ತೆಲಂಗಾಣದಲ್ಲಿ ಪ್ರೀತಿಯ ವಿಚಾರ ತಿಳಿಸಿದ್ದಕ್ಕೆ ಮಗಳನ್ನೇ ಕೊಂದ ತಂದೆ 
ನ್ಯೂಸ್

ಪ್ರೀತಿಯ ವಿಚಾರ ಹೇಳಿದ್ದೇ ತಪ್ಪಾಯ್ತಾ? ಹೆತ್ತ ಮಗಳನ್ನೇ ಕೊಂದ ತಂದೆ! | Telangana murder

  • ಪ್ರೀತಿಸುತ್ತಿರುವ ವಿಚಾರ ತಿಳಿಸಿದ್ದಕ್ಕೆ ಮಗಳನ್ನೇ ಕೊಂದ ತಂದೆ

  • ನವೆಂಬರ್ 25ರಂದು ನಿಗದಿಯಾಗಿದ್ದ ಯುವತಿಯ ನಿಶ್ಚಿತಾರ್ಥ

  • ತಾಯಿಯ ಸಹೋದರನ ಮಗನನ್ನು ಪ್ರೀತಿಸುತ್ತಿದ್ದ ಯುವತಿ

ಹೈದರಾಬಾದ್: ಪ್ರೀತಿಯ ವಿಚಾರವನ್ನು ಮನೆಯವರಿಗೆ ತಿಳಿಸಿದ್ದಕ್ಕೆ ತಂದೆಯೇ ಮಗಳನ್ನು ಕೊಲೆ ಮಾಡಿರುವ ಆರೋಪ ತೆಲಂಗಾಣದ ಆದಿಲಾಬಾದ್‌ನಲ್ಲಿ ಕೇಳಿಬಂದಿದೆ. 19 ವರ್ಷದ ಕಲ್ಯಾಣಿ ಎಂಬ ಯುವತಿ ಕೊಲೆಯಾಗಿದ್ದು, ಆಕೆಯ ತಂದೆ ಕೈಲಾಸ್ ಅಡೆ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಮಗಳ ನಿಶ್ಚಿತಾರ್ಥಕ್ಕೆ ಒಂದು ದಿನ ಮುನ್ನ ಈ ಘಟನೆ ನಡೆದಿದೆ.

ಪೊಲೀಸರ ಮಾಹಿತಿ ಪ್ರಕಾರ, ಕಲ್ಯಾಣಿ ತನ್ನ ತಾಯಿಯ ಸಹೋದರನ ಮಗನನ್ನು ಪ್ರೀತಿಸುತ್ತಿರುವ ವಿಚಾರವನ್ನು ನವೆಂಬರ್ 23ರ ಸಂಜೆ ಪೋಷಕರಿಗೆ ತಿಳಿಸಿದ್ದಳು. ಈ ವಿಚಾರವಾಗಿ ಮನೆಯಲ್ಲಿ ವಾಗ್ವಾದ ನಡೆದಿದ್ದು, ತಂದೆ ಕೋಪಗೊಂಡಿದ್ದ ಎನ್ನಲಾಗಿದೆ.

ಆತ್ಮಹತ್ಯೆ ಎಂದು ಬಿಂಬಿಸುವ ಯತ್ನ

ನವೆಂಬರ್ 24ರಂದು ಕೈಲಾಸ್ ತನ್ನ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಬಳಿಕ ಪ್ರಕರಣವನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದ ಎನ್ನಲಾಗಿದೆ. ಮಗಳು ಪೋಷಕರು ಆಯ್ಕೆ ಮಾಡಿದ್ದ ವರನನ್ನು ಮದುವೆಯಾಗಲು ಇಷ್ಟವಿಲ್ಲದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರಿಗೆ ತಿಳಿಸಿದ್ದ ಎನ್ನಲಾಗಿದೆ.

ನಿಶ್ಚಿತಾರ್ಥದ ಹಿಂದಿನ ದಿನ ನಡೆದ ಘಟನೆ

ಕಲ್ಯಾಣಿಗೆ ನವೆಂಬರ್ 25ರಂದು ನರ್ನೂರ್‌ನ ಯುವಕನೊಂದಿಗೆ ನಿಶ್ಚಿತಾರ್ಥ ನಿಗದಿಯಾಗಿತ್ತು. ಆದರೆ ಅದಕ್ಕೂ ಹಿಂದಿನ ದಿನವೇ ಆಕೆ ಮೃತಪಟ್ಟಿದ್ದಾಳೆ. ಸಾವಿನ ಬಳಿಕ ಕುಟುಂಬಸ್ಥರು ಅವಸರದಲ್ಲೇ ಅಂತ್ಯಕ್ರಿಯೆ ನಡೆಸಿದ್ದರಿಂದ ಅನುಮಾನ ಮೂಡಿತ್ತು.

ಗ್ರಾಮಸ್ಥರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ವಿಚಾರಣೆ ವೇಳೆ ಕೈಲಾಸ್ ತನ್ನ ಮಗಳನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಚಲಿಸುವ ರೈಲಿನಲ್ಲಿ ದೀಪ ಹಚ್ಚಿದ ಅಯ್ಯಪ್ಪ ಮಾಲಾಧಾರಿ; ವೈರಲ್ ವಿಡಿಯೋಗೆ ರೈಲ್ವೆ ಇಲಾಖೆ ಹೇಳಿದ್ದೇನು? | Worship in Train

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಘಟನೆಯ ಸಂಪೂರ್ಣ ಹಿನ್ನೆಲೆ ಹಾಗೂ ಇತರ ವಿವರಗಳ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.