ಇಸ್ಲಾಮಿನ ಪವಿತ್ರ ನಗರ ಮೆಕ್ಕಾದಲ್ಲಿ ಹೌತಿ ಬಂಡುಕೋರರ ದಾಳಿ ಭೀತಿಯಿಂದ ಮೊಳಗಿದ ಎಚ್ಚರಿಕೆ ಸೈರನ್  
ನ್ಯೂಸ್

ಮೆಕ್ಕಾದಲ್ಲಿ ಮತ್ತೆ ಮೊಳಗಿದ ಎಚ್ಚರಿಕೆ ಸೈರನ್; ಹೌತಿಗಳಿಂದ ದಾಳಿ ಭೀತಿ, ‘ಇಸ್ಲಾಮಿಕ್ ನ್ಯಾಟೋ’ಗೆ ಅಗ್ನಿಪರೀಕ್ಷೆ! Mecca Siren

ಇತಿಹಾಸದಲ್ಲೇ ಮೊದಲ ಬಾರಿಗೆ ಮೆಕ್ಕಾದಲ್ಲಿ ಮೊಳಗಿದ ಹೌತಿ ದಾಳಿಯ ಎಚ್ಚರಿಕೆ ಸೈರನ್ (Mecca Siren). ಸೌದಿ ಅರೇಬಿಯಾ ಮೇಲಿನ ಹೌತಿ ಬಂಡುಕೋರರ ಡ್ರೋನ್ ದಾಳಿ ಭೀತಿ ಮತ್ತು 'ಇಸ್ಲಾಮಿಕ್ ನ್ಯಾಟೋ' ಒಪ್ಪಂದದ ಸವಾಲುಗಳ ಸಂಪೂರ್ಣ ವರದಿ ಇಲ್ಲಿದೆ.

ಮೆಕ್ಕಾ: ಕಳೆದ ಕೆಲ ತಿಂಗಳುಗಳಿಂದ ಮಧ್ಯಪ್ರಾಚ್ಯದಲ್ಲಿ ನಿರಂತರ ರಾಜಕೀಯ ಅಸ್ಥಿರತೆ, ಸಂಘರ್ಷ ಹಾಗೂ ಮಿಲಿಟರಿ ಚಟುವಟಿಗಳು ನಡೆಯುತ್ತಿದ್ದು, ಕೇವಲ ಅಲ್ಲಿಯ ಮಾತ್ರವಲ್ಲದೇ, ಜಗತ್ತಿನ ಪ್ರತಿಯೊಬ್ಬರ ನೆಮ್ಮದಿಯನ್ನು ಭಂಗಮಾಡಿದೆ ಎನ್ನಬಹುದಾಗಿದೆ. ಹೆಚ್ಚು ಕಡೆಮೆ ಏಳು ತಿಂಗಳುಗಳಿಂದ ಇರಾನ್​ ಮತ್ತು ಅಮೆರಿಕ ನಡುವೆ ಸಂಘರ್ಷ ಮುಂದುವರಿದಿದ್ದು, ಇದರಿಂದ ಕೇವಲ ಮಿಲಿಟರಿ ಮಾತ್ರವಲ್ಲದೆ, ಜಾಗತಿಕ ಆರ್ಥಿಕ ವ್ಯವಸ್ಥೆ ಮೇಲೆ ತೀವ್ರ ಪರಿಣಾಮ ಬೀರಿದೆ.

ಈ ಸಂದರ್ಭದಲ್ಲಿ, ಸೌದಿ ಅರೇಬಿಯಾ ಹಾಗೂ ಯೆಮೆನ್​ ದೇಶದ ಹೌತಿ ಬಂಡುಕೋರರ ಕದನ ಕೂಡ ತೀವ್ರಗೊಳ್ಳುತ್ತಿದ್ದು, ಇಂದು ಸೌದಿ ಆಡಳಿತ ಎರಡನೇ ಬಾರಿ ಇಸ್ಲಾಂ ಧರ್ಮದ ಪವಿತ್ರ ಸ್ಥಳ ಮೆಕ್ಕಾದಲ್ಲಿ ಎಚ್ಚರಿಕೆ ಸೈರನ್​ (Mecca Siren) ಮೊಳಗಿಸಿದೆ.

ಒಂದು ವಾರದ ಹಿಂದಷ್ಟೆ, ಹೌತಿಗಳು ಮೆಕ್ಕಾದ ಪವಿತ್ರ ಮಸೀದಿಯನ್ನು ಗುರಿಯಾಗಿಸಿ ಡ್ರೋನ್​ ದಾಳಿ ನಡೆಸಿದಾಗ, ಇತಿಹಾಸದಲ್ಲೇ ಮೊದಲ ಬಾರಿಗೆ ಮೆಕ್ಕಾದಲ್ಲಿ ಎಚ್ಚರಿಕೆ ಸೈರಲ್​ ಅನ್ನು ಪ್ರಯೋಗಿಸಲಾಗಿತ್ತು. ಈಗ ಎರಡನೇ ಬಾರಿ ಸೈರನ್​ ಮೊಳಗಿದ್ದು, ಹೌತಿ ಮತ್ತು ಸೌದಿಗಳ ನಡುವಿನ ಸಮರ ದೀರ್ಘಕಾಲದ ವರೆಗೆ ಮುಂದುವರಿಯಲಿದೆ ಎಂದು ಹೇಳಬಹುದಾಗಿದೆ.

ದೀರ್ಘಕಾಲದ ಯುದ್ಧ!

