ಶಿವಮೊಗ್ಗ ಜಿಲ್ಲೆ ಲಿಂಗನಮಕ್ಕಿ ಜಲಾಶಯದಿಂದ ಮಂಗಳವಾರ ನದಿಗೆ ನೀರು ಹರಿಸಲಾಯಿತು.  
ನ್ಯೂಸ್

ಲಿಂಗನಮಕ್ಕಿ ಡ್ಯಾಂನಿಂದ ನೀರು ಬಿಡುಗಡೆ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಜಿಲ್ಲೆಯಲ್ಲಿ ಮಂಗಳವಾರ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದೆ. ಆದರೆ ಉಕ್ಕಿ ಹರಿಯುತ್ತಿರುವ ನದಿಗಳು ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. ಪ್ರಮುಖ ಜಲಾಶಯಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಲಿಂಗನಮಕ್ಕಿ ಡ್ಯಾಂಗೆ 48 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಜಲಾಶಯದ ನೀರಿನ ಸಂಗ್ರಹ 1,816 ಅಡಿ ತಲುಪಿದೆ. ಡ್ಯಾಂನಿಂದ ನೀರು ಹೊರ ಬಿಡಲಾಗುತ್ತಿದೆ. ಇದರಿಂದ ಜೋಗ ಜಲಪಾತ ನೋಡುಗರ ಕಣ್ಮನ ಸೆಳೆಯುತ್ತಿದೆ.

ಮಂಗಳವಾರ ಬೆಳಗ್ಗೆವರೆಗೆ 24 ತಾಸಿನಲ್ಲಿ ಜಲಾಶಯದ ಒಳಹರಿವಿನಲ್ಲಿ ಅಂತಹ ವ್ಯತ್ಯಾಸ ಕಂಡುಬಂದಿಲ್ಲ. ಲಿಂಗನಮಕ್ಕಿ ಡ್ಯಾಂಗೆ 48 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿದ್ದು ಜಲಾಶಯದ ನೀರಿನ ಸಂಗ್ರಹ 1,816 ಅಡಿ ತಲುಪಿದೆ. ಜಲಾಶಯ ಸಂಪೂರ್ಣ ಭರ್ತಿಯಾಗಲು ಇನ್ನು ಎರಡು ಅಡಿ ಮಾತ್ರ ಬಾಕಿಯಿದೆ.

ಭದ್ರಾ ಜಲಾಶಯಕ್ಕೆ 34 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಮುನ್ನೆಚ್ಚರಿಕೆಯಾಗಿ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ಜಲಾಶಯದಿಂದ ಭದ್ರಾ ನದಿಗೆ 38 ಸಾವಿರ ಕ್ಯೂಸೆಕ್ ನೀರು ಹರಿದು ಹೋಗುತ್ತಿದೆ. ಹೀಗಾಗಿ ಡ್ಯಾಂನ ಕೆಳಭಾಗದಲ್ಲಿ ಪ್ರವಾಹದ ಸನ್ನಿವೇಶ ಸೃಷ್ಟಿಯಾಗಿದೆ.

ಶೃಂಗೇರಿ, ಕೊಪ್ಪ, ತೀರ್ಥಹಳ್ಳಿ ಭಾಗದಲ್ಲಿ ಹಳ್ಳಗಳು ಉಕ್ಕಿ ಹರಿಯುತ್ತಿರುವ ಪರಿಣಾಮ ಗಾಜನೂರಿನ ತುಂಗಾ ಜಲಾಶಯಕ್ಕೆ 75 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡುತ್ತಿರುವುದರಿಂದ ತುಂಗಾನದಿ ಮೈದುಂಬಿ ಹರಿಯುತ್ತಿದೆ. ಇನ್ನೊಂದೆಡೆ ಕೊಳೆ ರೋಗದ ಭೀತಿಯಲ್ಲಿರುವ ಅಡಕೆ ಬೆಳೆಗಾರರು ಮಳೆ ಸಂಪೂರ್ಣ ಬಿಡುವು ನೀಡಿದರೆ ಬೋರ್ಡೋ ದ್ರಾವಣ ಸಿಂಪಡಣೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಿನ ಸನ್ನಿವೇಶದಲ್ಲಿ ಮಳೆ ನಿಂತರೂ ಉಕ್ಕಿ ಹರಿಯುತ್ತಿರುವ ಹಳ್ಳಕೊಳ್ಳ, ನದಿಗಳು ಸಹಜ ಸ್ಥಿತಿಗೆ ಬರಲು ಎರಡ್ಮೂರು ದಿನವಾದರೂ ಬೇಕು