ದಾವಣಗೆರೆ: ಕರೊನಾ ಲಾಕ್ಡೌನ್ ಪರಿಣಾಮ ಕೋಳಿ ಕೂಗುವ ಮುನ್ನವೇ ಮಾಸ್ಕ್ ಧರಿಸಿ, ಇಪ್ಪತ್ತು ಜನರ ಸಮ್ಮುಖದಲ್ಲೇ ಮದುವೆ ಮಾಡಿ ಮುಗಿಸಿದ ಲಕ್ಷಾಂತರ ಉದಾಹರಣೆಗೆ ಸಾಕ್ಷಿಯಾಗಿದೆ ಜಗತ್ತು. ಇನ್ನು ಕೆಲ ಮದುವೆಯಲ್ಲಿ ವರನ ತಂದೆ-ತಾಯಿಗಳು ತಾವಿರುವಲ್ಲೇ ವಾಟ್ಸ್ಆ್ಯಪ್ ವಿಡಿಯೋ ಕಾಲ್ ಮೂಲಕ ಮದುವೆ ಕಣ್ತುಂಬಿಕೊಂಡಿದ್ದಾರೆ. ಬೆಂಗಳೂರು ಮೂಲದ ದಂಪತಿಗಳು ಗುರುಗ್ರಾಮ್ನಲ್ಲಿರುವ ಸೊಸೆಯನ್ನು ವಿಡಿಯೋ ಕಾಲ್ನಲ್ಲೇ ಮನೆ ತುಂಬಿಸಿಕೊಂಡದ್ದೂ ಅಚ್ಚರಿ ಎನಿಸಿತ್ತು!
ಈಗ ಕ್ರಿಯಾಶೀಲ ಮನಸ್ಸುಗಳು ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಮದುವೆ ಸಂಭ್ರಮವನ್ನು ಫೇಸ್ಬುಕ್ ಲೈವ್ ಮೂಲಕ ಉಣಬಡಿಸಲು ಹೊರಟಿವೆ. ಅದಕ್ಕಾಗಿ ಆಮಂತ್ರಣ ಪತ್ರವನ್ನೂ ಮುದ್ರಿಸಲಾಗಿದೆ! ಮನೆ ಮಂದಿಯೆಲ್ಲ ಹೋಗಿ ಮದುವೆ ಸಂಭ್ರಮ ಕಣ್ತುಂಬಿಕೊಳ್ಳಲು ಆಗುತ್ತಿಲ್ಲ ಎಂಬ ಭಾವನೆಯಲ್ಲಿದ್ದ ಬಂಧು-ಮಿತ್ರರ ಮನಸ್ಸಿಗೆ ತುಸು ನೆಮ್ಮದಿ ನೀಡುವ ಕೆಲಸ ಮಾಡಲಾಗಿದೆ.
ವಂಕದಾರಿ ಮತ್ತು ಚಿಂತಾಲ ಕುಟುಂಬದ ರಂಜಿತಾ ಹಾಗೂ ನವೀನ್ ಮದುವೆ ದಾವಣಗೆರೆ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಜೂ.15ರ ಬೆಳಗ್ಗೆ 9ಕ್ಕೆ ನಡೆಯಲಿದೆ. ಕೋವಿಡ್19ರ ಸರ್ಕಾರದ ಅಧಿನಿಯಮ ಪ್ರಕಾರ 50ಕ್ಕೂ ಹೆಚ್ಚು ಜನರಿಗೆ ಪ್ರತ್ಯಕ್ಷವಾಗಿ ಭಾಗವಹಿಸಲು ಅವಕಾಶವಿಲ್ಲ. ಹಾಗಾಗಿ ತಾವೆಲ್ಲರೂ ವಧು-ವರರನ್ನು ಸ್ವಗೃಹದಿಂದ ಆನ್ಲೈನ್ ಮುಖಾಂತರ ಆಶೀರ್ವದಿಸಬೇಕೆಂದು ಕೋರುತ್ತೇವೆ ಎಂಬ ಅಡಿ ಟಿಪ್ಪಣಿ ಹೊಂದಿರುವ ಲಗ್ನಪತ್ರಿಕೆಯಲ್ಲಿ ಫೇಸ್ಬುಕ್ ಲೈವ್ನ ಲಿಂಕ್ ಸಹ ನೀಡಲಾಗಿದೆ. Kishor Nanda profile ಫೇಸ್ಬುಕ್ ಲೈವ್ ಮೂಲಕ ನೀವೂ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡು ವಧು-ವರರನ್ನು ಆಶೀರ್ವದಿಸಬಹುದು.
ಇದನ್ನೂ ಓದಿರಿ ಟಿವಿಗೇ ಅಕ್ಷತೆ ಹಾಕಿ ಮಗ-ಸೊಸೆಗೆ ಆಶೀರ್ವದಿಸಿದ ತಂದೆ-ತಾಯಿ!
ಸಂಬಂಧಿಕರ ಮದುವೆ.. ಹೋಗೋಣ ಅಂದ್ರೆ ಕರೊನಾ ಭಯ ಕಾಡ್ತಿದೆ. ಅವರು ನನ್ನ ಕ್ಲೋಸ್ ಫ್ರೆಂಡ್, ನಾನು ಎರಡು ದಿನ ಮೊದಲೇ ಹೋಗಿ ಮದುವೆ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು. ನನ್ನಾಸೆಗೆ ಕರೊನಾ ಕಲ್ಲಾಕಿತು... ಹೀಗೆ ಲಕ್ಷಾಂತರ ಜನರು ಲೆಕ್ಕವಿಲ್ಲದಷ್ಟು ಬಾರಿ ಗೊಣಗಾಡಿದ್ದಾರೆ. ಈ ಸಂಬಂಧ ರಂಜಿತಾ ಹಾಗೂ ನವೀನ್ ಮದುವೆ ಹೊಸ ಭಾಷ್ಯ ಬರೆಯುತ್ತಿದೆ.