ಫಲ್ಗುಣಿ ನದಿಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಇಳಿಮುಖವಾಗಿರುವುದು.
- ಗುರುಪುರ ಪರಿಸರದಲ್ಲಿ ಜಲಕ್ಷಾಮ
- ಅಂತರ್ಜಲ ಮಟ್ಟ ಪಾತಾಳಕ್ಕೆ
- ಮುಂದಿನ 15 ದಿನಗಳಲ್ಲಿ ಮಳೆಯಾಗದಿದ್ದರೆ ಕೈಗಾರಿಕೆ ಮತ್ತು ಮನೆಗಳಿಗೆ ಪೂರೈಕೆಯಾಗುವ ನೀರು ಸ್ಥಗಿತಗೊಳ್ಳುವ ಭೀತಿ
ಕರಾವಳಿಯಲ್ಲಿ ಕಳೆದ ಹತ್ತು ದಿನಗಳಿಂದ ಸುಡುತ್ತಿರುವ ರಣಬಿಸಿಲಿಗೆ ಜನಜೀವನ ಅಕ್ಷರಶಃ ಕಂಗಾಲಾಗಿದೆ. ಇದರ ನೇರ ಹೊಡೆತ ಫಲ್ಗುಣಿ ನದಿಯ ಮೇಲೆ ಬಿದ್ದಿದ್ದು, ನದಿ ನೀರಿನ ಮಟ್ಟ ಆತಂಕಕಾರಿ ರೀತಿಯಲ್ಲಿ ಕುಸಿಯುತ್ತಿದೆ. ಪರಿಣಾಮವಾಗಿ ಗುರುಪುರ ಸುತ್ತಮುತ್ತಲ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದ್ದು, ಅಂತರ್ಜಲ ಮಟ್ಟ ಪಾತಾಳಕ್ಕಿಳಿದಿದೆ.
ಮೂಡುಶೆಡ್ಡೆ ಮತ್ತು ಮರವೂರಿನಲ್ಲಿ ನಿರ್ಮಿಸಲಾಗಿರುವ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ತಾಪಮಾನ ಏರಿಕೆಯಿಂದಾಗಿ ನದಿಯ ನೀರು ಆವಿಯಾಗುತ್ತಿದ್ದರೆ, ಅತ್ತ ಮಳೆಯ ಕೊರತೆಯಿಂದ ಅಂತರ್ಜಲ ಮರುಪೂರಣವಾಗುತ್ತಿಲ್ಲ. ಪರಿಣಾಮ ಗುರುಪುರ ಆಸುಪಾಸಿನ ಬಾವಿ ಹಾಗೂ ಕೆರೆಗಳು ಬತ್ತಿ ಹೋಗುತ್ತಿವೆ.
ಹಗಲಿನಲ್ಲಿ ಪ್ರಖರ ಬಿಸಿಲು ಹಾಗೂ ರಾತ್ರಿ ವೇಳೆಯಲ್ಲಿ ಸಾಧಾರಣ ಮಳೆಯೂ ಇಲ್ಲದ ಕಾರಣ ಜಲಮೂಲಗಳು ಏಕಪ್ರಕಾರವಾಗಿ ಕುಸಿಯುತ್ತಿವೆ. ಕುಗ್ರಾಮಗಳಲ್ಲಿ ಜನ ನೀರಿಗಾಗಿ ಮೈಲುಗಟ್ಟಲೆ ಅಲೆಯುವಂತಾಗಿದ್ದರೆ, ನಗರ ಭಾಗದ ಜನರು ಟ್ಯಾಂಕರ್ ನೀರನ್ನೇ ಅವಲಂಬಿಸುವಂತಾಗಿದೆ.
ಕೈಗಾರಿಕಾ ತ್ಯಾಜ್ಯದಿಂದ ಕುತ್ತು!
