ನ್ಯೂಸ್

ಚುನಾವಣಾ ಪ್ರಚಾರದ ನಡುವೆಯೇ ಕಾಂಗ್ರೆಸ್​ ನಾಯಕನ ಐಷಾರಾಮಿ ಕಾರು ಎಗರಿಸಿದ ಖತರ್ನಾಕ್​ ಖದೀಮರು!

ನವದೆಹಲಿ: ಚುನಾವಣಾ ಪ್ರಚಾರದಲ್ಲಿ ಬಿಜಿಯಾಗಿದ್ದ ಕಾಂಗ್ರೆಸ್​ ನಾಯಕರೊಬ್ಬರ ಐಷಾರಾಮಿ ಕಾರನ್ನು ಖದೀಮರು ಎಗರಿಸಿರುವ ಘಟನೆ ಬುಧವಾರ (ನ.23) ರಾತ್ರಿ ನಡೆದಿದೆ.

ದೆಹಲಿಯಲ್ಲಿ ಮುಂದಿನ ವಾರ ಪಾಲಿಕೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ ನಾಯಕ ಪಂಖುರಿ ಪಾಠಕ್​ ಚುನಾವಣಾ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ಬುಧವಾರ ರಾತ್ರಿ ಕಾರನ್ನು ಪಾರ್ಕ್​ ಮಾಡಿದ್ದ ವೇಳೆ ಖದೀಮನೊಬ್ಬ ಕಿಟಕಿ ಗಾಜನ್ನು ಹೊಡೆಯುತ್ತಿರುವ ದೃಶ್ಯ ದಾಖಲಾಗಿದೆ.

ಖದೀಮರು ಸ್ಕೂಟರ್​ನಲ್ಲಿ ಬಂದು ಈ ಕೃತ್ಯ ಎಸಗಿದ್ದಾರೆ. ಕಾಂಗ್ರೆಸ್​ ನಾಯಕ ಪಾಠಕ್ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ಘಟನೆಯ ಬಗ್ಗೆ ಕಾಂಗ್ರೆಸ್​ ನಾಯಕ ಪಾಠಕ್​ ಪತ್ನಿ ಟ್ವೀಟ್​ ಮಾಡಿದ್ದು, ನಿನ್ನೆ ರಾತ್ರಿ ನಮ್ಮ ಫಾರ್ಚುನರ್ ಕಾರನ್ನು ಜನಕಪುರಿಯ ಮುಖ್ಯರಸ್ತೆಯಲ್ಲಿ ಕದ್ದೊಯ್ದಿದ್ದು, ಅರ್ಧ ಗಂಟೆ ಕಾಲ ಯಾವುದೇ ಭಯವಿಲ್ಲದೆ ಕಳ್ಳರ ತಂಡವು ಕಾರನ್ನು ತೆರೆದು ಕದಿಯಲು ಪ್ರಯತ್ನಿಸುತ್ತಿತ್ತು. ಸಾಲಿನಲ್ಲಿ ಹಲವು ಬ್ಯಾಂಕ್‌ಗಳಿದ್ದರೂ ಕಳ್ಳರು ಸುಲಭವಾಗಿ ಕಾರನ್ನು ಕದ್ದೊಯ್ದಿದ್ದಾರೆ ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿ ವಾಹನಗಳ ಕಳ್ಳತನ ಮಾಮೂಲಿಯಾಗಿದೆ ಎಂದು ದಿಲ್ಲಿಯಲ್ಲಿ ಹಲವರು ಹೇಳುತ್ತಿದ್ದಾರೆ. ತಿಹಾರ್ ಜೈಲಿನ ಮುಂಭಾಗದಲ್ಲಿಯೇ ನನ್ನ ಕಾರು ಕಳ್ಳತನವಾದರೆ, ನಗರದ ಉಳಿದ ಭಾಗಗಳ ಸ್ಥಿತಿ ಏನಾಗಬಹುದು ಎಂಬುದನ್ನು ನೀವೇ ಊಹಿಸಬಹುದು. ರಾಜಧಾನಿಯಲ್ಲಿ ಇಂತಹ ಬಹಿರಂಗ ಅಪರಾಧ ನಾಚಿಕೆಗೇಡಿನ ಸಂಗತಿ ಎಂದು ಅಸಮಾಧಾನ ಹೊರಹಾಕಿದ್ದಾರೆ. (ಏಜೆನ್ಸೀಸ್​)