ನ್ಯೂಸ್

VIDEO: ವಿಜಯಪುರ ಜಿಲ್ಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಅವ್ಯವಸ್ಥೆ- ನೀರಿನ ಪೂರೈಕೆಯೇ ಇಲ್ಲ..

ವಿಜಯಪುರ: ಕರೊನಾ ಸೋಂಕು ಇರುವ ಶಂಕಿತರನ್ನು ಕ್ವಾರಂಟೈನ್ ಇರಿಸುವ ಕೇಂದ್ರಗಳು ಸುಸಜ್ಜಿತವಾಗಿರಬೇಕಾದ್ದು ಅಗತ್ಯ. ಆದರೆ, ವಿಜಯಪುರ ಜಿಲ್ಲೆಯ ಕ್ವಾರಂಟೈನ್ ಕೇಂದ್ರವೊಂದರಲ್ಲಿ ಮೂಲಸೌಕರ್ಯವೇ ಸರಿಯಾಗಿ ಇಲ್ಲ. ನೀರಿನ ಪೂರೈಕೆಯ ಕಡೆಗೆ ಜಿಲ್ಲಾಡಳಿತವೂ ಗಮನಕೊಟ್ಟಿಲ್ಲ ಎಂಬ ದೂರು ಕೇಳಿಬಂದಿದೆ.

ಬಸವನಬಾಗೇವಾಡಿ ತಾಲೂಕಿನ ಟಕ್ಕಳಕಿ ಗ್ರಾಮದ ಹೊರ ಭಾಗದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿರುವ ಕ್ವಾರಂಟೈನ್ ಕೇಂದ್ರ ಇದಾಗಿದೆ. ಇಲ್ಲಿ ನೀರಿನ ಸೌಲಭ್ಯ ಇಲ್ಲದ ಕಾರಣ ಕ್ವಾರಂಟೈನ್​ಗಾಗಿ ಬಂದವರಿಗೆ ಇದು ಶಿಕ್ಷೆ ಎಂಬಂತಾಗಿದೆ. ಸ್ವಚ್ಛತೆ, ನೈಮರ್ಲ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಇಲ್ಲದಿದ್ದರೆ ಕೋವಿಡ್ 19 ವೈರಸ್ ಕಾಡುತ್ತದೆ ಎಂದು ಡಂಗೂರ ಸಾರಿರುವ ಸರ್ಕಾರವೇ ಇದೀಗ ಅದರ ಕಡೆಗೆ ಗಮನಹರಿಸದಿರುವುದು ದುರದೃಷ್ಟ ಎಂದು ಕ್ವಾರಂಟೈನ್​ನಲ್ಲಿ ಇರುವವರು ವಿಷಾದ ವ್ಯಕ್ತಪಡಿಸಿದ್ದಾರೆ.

ಈ ಕ್ವಾರಂಟೈನ್​ ಕೇಂದ್ರದಲ್ಲಿ ನೀರಿನ ಸಮಸ್ಯೆ ತೀವ್ರವಾಗಿರುವ ಕಾರಣ ಇಲ್ಲಿದ್ದವರು ಬಯಲು ಶೌಚದ ಮೊರೆ ಹೋಗಿದ್ದಅರೆ. ಅಲ್ಲದೆ, ನಿತ್ಯ ಸ್ನಾನ ಇತ್ಯಾದಿಯೂ ಮಾಡುತ್ತಿಲ್ಲ. ಇಲ್ಲಿ ಇರುವವರಲ್ಲಿ ಅನೇಕರು ಕಾರ್ಮಿಕರು. ಅವರು ಕ್ವಾರಂಟೈನ್​ನಲ್ಲಿ ಇರದೇ ಊರೆಲ್ಲ ತಿರುಗಾಡುತ್ತಿದ್ದಾರೆ ಎಂಬ ಆರೋಪವೂ ಇದೆ. ಕ್ವಾರಂಟೈನ್ ಕೇಂದ್ರದಲ್ಲಿ ನಿಗಾ ವ್ಯವಸ್ಥೆಯೂ ಸರಿಯಾಗಿಲ್ಲದಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಸರ್ಕಾರ, ಅಧಿಕಾರಿಗಳು ಇನ್ನಾದರೂ ಈ ಕೇಂದ್ರ ಗಮನಹರಿಸುವುದೇ ಎಂಬ ನಿರೀಕ್ಷೆಯಲ್ಲಿದ್ದಾರೆ ಕ್ವಾರಂಟೈನ್ ಕೇಂದ್ರದಲ್ಲಿರುವ ಕಾರ್ಮಿಕರು.