ಯೆಮೆನ್​ನಲ್ಲಿ ಆಂತರಿಕ ಬಿಕ್ಕಟ್ಟು ತಲೆದೂರಿದ್ದ ಸಮಯದಲ್ಲಿ ಅಲ್ಲಿನ ಪ್ರದೇಶಗಳನ್ನು ಸೌದಿ ತನ್ನ ವಶಕ್ಕೆ ತೆಗೆದುಕೊಂಡಿತ್ತು, ಹಾಗೂ ಯೆಮೆನ್​ ನಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರಿಯುವಲ್ಲಿ ಸೌದಿ ಪಾತ್ರವಿತ್ತು ಎನ್ನವುದು ಹೌತಿಗಳ ವಾದವಾಗಿದೆ. ನಂತರ ಯೆಮೆನ್​ನಲ್ಲಿ ಪ್ರವರ್ಧಮಾನಕ್ಕೆ ಬಂದ ಹೌತಿ ಎಂಬ ಶಸ್ತ್ರಸಜ್ಜಿತ ಬಂಡುಕೋರರ ಗುಂಪು, ಸೌದಿ ಅರೇಬಿಯಾ ಶಿಯಾ ಮತ್ತು ಸುನ್ನಿ ಎಂಬ ಆಧಾರದಲ್ಲಿ ತಮಗೆ ಹಾಗೂ ತಮ್ಮ ದೇಶಕ್ಕೆ ಕೇಡನ್ನು ಬಗೆಯುತ್ತಿದೆ ಎಂದು ಆರೋಪಿಸಿ, ಸೇಡು ತೀರಿಸಿಕೊಳ್ಳಲು ಮುಂದಾಗಿದೆ.

ಪವಿತ್ರ ಸ್ಥಾನವೇ ಟಾರ್ಗೆಟ್​!

ಇನ್ನು ಸೆಪ್ಟೆಂಬರ್​ 16 ರಂದು ಹೌತಿಗಳು, ಸೌದಿ ಅರೇಬಿಯಾದ ಮೆಕ್ಕಾದಲ್ಲಿರುವ ಪವಿತ್ರ ಮಸೀದಿ ಮೇಲೆ ಡ್ರೋನ್​ ದಾಳಿ ನಡೆಸಿದ್ದು, ಪ್ರಪಂಚದ ಮುಸ್ಲಿಂ ದೇಶಗಳ ಕೋಪಕ್ಕೆ ಕಾರಣವಾಗಿತ್ತು. ಆದರೆ, ತಾವು ಮಸೀದಿ ಮೇಲೆ ದಾಳಿ ನಡೆಸಿಯೇ ಇಲ್ಲವೆಂದು ಹೌತಿಗಳು ವಾದ ಮಾಡಿದ್ದು, ಈ ಡ್ರೋನ್​ಅನ್ನು ಹೊಡೆದು ಹಾಕಿದ್ದಾಗಿ ಸೌದಿ ಹೇಳಿಕೊಂಡಿತ್ತು.

ಮೆಕ್ಕಾದ ಮಸೀದಿ ಮೇಲಿನ ದಾಳಿ ಇಸ್ಲಾಂ ಮೇಲಿನ ದಾಳಿ ಎಂದು ಕೆಲ ಧಾರ್ಮಿಕ ವಿಶ್ಲೇಷಕರರು ವಾದಿಸಿದ್ದು, ಪಾಕಿಸ್ತಾನದ ಪ್ರಧಾನಿ ಶೆಹಬಾಜ್​ ಶರೀಫ್​ ಆದಿಯಾಗಿ ಇನ್ನು ಹಲವು ಮುಸ್ಲಿಂ ದೇಶಗಳ ನಾಯಕರು, ಹೌತಿಗಳ ಈ ದಾಳಿಯನ್ನು ಖಂಡಿಸಿದ್ದರು.

ಕೆಲ ದಿನಗಳ ಹಿಂದೆ, ಪಾಕಿಸ್ತಾನ, ಸೌದಿ ಅರೇಬಿಯಾ ಹಾಗೂ ಟರ್ಕಿ ಇಸ್ಲಾಮಿಕ್​ ನ್ಯಾಟೋ ರೀತಿಯ ಸಂಘಟನೆ ಮಾಡಿಕೊಂಡಿದ್ದಾಗಿ ವರದಿಗಳು ಹೊರಬಿದ್ದಿದ್ದು, ಇದರ ಪ್ರಕಾರ, ತಮ್ಮ ಮೇಲೆ ಯಾವುದೇ ವಿದೇಶಿ ಶಕ್ತಿ ದಾಳಿ ಮಾಡಿದರೆ, ಪರಸ್ಪರ ಮಿಲಿಟರಿ ಸಹಾಯ ಮಾಡಬೇಕು ಎನ್ನುವುದು ಒಪ್ಪಂದವಾಗಿತ್ತು.

ಆದರೆ, ಸೌದಿ ಮೇಲೆ ನಡೆದಿರುವ ದಾಳಿಗೆ ಪಾಕಿಸ್ತಾನವಾಗಲೀ ಅಥವಾ ಟರ್ಕಿಯಾಗಲೀ ಯಾವುದೇ ಮಿಲಿಟರಿ ಸಹಕಾರ ನೀಡದೇ ಇರುವುದು ಈ ಇಸ್ಲಾಮಿಕ್​ ನ್ಯಾಟೋ ಇಲ್ಲಿಗೆ ಮುರಿದು ಬಿದ್ದಿದೆಯೇ? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ, (ಏಜೆನ್ಸೀಸ್​).