ಕೆ.ಆರ್.ಸಾಗರದ ಬೃಂದಾವನದಲ್ಲಿನ ದೋಣಿ ವಿಹಾರ ಕೇಂದ್ರ ಬರಿದಾಗಿರುವುದು. 
ನ್ಯೂಸ್

ಕಾಮಗಾರಿ ನೆಪದಲ್ಲಿ ದೋಣಿ ವಿಹಾರಕ್ಕೆ ನೀರು ಬಂದ್

ಕೆ.ಆರ್.ಸಾಗರ: ವಿಶ್ವವಿಖ್ಯಾತ ಕೃಷ್ಣರಾಜಸಾಗರ ಅಣೆಕಟ್ಟೆಯ ದೋಣಿ ವಿಹಾರ ಕೇಂದ್ರದಲ್ಲಿ ಕಳೆದ 15 ದಿನಗಳಿಂದ ನೀರು ಬರಿದಾಗಿದ್ದು, ಪ್ರವಾಸಿಗರಿಗೆ ನಿರಾಸೆ ಉಂಟಾಗಿದೆ. ಅಲ್ಲದೆ ದೋಣಿ ವಿಹಾರ ಸ್ಥಗಿಗೊಂಡಿರುವುದರಿಂದ ಲಕ್ಷಾಂತರ ರೂ. ನಷ್ಟವಾಗಿದೆ.

100 ಕೋಟಿ ರೂ. ವೆಚ್ಚದಲ್ಲಿ ಕೆ.ಆರ್.ಸಾಗರ ಬೃಂದಾವನದಲ್ಲಿ ಕಾವೇರಿ ಆರತಿ ಯೋಜನೆ ಕಾಮಗಾರಿ ಪ್ರಾರಂಭಿಸಲು ಸಿದ್ಧತೆ ಪ್ರಾರಂಭಿಸಿದ ಹಿನ್ನೆಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ಅಣೆಕಟ್ಟೆಯಿಂದ ನೀರು ನಿಲ್ಲಿಸಿದ ಕಾರಣ ದೋಣಿ ವಿಹಾರ ಸ್ಥಗಿತಗೊಂಡಿದೆ.

ಈ ಹಿಂದೆ ಹಲವು ತಿಂಗಳು ದುರಸ್ತಿ ನೆಪದಲ್ಲಿ ನೀರು ನಿಲ್ಲಿಸಲಾಗಿತ್ತು. ಬೃಂದಾವನದಲ್ಲಿ ಪ್ರವಾಸಿಗರ ಒಂದು ಆಕರ್ಷಣೆಯ ಕೇಂದ್ರವಾದ ದೋಣಿ ವಿಹಾರಕ್ಕೆ ನೀರು ನಿಲ್ಲಿಸಿದ ಕಾರಣ ಪ್ರವಾಸಿಗರು ನಿರಾಸೆಯಿಂದ ವಾಪಸ್ಸಾಗುತ್ತಿದ್ದಾರೆ. ಇದರಿಂದ ಸರ್ಕಾರಕ್ಕೂ ದಿನನಿತ್ಯ ಲಕ್ಷಾಂತರ ರೂ. ನಷ್ಟ ಉಂಟಾಗುತ್ತಿದೆ.

ದಕ್ಷಿಣ ಬೃಂದಾವನದಿಂದ ಉತ್ತರ ಬೃಂದಾವನಕ್ಕೆ ಪ್ರವಾಸಿಗರನ್ನು ದೋಣಿಯಲ್ಲಿ ಕರೆದೊಯ್ಯಲಾಗುತ್ತಿತ್ತು. ಈಗ ಆರಕ್ಕೂ ಹೆಚ್ಚು ದೋಣಿಗಳು ನೀರು ಇಲ್ಲದ ಕಾರಣ ದಡದಲ್ಲೇ ನಿಂತಿವೆ. ಒಂದು ಯೋಜನೆ ಸಲುವಾಗಿ ಪ್ರಾವಾಸಿಗರ ಆಕರ್ಷಣೆ ಕೇಂದ್ರವಾದ ದೋಣಿ ವಿಹಾರ ಸ್ಥಗಿತಗೊಳಿಸಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೋಣಿ ವಿಹಾರ ಕೇಂದ್ರದಲ್ಲಿ ದಿನನಿತ್ಯ ಕೆಲಸ ಮಾಡುವ ದಿನಗೂಲಿ ಸಿಬ್ಬಂದಿಗೆ ಕೆಲಸವಿಲ್ಲದ ಕಾರಣ ಅವರ ಜೀವನಕ್ಕೂ ತೊಂದರೆಯಾಗಿದೆ.