ನವದೆಹಲಿ : 'ಯೋಗ ಫಾರ್ ವೆಲ್ನೆಸ್' ಎಂಬ ಥೀಮ್ ಹೊಂದಿದ 7ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಇಂದು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಇಂದು ಮುಂಜಾನೆ ಭಾರತದ ಹಲವೆಡೆ ಸಾಮೂಹಿಕವಾಗಿ ಯೋಗಾಸನ ಮಾಡಿ ಸಾಂದರ್ಭಿಕ ಆಚರಣೆ ನಡೆಯಿತು. ಹಲವು ಗಣ್ಯರು ಮತ್ತು ಜನಸಾಮಾನ್ಯರು ಪಾರ್ಕ್ ಮತ್ತು ಮೈದಾನದಂಥ ತೆರೆದ ಪ್ರದೇಶಗಳಲ್ಲಿ ಯೋಗಾಭ್ಯಾಸದಲ್ಲಿ ಭಾಗವಹಿಸಿದರು.
ಕರೊನಾ ಹಿನ್ನೆಲೆಯಲ್ಲಿ ಮತ್ತೆ ಹಲವರು ಮನೆಯಲ್ಲೇ ಯೋಗಾಸನಗಳನ್ನು ಮಾಡಿದ್ದಾರೆ. ಸೆಲೆಬ್ರಿಟಿಗಳು ಯೋಗಾಸನ ಮಾಡುತ್ತಿರುವ ಫೋಟೋ, ವಿಡಿಯೋಗಳನ್ನು ಜಾಲತಾಣದಲ್ಲಿ ಹರಿದಾಡುತ್ತಿವೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೂ ರಾಷ್ಟ್ರಪತಿ ಭವನದ ಆವರಣದಲ್ಲಿ ಯೋಗಾಸನ ಮಾಡುತ್ತಿರುವ ಚಿತ್ರವನ್ನು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸೇನೆಯ ವಿವಿಧ ಬಟಾಲಿಯನ್ಗಳ ಸಿಪಾಯಿಗಳು ತಂತಮ್ಮ ಕಾರ್ಯಸ್ಥಳಗಳಲ್ಲೇ ಯೋಗ ದಿನವನ್ನು ಆಚರಿಸಿದರು. ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್(ಐಟಿಬಿಪಿ) ಸಿಬ್ಬಂದಿ ಲಡಾಖ್ನಲ್ಲಿ 18,000 ಅಡಿ ಎತ್ತರದಲ್ಲಿ ಗುಂಪಾಗಿ ಸೂರ್ಯನಮಸ್ಕಾರ ಮಾಡಿದ ವಿಡಿಯೋ ನೋಡಿ -
ಯೋಗ ದಿನದ ಸಂದರ್ಭಕ್ಕೆ ರಾಷ್ಟ್ರವನ್ನು ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಜಗತ್ತು ಕರೊನಾ ಸಾಂಕ್ರಾಮಿಕದೊಂದಿಗೆ ಹೋರಾಡುತ್ತಿರುವ ಈ ಸಮಯದಲ್ಲಿ, ಯೋಗವು ಒಂದು ಆಶಾಕಿರಣವಾಗಿದೆ ಎಂದಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ ಕರೊನಾ ರೋಗಿಗಳ ಉಸಿರಾಟ ವ್ಯವಸ್ಥೆಯನ್ನು ಬಲಪಡಿಸಲು ವೈದ್ಯರು ಮತ್ತು ದಾದಿಯರು ಅನುಲೋಮ ವಿಲೋಮ ಪ್ರಾಣಾಯಾಮವನ್ನು ಅಭ್ಯಾಸ ಮಾಡಿಸಿದ್ದಾರೆ ಎಂದಿದ್ದಾರೆ. (ಏಜೆನ್ಸೀಸ್)