ಬೆಂಗಳೂರು : ಕರೊನಾ ಸೋಂಕಿನಿಂದ ಗುಣಮುಖರಾಗಿರುವ 75 ವರ್ಷದ ವೃದ್ಧೆಯೊಬ್ಬರು ಲವಲವಿಕೆಯಿಂದ ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಒಡನಾಡುತ್ತಿರುವ ವಿಡಿಯೋ ತುಣುಕೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ಕರೊನಾ ವಿರುದ್ಧ ಆತ್ಮಸ್ಥೈರ್ಯದಿಂದ ಹೋರಾಡುವುದಕ್ಕೆ ಹಲವರಿಗೆ ಈ ಅಜ್ಜಿ ಸ್ಪೂರ್ತಿಯಾಗಿದ್ದಾರೆ.
ಆಕ್ಸಿಜನ್ ಮಟ್ಟ ಕಡಿಮೆಯಾಗಿ ಹೆಬ್ಬಾಳ ಕೋವಿಡ್ ಆರೈಕೆ ಸೆಂಟರ್ ಸೇರಿದ್ದ ವೃದ್ಧೆಯು ಸೋಂಕಿನ ಆತಂಕ ಬಿಟ್ಟು, ಆತ್ಮಸ್ಥೈರ್ಯದಿಂದ ಗುಣಮುಖರಾಗಿದ್ದಾರೆ. ಮನೆಗೆ ಹೋಗಲು ಸಿದ್ಧರಾಗುತ್ತಿರುವಾಗ ಆರೋಗ್ಯ ಸಿಬ್ಬಂದಿಯೊಂದಿಗೆ ಉತ್ಸಾಹದ ಒಡನಾಟ ನಡೆಸಿದ್ದಾರೆ. ಈ ಸಂದರ್ಭದ ವಿಡಿಯೋವನ್ನು ಬೆಂಗಳೂರು ಕೋವಿಡ್ ವಾರ್ ರೂಮ್ನ ನೋಡಲ್ ಅಧಿಕಾರಿ ಡಾ. ಭಾಸ್ಕರ್ ರಾಜಕುಮಾರ್ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
'ಹೈಪಾಕ್ಸಿಕ್' ಸ್ಥಿತಿಯಲ್ಲಿ ಅಡ್ಮಿಟ್ ಆದರು, 'ಹೈಪರಾಕ್ಟೀವ್' ಸ್ಥಿತಿಯಲ್ಲಿ ಡಿಸ್ಚಾರ್ಜ್ ಆಗುತ್ತಿದ್ದಾರೆ ಎಂದು ರಾಜ್ಕುಮಾರ್ ಅವರು ಟಿಪ್ಪಣಿ ಬರೆದು ಸಂತೋಷ ವ್ಯಕ್ತಪಡಿಸಿದ್ದಾರೆ. ಈ ತೆರನ ಸಣ್ಣ ಸಣ್ಣ ಸಂತೋಷದ ಕ್ಷಣಗಳೇ ಬದುಕಿನಲ್ಲಿ ಮುಖ್ಯ ಎಂದಿದ್ದಾರೆ. ವೈದ್ಯರು-ದಾದಿಯರು ರೋಗಿಗಳ ಬಗ್ಗೆ ಹೊಂದಿರುವ ಆತ್ಮೀಯತೆಯನ್ನೂ ಈ ವಿಡಿಯೋದಲ್ಲಿ ಕಾಣಬಹುದು.