ನದಿ ಬತ್ತುತ್ತಿರುವುದಕ್ಕೆ ಕೇವಲ ಬಿಸಿಲಷ್ಟೇ ಕಾರಣವಲ್ಲ, ಬದಲಾಗಿ ರಾಸಾಯನಿಕ ಘಟಕಗಳ ಬೇಜವಾಬ್ದಾರಿಯೂ ಸೇರಿದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ. ಮೂಡುಶೆಡ್ಡೆಯ ಮಂಜಲ್ಪಾದೆ ಮೂಲಕ ಮಂಗಳೂರಿನ ಎಸ್‌ಟಿಪಿ ನೀರು ನದಿಗೆ ಸೋರಿಕೆಯಾಗುತ್ತಿದೆ. ಮರವೂರಿನ ಮೂಲಕ ಸುತ್ತಮುತ್ತಲಿನ ಕೆಮಿಕಲ್ ಫ್ಯಾಕ್ಟರಿಗಳ ವಿಷಕಾರಿ ತ್ಯಾಜ್ಯ ನೇರವಾಗಿ ನದಿ ಸೇರುತ್ತಿದೆ. ಈ ಕಲುಷಿತ ನೀರಿನಿಂದಾಗಿ ನದಿಯಲ್ಲಿ ಮೀನುಗಳು ಸಾಯುತ್ತಿವೆ. ಅಷ್ಟೇ ಅಲ್ಲದೆ, ಕೆಮಿಕಲ್ ಮಿಶ್ರಿತ ನೀರು ಮಣ್ಣಿನ ಪದರಗಳಲ್ಲಿ ಸೇರಿಕೊಂಡು ಅಂತರ್ಜಲ ವೃದ್ಧಿಯಾಗದಂತೆ ತಡೆಯುತ್ತಿದೆ. ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಂಡು ನದಿಗೆ ಹರಿಯುತ್ತಿರುವ ರಾಸಾಯನಿಕ ತ್ಯಾಜ್ಯವನ್ನು ತಡೆಯಬೇಕು ಮತ್ತು ನೀರಿನ ಮಿತವ್ಯಯದ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮೂಕಪ್ರಾಣಿಗಳ ಅಳಲು
ಕಳೆದ ವರ್ಷ ಮೇ 20ರ ವೇಳೆಗೆ ಮಳೆಯಾಗಿ ಅಲ್ಪ ಸಮಾಧಾನ ನೀಡಿತ್ತು. ಆದರೆ ಈ ಬಾರಿ ಹದಿನೈದು ದಿನಗಳೊಳಗೆ ಮಳೆಯಾಗದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಲಿದೆ. ನದಿಪಾತ್ರದ ಅಡಿಕೆ ಮತ್ತು ತೆಂಗಿನ ತೋಟಗಳು ನೀರಿಲ್ಲದೆ ಒಣಗುತ್ತಿದ್ದು, ರೈತರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಹಳ್ಳಿಗಳಲ್ಲಿ ಕೆರೆ-ಕಟ್ಟೆಗಳು ಬತ್ತಿರುವುದರಿಂದ ಪ್ರಾಣಿ-ಪಕ್ಷಿಗಳು ಕುಡಿಯುವ ನೀರಿಗಾಗಿ ಪರದಾಡುತ್ತಿವೆ.
ನೀರು ಸಂಪೂರ್ಣ ಸ್ಥಗಿತ ಭೀತಿ
ಫಲ್ಗುಣಿ ನದಿ ಗಂಜಿಮಠದ ಕೈಗಾರಿಕಾ ಪ್ರದೇಶ ಹಾಗೂ `ಜಲ ಜೀವನ್ ಮಿಷನ್' ಮೂಲಕ ಹಲವು ಗ್ರಾಮಗಳಿಗೆ ಜೀವನಾಡಿಯಾಗಿದೆ. ಆದರೆ ನದಿ ಈಗ ಮರಳುಗಾಡಿನಂತೆ ಭಾಸವಾಗುತ್ತಿದ್ದು, ಮುಂದಿನ 15 ದಿನಗಳಲ್ಲಿ ಮಳೆಯಾಗದಿದ್ದರೆ ಕೈಗಾರಿಕೆ ಮತ್ತು ಗ್ರಾಮೀಣ ಮನೆಗಳಿಗೆ ಪೂರೈಕೆಯಾಗುವ ನೀರು ಸಂಪೂರ್ಣ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.
ಮಳೆ ಬರದಿದ್ದಲ್ಲಿ ಸಂಕಷ್ಟ
ಫಲ್ಗುಣಿ ನದಿಗೆ ಮಳಲಿಯಲ್ಲಿ ನಿರ್ಮಿಸಲಾದ ಕಿಂಡಿ ಅಣೆಕಟ್ಟಿನಿಂದ ಕಳೆದ 3-4 ವರ್ಷಗಳಿಂದ ಸುತ್ತಲ ಪ್ರದೇಶದಲ್ಲಿ ಉತ್ತಮ ಅಂತರ್ಜಲವಿತ್ತು. ಈ ಬಾರಿ ಅಣೆಕಟ್ಟಿನ ಕಿಂಡಿ ಮುಚ್ಚುವುದು ವಿಳಂಬವಾಗಿ ಮತ್ತು ತಾಪಮಾನ ಏರಿಕೆಯಿಂದ ನೀರಿನ ಮಟ್ಟ ಏಕಾಏಕಿಯಾಗಿ ಇಳಿಮುಖವಾಗಿದೆ. ಇನ್ನೂ ಕೆಲವು ದಿನ ಮಳೆಯಾಗದೆ ಹೋದಲ್ಲಿ ಬಾವಿಗಳು ಬತ್ತಿ ಹೋಗಿ, ಟ್ಯಾಂಕರ್ ನೀರು ಬಳಕೆಗೆ ಹೆಚ್ಚು ದಿನಗಳು ದೂರ ಉಳಿದಿಲ್ಲ ಎಂದು ಮಳಲಿಯ ನಾಗರಿಕರು ಭೀತಿ ವ್ಯಕ್ತಪಡಿಸಿದ್ದಾರೆ.