ಸರಗೂರು: ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ತಾಲೂಕಿನ ಮುಳ್ಳೂರು ಗ್ರಾಪಂ ವ್ಯಾಪ್ತಿಯ ಹೊಸಹೆಗ್ಗುಡಿಲು ಗ್ರಾಮಕ್ಕೆ ಶನಿವಾರ ತಹಸೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಮತ್ತು ಕುಡಿಯುವ ನೀರು ನೈರ್ಮಲ್ಯ ಇಲಾಖೆ ಎಇಇ ಗೋವಿಂದನಾಯಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತಾತ್ಕಾಲಿಕವಾಗಿ ಜನರಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ವ್ಯವಸ್ಥೆ ಮಾಡಿದರು.
ಈ ವೇಳೆ ಮಾತನಾಡಿದ ಗ್ರಾಮದ ಮುಖಂಡ ವಾಲ್ಮೀಕಿ ಸಿದ್ದರಾಜು, ನಮ್ಮ ಗ್ರಾಮದಲ್ಲಿ 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಒಂದು ವಾರದಿಂದ ನೀರಿನ ಸಮಸ್ಯೆ ಎದುರಾಗಿದೆ. ಗ್ರಾಮಕ್ಕೆ ಪೂರೈಕೆ ಆಗುತ್ತಿದ್ದ ನೀರೆತ್ತುವ ಪಂಪ್ ಮೋಟಾರ್ ಮಳೆ ನೀರು ನುಗ್ಗಿ ಕೆಟ್ಟಿದೆ. ಇದರಿಂದ ಗ್ರಾಮದ ಆಸುಪಾಸಿನ ಜಮೀನುಗಳಲ್ಲಿನ ಕೃಷಿ ಬಳಕೆ ಪಂಪ್ ಸೆಟ್‌ಗಳ ಬಳಿ ನೀರು ಹಿಡಿದು ತರಬೇಕಿದೆ. ಇಷ್ಟಾದರೂ ಸಮಯಕ್ಕೆ ಸರಿಯಾಗಿ ವಿದ್ಯುತ್ ಪೂರೈಕೆ ಇರುವುದಿಲ್ಲ. ಗ್ರಾಮದ ಸುತ್ತಮುತ್ತ ಕಾಡು ಪ್ರಾಣಿಗಳಿಂದ ಆತಂಕ ಇದೆ ಎಂದು ಅಲವತ್ತುಕೊಂಡರು.
ಕೃಷಿ ಜಮೀನಿನ ಪಂಪ್‌ಸೆಟ್‌ಗಳ ಬಳಿ ನೀರು ತರಲು ಹೋಗುವ ಹೆಂಗಸರು ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ಆತಂಕದಲ್ಲಿ ಹೋಗಿ ಬರಬೇಕಿದೆ. ಸಂಬಂಧಿಸಿದ ಅಧಿಕಾರಿಗಳು ಶೀಘ್ರ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಮ್ಮ ಗ್ರಾಮದಲ್ಲಿ ಒಂದು ನೀರಿನ ಟ್ಯಾಂಕ್ ಇದೆ. ಅದರಿಂದ ನಲ್ಲಿ ಮೂಲಕ ಮಣ್ಣು ಮಿತ್ರಿತ ನೀರು ಬರುತ್ತಿದೆ. ಇದು ಕುಡಿಯಲು ಯೋಗ್ಯವಾಗಿಲ್ಲ. ನಮ್ಮ ಗ್ರಾಮದಲ್ಲಿ ಎರಡು ಬೋರ್ ವೆಲ್ ಇದ್ದು ಅದು ಸುಮಾರು ವರ್ಷಗಳಿಂದ ಹಿಂದೆ ಹದಗೆಟ್ಟಿವೆ. ಈ ಬಗ್ಗೆ ಗ್ರಾಪಂ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ತಹಸೀಲ್ದಾರ್ ಮುಂದೆ ಗ್ರಾಮಸ್ಥರು ನೋವು ತೋಡಿಕೊಂಡರು.
ಕುಡಿಯುವ ನೀರು ನೈರ್ಮಲ್ಯ ಇಲಾಖೆ ಎಇಇ ಗೊವಿಂದನಾಯಕ, ಗ್ರಾಪಂ ಪಿಡಿಒ ಮಾಯಾದೇವಿ, ಗ್ರಾಪಂ ಸದಸ್ಯ ಭಾಗ್ಯ ಸಿದ್ದರಾಜು, ಸಮಾಜ ಸೇವಕ ಗ್ರಾಮೀಣ ಮಹೇಶ್, ಗ್ರಾಮಸ್ಥರಾದ ನಿಂಗನಾಯಕ, ಸಿದ್ದನಾಯಕ, ಮಾದನಾಯಕ,ದಾಸನಾಯಕ, ಶಿವಣ್ಣ, ದೊಡ್ಡನಾಯಕ, ಈರಣ್ಣ, ಸೋಮಣ್ಣ, ಪುಟ್ಟಸ್ವಾಮಿಚಾರಿ, ಬಸವರಾಜು, ಮೂರ್ತಿ,ಕರಿನಾಯಕ, ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಮುಜೀಬ್, ಗ್ರಾಪಂ ಸಿಬ್ಬಂದಿ ಮಲ್ಲರಾಜು, ನಾಗರಾಜು, ಭೈರನಾಯಕ, ಚಂದ್ರ ಮತ್ತಿತರರಿದ್ದರು.