂಜುನಾಥ್, ನೇರಳೆಕೆರೆ ಪಟೇಲ್ ಸುರೇಶ್, ಎಂ.ಪಿ.ಮುರಳೀಧರ್, ಹಂಗರಹಳ್ಳಿ ಗೋವಿಂದೇಗೌಡ, ಆನಂದ್ ಇದ್ದರು. 
ನ್ಯೂಸ್

ಕಟ್ಟ ಕಡೆ ಜಮೀನಿಗೂ ನೀರು ಹರಿಸಲಾಗುವುದು

ಶ್ರೀರಂಗಪಟ್ಟಣ: ಕಳೆದ 3 ದಶಕಗಳಿಂದಲೂ ಕೇಳಿಬಂದಿದ್ದ ಮಂಡ್ಯದಕೊಪ್ಪಲು ಭಾಗದ ರೈತಾಪಿ ಜನರ ಪಿಕಪ್ ನಾಲಾ ದುರಸ್ತಿಯ ಮನವಿಗೆ ಕೊನೆಗೂ ಚಾಲನೆ ನೀಡಲಾಗಿದ್ದು, ಗುಣಮಟ್ಟದ ಕಾಮಗಾರಿ ಮೂಲಕ ಅಭಿವೃದ್ಧಿಗೊಳಿಸಿ ರೈತರ ಜಮೀನುಗಳಿಗೆ ನೀರು ತಲುಪಿಸಲಾಗುವುದು ಎಂದು ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

ತಾಲೂಕಿನ ಮಂಡ್ಯಕೊಪ್ಪಲು ಗ್ರಾಮ ಹೊರವಲಯದ ಶಾರದ ಹಳ್ಳ ಬಲ ಮತ್ತು ಎಡ ಭಾಗದ ಪಿಕಪ್ ಉಪನಾಲೆಗಳ ಅಭಿವೃದ್ಧಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ನನ್ನ ತಾಯಿ ವಿಜಯಲಕ್ಷ್ಮಮ್ಮ ಅವರು ಶಾಸಕರಾಗಿದ್ದ ಕಾಲದಿಂದಲೂ ಊರಿನ ಮುಖ್ಯಸ್ಥರಾದ ದಿವಂಗತ ಪಟೇಲ್ ಅನಂತರಾಮಣ್ಣ ಸೇರಿದಂತೆ ಈ ಭಾಗದ ರೈತಾಪಿ ಜನರ ಒಕ್ಕೊರಲ ಕೂಗು ಈ ನಾಲೆಯ ದುರಸ್ತಿಗೆ ಒತ್ತಾಯವಿದ್ದು, ಈ ಹಳೆಯ ಕೆಲಸದ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ಮಂಡ್ಯದಕೊಪ್ಪಲು ವ್ಯಾಪ್ತಿಯ ಸುತ್ತಳತೆಯಲ್ಲಿ 2 ಕಿ.ಮೀ. ದೂರದ ಕೊನೆಯ ಭಾಗದಲ್ಲಿನ ಕೃಷಿ ಭೂಮಿಗಳಿಗೆ ನೀರು ತಲುಪಿಸುವಲ್ಲಿ ಶಾರದಹಳ್ಳ ನಾಲೆ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಒಟ್ಟು 10 ಕೋಟಿ ರೂ. ವೆಚ್ಚದಲ್ಲಿ ಮಂಡ್ಯದ ಕೊಪ್ಪಲು ಪಿಕಪ್ ನಾಲೆಯಲ್ಲಿ 1100 ಮೀಟರ್ ಹಾಗೂ ಶಾರದ ಹಳ್ಳದ ನಾಲೆಯಲ್ಲಿ 1600 ಮೀಟರ್ ಉದ್ದ ಅತ್ಯಾಧುನಿಕವಾಗಿ ಗುಣಮಟ್ಟದ ಕಾಮಗಾರಿ ನಡೆಸಿ ಕೆಆರ್‌ಎಸ್ ಜಲಾಶಯದಿಂದ ಹೊರಬಂದ ನೀರು ಸರಾಗವಾಗಿ ಅಚ್ಚುಕಟ್ಟು ಪ್ರದೇಶದ ಕಡೆ ಭಾಗದ ರೈತನ ಕೃಷಿ ಜಮೀನಿಗೆ ಹರಿಯುವಂತೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಶೀಘ್ರ ಕ್ರಮವಹಿಸುವಂತೆ ತಾಕೀತು ಮಾಡಲಾಗಿದೆ. ಜತೆಗೆ ಕಸಬಾ ಹೋಬಳಿ ವ್ಯಾಪ್ತಿಯ ಕೃಷ್ಣಾಪುರ ಕಡೆಗದ್ದೆ ಪಿಕಪ್ ನಾಲೆಯ ಕಾಮಗಾರಿ ನಡೆಸಲಾಗಿದ್ದು, ಮುಂಬರುವ ವರ್ಷಗಳಲ್ಲಿ ನಾಲೆಯ ನೀರಿನ ಹರಿವಿನಲ್ಲಿ ಕೊರತೆ ಎದುರಾಗುವುದಿಲ್ಲ ಎಂದರು.

ಅರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕೆ.ಮಂಜುನಾಥ್, ತಾಪಂ ಮಾಜಿ ಸದಸ್ಯ ನೇರಳೆಕೆರೆ ಪಟೇಲ್ ಸುರೇಶ್, ಅರಕೆರೆ ದೊಡ್ಡಪ್ರಮಾಣ ಸಹಕಾರ ಸಂಘದ ಅಧ್ಯಕ್ಷ ಎಂ.ಪಿ.ಮುರಳಿಧರ್, ಮುಖಂಡರಾದ ಹಂಗರಹಳ್ಳಿ ಗೋವಿಂದೇಗೌಡ, ಆನಂದ್, ಎಲಿಯೂರು ಹನುಮಂತೇಗೌಡ, ಕೆಆರ್‌ಎಸ್ ಜಲಾಶಯದ ಕಾರ್ಯಪಾಲಕ ಇಂಜಿನಿಯರ್ ಜಯಂತ್, ಕಾವೇರಿ ನೀರಾವರಿ ನಿಗಮ ಪಾಂಡವಪುರ ವಿಭಾಗದ ಎಇಇ ಮಹೇಶ್ ಸೇರಿದಂತೆ ಉಪಸ್ಥಿತರಿದ್ದರು.