- ಗಟ್ಟಿ ನಿಲುವಿನ ನಾಯಕಿ ಪಾರ್ವತಿ ತಿರುವೋತ್ತು
- ಮಲಯಾಳಂ ಚಿತ್ರರಂಗದಲ್ಲಿನ ಅಸಮಾನತೆ ಬಗ್ಗೆ ದಿಟ್ಟತನದಿಂದ ಮಾತನಾಡಿದ್ದ ನಟಿ
- ಗಟ್ಟಿ ನಿಲುವಿನಿಂದ ನಟಿಗೆ ಸಾಕಷ್ಟು ಸಮಸ್ಯೆಗಳು, ಅದರ ಬಗ್ಗೆ ನಟಿ ಬಿಚ್ಚುಮಾತು
ಕನ್ನಡದ ‘ಮಿಲನ’, ‘ಪೃಥ್ವಿ’ ನಟಿ ಪಾರ್ವತಿ ತಿರುವೊತ್ತು ಮಲಯಾಳಂ, ತಮಿಳು, ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ನಟನೆ ಅಷ್ಟೇ ಅಲ್ಲ ಕಲಾವಿದೆಯರಿಗೆ ಅನ್ಯಾಯವಾದಾಗ ಮೊದಲು ಧ್ವನಿ ಎತ್ತುವ ಕೆಲವೇ ಕೆಲವು ನಟಿಯರಲ್ಲಿ ಪಾರ್ವತಿ ಕೂಡ ಓರ್ವರು. ಈ ಹಿಂದೆ ಮಲಯಾಳಂ ಚಿತ್ರರಂಗದಲ್ಲಿ ನಟಿಯರಿಗೆ ಆಗುತ್ತಿದ್ದ ಅನ್ಯಾಯದ ಕುರಿತು ಅವರು ಗಟ್ಟಿ ಧ್ವನಿ ಎತ್ತಿ, ಧೈರ್ಯ ಮೆರೆದಿದ್ದರು. ಈ ದಿಟ್ಟತನವೇ ಪಾರ್ವತಿಗೆ ಮುಳುವಾಗಿ, ಅದರಿಂದ ಹಲವು ಬಿಗ್‌ಬಜೆಟ್ ಸಿನಿಮಾಗಳು ತಪ್ಪಿಸಿಕೊಳ್ಳಬೇಕಾಯಿತಂತೆ. ಅಷ್ಟೇ ಅಲ್ಲದೇ, ಕೊಲೆ ಬೆದರಿಕೆಯೂ ಬಂದಿದ್ದವಂತೆ. ಈ ಬಗ್ಗೆ ಇತ್ತೀಚೆಗೆ ಅವರು ಮೌನ ಮುರಿದಿದ್ದು, ‘ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ನಾನು ಗಟ್ಟಿ ಧ್ವನಿ ಎತ್ತಿದ್ದಕ್ಕೆ, ನನ್ನನ್ನು ಚಿತ್ರರಂಗದಲ್ಲಿ ನಿರ್ಮೂಲನೆ ಮಾಡಲು ಹಲವರು ಪ್ರಯತ್ನಿಸಿದರು. ಆದರೆ, ಆ ಸಮಯದಲ್ಲಿ ಎದೆಗುಂದಲಿಲ್ಲ. ಎಲ್ಲವನ್ನೂ ಧೈರ್ಯವಾಗಿ ಎದುರಿಸಿದೆ. ಅದಕ್ಕೆ ನನ್ನ ಕುಟುಂಬವೂ ನನಗೆ ಬೆಂಬಲವಾಗಿ ನಿಂತಿತ್ತು. ಗಟ್ಟಿ ನಿಲುವಿನಿಂದ ಮಾತನಾಡಿದಕ್ಕಾಗಿಯೇ ನನಗೆ ಜೀವ ಬೆದರಿಕೆಗಳು ಬಂದಿದ್ದವು. ಆದರೆ, ನನ್ನ ಸುತ್ತ ಕುಟುಂಬ ಎಂಬ ‘ಚಕ್ರವ್ಯೂಹ’ ಇರುವ ಕಾರಣಕ್ಕೆ ಎಲ್ಲವನ್ನೂ ನಾನು ಭೇದಿಸಿದೆ’ ಎಂದು ಪಾರ್ವತಿ ತಿರುವೋತು ಹೇಳಿಕೊಂಡಿದ್ದಾರೆ. ಸದ್ಯ ಪಾರ್ವತಿ ಮಲಯಾಳಂನ ‘ಐ, ನೋಬಡಿ’ ಸೇರಿ ಇನ್ನೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. -ಏಜೆನ್ಸೀಸ್