ನ್ಯೂಸ್

VIDEO| ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಪಾಕ್ ಬಣ್ಣ ಬಯಲು ಮಾಡಿದ ಭಾರತದ ಪ್ರತಿನಿಧಿಗಳು..

ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಗುರುವಾರ ನಡೆದ ಬಹಿರಂಗ ಚರ್ಚೆಯಲ್ಲಿ ಪಾಕಿಸ್ತಾನ ವಿರುದ್ಧ ವಾಗ್ದಾಳಿ ನಡೆಸಿದ ಭಾರತ, ಪಾಕ್​ ಪ್ರತಿನಿಧಿಗಳು ಸ್ವಾರ್ಥಕ್ಕಾಗಿ ಕಳ್ಳಾಟವಾಡುತ್ತಿದ್ದು, ಸುಳ್ಳುಗಳನ್ನು ಪ್ರತಿಪಾದಿಸುತ್ತಾರೆ ಎಂದು ಆರೋಪಿಸಿದೆ.

ಇದಕ್ಕೂ ಮುನ್ನ ಪಾಕಿಸ್ತಾನ ವಿಶ್ವಸಂಸ್ಥೆಯ ರಾಯಭಾರಿ ಮುನೀರ್​ ಅಕ್ರಮ್​ ಅವರು ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ವಿಚಾರವನ್ನು ಎಳೆದುತಂದು ಮುಸ್ಲೀಮರನ್ನು ದಮನ ಮಾಡುವ ಭಾರತದ ಮೊದಲ ಹೆಜ್ಜೆ ಇದಾಗಿದೆ ಎಂದು ಜರಿದರು. ಮುಂದುವರಿದು ಭಾರತ, ಪಾಕ್​ ವಿರುದ್ಧ ಮತ್ತೊಂದು ಮಿಲಿಟರಿ ಸಾಹಸಕ್ಕೆ ಕೈಹಾಕಬಹುದು. ಒಂದು ವೇಳೆ ದಾಳಿ ನಡೆದರೆ ಪಾಕಿಸ್ತಾನವು ಕೂಡ ತಕ್ಕ ಉತ್ತರ ನೀಡಲಿದೆ. ಆದರೆ, ನಮಗೆ ಯುದ್ಧ ಬೇಕಾಗಿಲ್ಲ ಎಂದರು.

ಪಾಕ್​ ಮಂಡಿಸಿದ ವಾದವನ್ನು ಭಾರತ ತಿರಸ್ಕರಿಸಿ, ವಿಶ್ವಸಂಸ್ಥೆಯ ಭಾರತದ ಪ್ರತಿನಿಧಿ ಸೈಯದ್​ ಅಕ್ಬರುದ್ದೀನ್​ ಮಾತನಾಡಿ, ಪಾಕ್​ ತನ್ನ ಒಳಬೇನೆಯನ್ನು ವಾಸಿಮಾಡಿಕೊಳ್ಳಬೇಕಾಗಿದೆ. ನಿಮ್ಮ ಸೋಂಕನ್ನು ಸ್ವೀಕರಿಸಲು ಇಲ್ಲಿ ಯಾರು ಇಲ್ಲ ಎಂದು ತಿರುಗೇಟು ನೀಡಿದರು.

ಇದೇ ವೇಳೆ ಭದ್ರತಾ ಮಂಡಳಿಯನ್ನು ಟೀಕಿಸಿದ ಅಕ್ಬರುದ್ದೀನ್​, ಭದ್ರತಾ ಮಂಡಳಿ ಗುರುತು ಮತ್ತು ನ್ಯಾಯಸಮ್ಮತೆಯ ಜತೆಗೆ ಪ್ರಸ್ತುತತೆ ಮತ್ತು ಕಾರ್ಯಕ್ಷಮತೆಯ ಬಿಕ್ಕಟ್ಟು ಎದುರಿಸುತ್ತಿರುವುದನ್ನು ಒಪ್ಪಿಕೊಳ್ಳಬೇಕಾಗಿದೆ. ಜಾಗತಿಕ ಮಟ್ಟದ ಉಗ್ರಜಾಲ ತಮ್ಮ ಶಸ್ತ್ರಾಸ್ತ್ರೀಕರಣದಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿವೆ. ವಿಧ್ವಂಸಕತೆ ಆಶ್ರಯಿಕೊಂಡಿರುವವರನ್ನು ಎದುರಿಸದೇ ಇರುವುದು ಮಂಡಳಿಯ ನ್ಯೂನತೆಗಳನ್ನು ಎತ್ತಿ ತೋರಿಸುತ್ತಿದೆ ಎಂದು ಪಾಕ್​ ಹೆಸರು ಹೇಳದೆ ಮಂಡಳಿಯನ್ನು ಟೀಕಿಸಿದರು. (ಏಜೆನ್ಸೀಸ್​)