ಮಲವಗೊಪ್ಪದ ಭದ್ರಾ ಕಾಡಾ ಕಚೇರಿಯಲ್ಲಿ ಸಚಿವ ಮಧು ಬಂಗಾರಪ್ಪ ಅವರು ನೀರಾವರಿ ಸಲಹಾ ಸಮಿತಿ ಸಭೆ ನಡೆಸಿದರು. ಡಾ. ಅಂಶುಮಂತ್, ಎಸ್.ಎನ್.ಚನ್ನಬಸಪ್ಪ, ಬಿ.ಪಿ.ಹರೀಶ್, ಡಿ.ಜಿ.ಶಾಂತನಗೌಡ, ಬಸವರಾಜು ಇತರರಿದ್ದರು. 
ನ್ಯೂಸ್

ಭದ್ರಾ ಬಲದಂಡೆಗೆ ಜು.22ರಿಂದ 120 ದಿನ ನೀರು

ಶಿವಮೊಗ್ಗ: ಮುಂಗಾರು ಬೆಳೆಗಾಗಿ ಬಲದಂಡೆ ನಾಲೆಗೆ ಜು.22ರಿಂದಲೇ ನೀರು ಹರಿಸಲಾಗುವುದು. ಎಡದಂಡೆ ನಾಲೆಗೂ ಶೀಘ್ರ ದಿನಾಂಕ ನಿಗದಿಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಭದ್ರಾ ಕಾಡಾ ಕಚೇರಿಯಲ್ಲಿ ಸೋಮವಾರ ಮುಂಗಾರು ಬೆಳೆಗೆ ನೀರು ಹರಿಸುವ ಕುರಿತು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿದ ಅವರು, ಬಲದಂಡೆ ನಾಲೆಗೆ 120 ದಿನ ನೀರು ಹರಿಸಲು ನಿರ್ಧರಿಸಲಾಗಿದೆ ಎಂದರು.

ಎಡದಂಡೆ ನಾಲೆಯ ದುರಸ್ತಿ ಕಾರ್ಯ ನಡೆಯುತ್ತಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಅಲ್ಲಿಗೂ ನೀರು ಹರಿಸಲಾಗುವುದು. ಚಿಕ್ಕಮಗಳೂರು ಜಿಲ್ಲೆಗೆ ನೀರು ಹಂಚಿಕೆ ಕುರಿತು ನೀರಾವರಿ ಸಚಿವರೊಂದಿಗೆ ಸಭೆ ನಿಗದಿಪಡಿಸಿ ಮಾತನಾಡಬೇಕು. ಭದ್ರಾ ಕಾಡಾ ವ್ಯಾಪ್ತಿಯಲ್ಲಿರುವ 537 ನೀರು ಬಳಕೆದಾರರ ಸಂಘಗಳಿಗೆ ನೀರು ಬಳಕೆ, ರೈತ ಚಟುವಟಿಕೆ ಕುರಿತು ಕಾರ್ಯಾಗಾರ ಮಾಡಿದರೆ ಒಳಿತು ಎಂದು ಸಲಹೆ ನೀಡಿದರು.

ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್, ಬಲದಂಡ ನಾಲೆಯ ಅನೇಕ ಭಾಗದಲ್ಲಿ ಹಲವಾರು ಕಡೆ ಅನಧಿಕೃತ ಪಂಪ್‌ಸೆಟ್‌ಗಳಿವೆ. ಲೀಕೇಜ್‌ಗಳಿವೆ. ಅನಧಿಕೃತ ರೈತರ ಪಂಪ್‌ಸೆಟ್‌ಗೆಡಿವಾಣ ಹಾಕಬೇಕು ಎಂದರು.

ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ, ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ, ಚನ್ನಗಿರಿ ಶಾಸಕ ಬಸವರಾಜು, ಹರಿಹರ ಶಾಸಕ ಬಿ.ಪಿ.ಹರೀಶ್, ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ, ಸಲಹಾ ಸಮಿತಿ ಸದಸ್ಯ ತೇಜಸ್ವಿ ಪಟೇಲ್ ಮಾತನಾಡಿದರು. ಎಂಎಲ್‌ಸಿ ಬಲ್ಕಿಷ್‌ಬಾನು, ಸಲಹಾ ಸಮಿತಿ ಸದಸ್ಯರು, ರೈತ ಮುಖಂಡರು, ಆಡಳಿತಾಧಿಕಾರಿ ಇದ್ದರು.

ರೈತರ ಹಿತವೇ ಮುಖ್ಯ

ಕಟ್ಟಕಡೆಯ ರೈತರಿಗೂ ತೊಂದರೆ ಆಗದಂತೆ ನೀರು ಬಿಡುತ್ತೇವೆ. ರೈತರ ಹಿತ ಕಾಯಲು ಸದಾ ಸಿದ್ಧ ಎಂದು ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಭರವಸೆ ನೀಡಿದರು. ತಾಂತ್ರಿಕ, ಕೃಷಿ ವಿಭಾಗಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿವೆ. ಸವಳು-ಜವಳು ಯೋಜನೆ ಜಾರಿ ಮಾಡಲು ರೈತರ ಸಹಕಾರ ಬೇಕು. ಭೂಮಿ ಫಲವತ್ತತೆ, ಸುರಕ್ಷೆ ಬಗ್ಗೆಯೂ ಪ್ರಾಧಿಕಾರ ಕೆಲಸ ಮಾಡುತ್ತಿದೆ. ಕಾಡಾ ವ್ಯಾಪ್ತಿಯಲ್ಲಿ 35 ನೀರಾವರಿ ಯೋಜನೆಗಳು ಬರುತ್ತವೆ. 537 ನೀರು ಬಳಕೆದಾರರ ಸಂಘಗಳಿವೆ. 110 ಸಂಘಗಳಿಗೆ ಸರ್ಕಾರ 1 ಲಕ್ಷ ರೂ. ಅನುದಾನ ನೀಡಿದೆ. ನರೇಗಾ ಸಹಭಾಗಿತ್ವದಲ್ಲಿ ಕೆಲಸಕ್ಕೆ ಮುಂದಾಗಿದ್ದೇವೆ ಎಂದರು.