ಕೆನಡಾ : ಕರೊನಾ ಮಹಾಮಾರಿ ಹಬ್ಬಿರುವ ಈ ಸಂದರ್ಭದಲ್ಲಿ ವೈದ್ಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರು ಬಿಡುವಿಲ್ಲದೆ ರೋಗಿಗಳ ಸೇವೆಯಲ್ಲಿ ತೊಡಗಿದ್ದಾರೆ. ಅಂಥದೇ ಒಬ್ಬ ಕಾಳಜಿವಂತ ನರ್ಸ್ ಐಸಿಯುನಲ್ಲಿರುವ ರೋಗಿಗಳಿಗಾಗಿ ಯು ಆರ್ ನಾಟ್ ಅಲೋನ್ ಎಂಬ ಗೀತೆಯನ್ನು ಹಾಡಿರುವ ವಿಡಿಯೋ ಒಂದು ಜಾಲತಾಣದಲ್ಲಿ ವೈರಲ್ ಆಗಿದೆ.
ಕೆನಡಾದ ಒಟ್ಟಾವಾ ಆಸ್ಪತ್ರೆಯಲ್ಲಿ ನರ್ಸ್ ಆಗಿರುವ ಆಮಿ-ಲಿನ್ ಹೌಸನ್, ಐಸಿಯುಗೆ ಅಡ್ಮಿಟ್ ಆಗಿರುವ ರೋಗಿಗಳಿಗೆ ಧೈರ್ಯ ತುಂಬಲು ಯು ಆರ್ ನಾಟ್ ಅಲೋನ್ ಆಂಗ್ಲಗೀತೆ ಹಾಡಿದ್ದಾರೆ. 'ಈ ಕಷ್ಟದ ದಾರಿಯಲ್ಲಿ ನೀವು ಒಬ್ಬಂಟಿಗರಲ್ಲ... ನಾವೆಲ್ಲ ನಿಮ್ಮೊಂದಿಗಿದ್ದೇವೆ' ಎಂಬ ಅರ್ಥ ಬರುವ ಸಾಲುಗಳನ್ನು ಗಿಟಾರ್ ನುಡಿಸುತ್ತಾ ಹಾಡಿರುವ ವಿಡಿಯೋವನ್ನು ಆಸ್ಪತ್ರೆಯವರು ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
ಈ ವಿಡಿಯೋದೊಂದಿಗೆ, "ಇದು ಆಮಿ-ಲಿನ್. ದ ಒಟ್ಟಾವಾ ಹಾಸ್ಪಿಟಲ್ನಲ್ಲಿ ಎಂಡೋಸ್ಕೋಪಿ ನರ್ಸ್. ಇವರನ್ನು ಇತ್ತೀಚೆಗೆ ಐಸಿಯುಗೆ ನೇಮಿಸಲಾಯಿತು. ನಮ್ಮ ರೋಗಿಗಳಿಗಾಗಿ ಸುಂದರವಾಗಿ ಹಾಡುತ್ತಿದ್ದಾರೆ" ಎಂದು ಆಸ್ಪತ್ರೆ ಆಡಳಿತ ಟಿಪ್ಪಣಿ ಬರೆದಿದೆ. ನಮ್ಮ ಉತ್ಸಾಹ ಮೂಡಿಸಿ ಧೈರ್ಯ ಹೆಚ್ಚಿಸಿದ್ದಕ್ಕೆ ಧನ್ಯವಾದ, ಆಮಿ-ಲಿನ್ ಎಂದಿದೆ. ಜೊತೆಗೆ 'ಒಟ್ಟಾಗಿ ಹೆಚ್ಚು ಶಕ್ತಿಶಾಲಿ' ಎಂಬ ಅರ್ಥ ನೀಡುವ ಸ್ಟ್ರಾಂಗರ್ಟುಗೆದರ್ ಹ್ಯಾಷ್ ಟ್ಯಾಗನ್ನು ಹಾಕಿದ್ದಾರೆ. (ಏಜೆನ್ಸೀಸ್)