ಮುಂಬೈ: ಕಾಡಿನಿಂದ ನಾಡಿಗೆ ಬಂದ ವ್ಯಾಘ್ರನನ್ನು ಮರಳಿ ಕಾಡಿಗೆ ಕಳುಹಿಸಲು ಗ್ರಾಮಸ್ಥರು ಪಟ್ಟ ಹರಸಾಹಸ ಮತ್ತು ಗ್ರಾಮಸ್ಥರ ಮೇಲೆ ದಾಳಿ ನಡೆಸಲು ಮುಂದಾದ ಹುಲಿ ಹಾಗೂ ಹುಲಿಯ ದಾಳಿಗೆ ಸಿಲುಕಿ ಉಪಾಯದ ರೀತಿಯಲ್ಲಿ ಬಚಾವ್ ಆದ ವ್ಯಕ್ತಿ, ಇಷ್ಟೂ ಸನ್ನಿವೇಶವನ್ನು ಸರೆಹಿಡಿಯಲಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.
ಮಹಾರಾಷ್ಟ್ರದ ಭಂದಾರಾ ಜಿಲ್ಲೆಯು ಕಳೆದ ಶನಿವಾರ ಮಾನವ-ಪ್ರಾಣಿ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ಅದರಲ್ಲೂ ವ್ಯಕ್ತಿಯೊಬ್ಬ ಹುಲಿ ಬಾಯಿಯಿಂದ ಉಪಾಯದಿಂದ ಪಾರಾಗಿರುವ ಸನ್ನಿವೇಶವಂತೂ ಮೈಗೂದಲು ನವಿರೇಳುವಂತೆ ಮಾಡುತ್ತದೆ.
ವಿಡಿಯೋದಲ್ಲಿ ಏನಿದೆ?: ಗ್ರಾಮಕ್ಕೆ ನುಗ್ಗಿದ ಹುಲಿಯನ್ನು ಗ್ರಾಮಸ್ಥರು ಅಟ್ಟಿಸಿಕೊಂಡು ಬರುತ್ತಾರೆ. ಇದರಿಂದ ಗಾಬರಿಗೊಂಡ ಹುಲಿ ತಪ್ಪಿಸಿಕೊಳ್ಳಲು ಮುಂದಾಗಿ ರಸ್ತೆಯನ್ನು ದಾಟಿ ಓಡುವಾಗ ಗ್ರಾಮಸ್ಥರು ಗುಂಪು ಬೆಂಬಿಡದೆ ಅಟ್ಟಿಕೊಂಡು ಹೋಗುತ್ತಾರೆ. ಈ ವೇಳೆ ಉದ್ರಿಕ್ತಕೊಂಡ ಹುಲಿ ಗ್ರಾಮಸ್ಥರೆಡೆಗೆ ತಿರುಗಿ ಬೀಳುತ್ತದೆ.
ಈ ವೇಳೆ ಚಂಗನೆ ಹಾರುವ ಹುಲಿರಾಯ ವ್ಯಕ್ತಿಯೊಬ್ಬನನ್ನು ಕೆಳಗೆ ಬೀಳಿಸುತ್ತದೆ. ಇನ್ನುಳಿದವರು ಎದ್ನೋ ಬಿದ್ನೋ ಎಂದು ಓಡುತ್ತಾರೆ. ಕೆಳಗೆ ಬಿದ್ದಾತ ಸತ್ತ ಶವದ ರೀತಿಯಲ್ಲಿ ಬಿದ್ದಿರುತ್ತಾನೆ. ಹುಲಿ ಮಾತ್ರ ಆತನ ಮೇಲೆಯೇ ಕುಳಿತಿರುತ್ತದೆ. ಈ ವೇಳೆ ಗ್ರಾಮಸ್ಥರು ಕಲ್ಲುಗಳನ್ನು ಬೀಸಿ ಒಟ್ಟಾಗಿ ಮುನ್ನುಗಿದ್ದಾಗ ಭಯಗೊಂಡ ಹುಲಿ ವ್ಯಕ್ತಿಯನ್ನು ಬಿಟ್ಟು ಓಡಿಹೋಗುತ್ತದೆ. ಹುಲಿ ಹೋಗಿದ್ದೇ ತಡ ಮಲಗಿದ್ದ ವ್ಯಕ್ತಿ ಸಾವಿನ ದವಡೆಯಿಂದ ಪಾರಾದಂತೆ ನಿಟ್ಟುಸಿರು ಬಿಟ್ಟು ಏಳುತ್ತಾನೆ.
ಘಟನೆಯಲ್ಲಿ ಒಟ್ಟು ಮೂವರು ಮಂದಿ ಗಾಯಗೊಂಡಿದ್ದಾರೆ. ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಬ್ರಹ್ಮಪುರಿ ಅರಣ್ಯ ವಲಯದಲ್ಲಿ ಶುಕ್ರವಾರ ಸಂಜೆ 42 ವರ್ಷದ ಮಹಿಳೆಯನ್ನು ಕೊಂದು ತಿಂದ ಬೆನ್ನಲ್ಲೇ ಈ ಘಟನೆ ನಡೆದಿದೆ.
ಇನ್ನು ವಿಡಿಯೋವನ್ನು ಅರಣ್ಯಾಧಿಕಾರಿ ಪರ್ವೀನ್ ಕಾಸ್ವಾನ್ ಅವರು ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಈವರೆಗೆ ಸುಮಾರು 26 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ.(ಏಜೆನ್ಸೀಸ್)