ಶಿವಮೊಗ್ಗ ಎಸ್ಪಿ ಕಚೇರಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ ಗೌರವ ವಂದನೆ ಸ್ವೀಕರಿಸಿದರು. 
ನ್ಯೂಸ್

ರೌಡಿಶೀಟರ್‌ಗಳ ಮೇಲೆ ನಿಗಾ ಇರಲಿ: ಎಡಿಜಿಪಿ ಹಿತೇಂದ್ರ

ನವೀನ ಬಿ.ಎಂ

ಶಿವಮೊಗ್ಗ: ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಮತ್ತು ಈದ್ ಮಿಲಾದ್ ಮೆರವಣಿಗೆಯ ಬಂದೋಬಸ್ತ್ ವ್ಯವಸ್ಥೆ, ಗಣೇಶ ಪೆಂಡಾಲ್ಗಳು, ಸೂಕ್ಷ್ಮಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಕಿಡಿಗೇಡಿಗಳು ಹಾಗೂ ರೌಡಿಶೀಟರ್‌ಗಳ ಚಟುವಟಿಕೆಗಳ ಮೇಲೆ ನಿಗಾವಹಿಸುವಂತೆ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಆರ್.ಹಿತೇಂದ್ರ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮುಂಬರುವ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಸೋಮವಾರ ಡಿಎಆರ್ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ಪೊಲೀಸ್ ಇನ್‌ಸ್ಪೆಕ್ಟರ್‌ಗಳು, ಸಿಪಿಐಗಳು ಮತ್ತು ಪಿಎಸ್‌ಐಗಳೊಂದಿಗೆ ಸಭೆ ನಡೆಸಿದ ಅವರು, ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಯಾವುದೇ ಸಮಸ್ಯೆ ಅಥವಾ ತೊಂದರೆ ಉಂಟುಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಗಾಂಜಾ ಮಾರಾಟ ಮತ್ತು ಸೇವನೆ ಮಾಡುವವರ ಬಗ್ಗೆಯೂ ಮಾಹಿತಿ ಕಲೆಹಾಕಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಅದಕ್ಕೂ ಪೂರ್ವದಲ್ಲಿ ಎಸ್ಪಿ ಕಚೇರಿಯಲ್ಲಿ ಗೌರವ ವಂದನೆ ಸ್ವೀಕರಿಸಿದರು.
ದಾವಣಗೆರೆ ಪೂರ್ವ ವಲಯ ಡಿಐಜಿ ರಮೇಶ್, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಎಎಸ್ಪಿಗಳಾದ ಅನಿಲ್ಕುಮಾರ್ ಭೂಮರಡ್ಡಿ, ಎ.ಜಿ.ಕಾರಿಯಪ್ಪ, ಡಿವೈಎಸ್ಪಿಗಳಾದ ಕೃಷ್ಣಮೂರ್ತಿ, ಬಾಬು ಆಂಜನಪ್ಪ, ಎಂ.ಸುರೇಶ್, ಗೋಪಾಲಕೃಷ್ಣ ನಾಯಕ್, ನಾಗರಾಜ್, ಕೇಶವ್, ಗಜಾನನ ವಾಮನ ಸುತಾರ, ಕೃಷ್ಣಮೂರ್ತಿ ಸೇರಿ ಜಿಲ್ಲೆಯ ಎಲ್ಲ ಇನ್‌ಸ್ಪೆಕ್ಟರ್‌ಗಳು ಹಾಗೂ ಸಿಪಿಐಗಳು ಉಪಸ್ಥಿತರಿದ್ದರು.